ಸಾರಾಂಶ
- ಕೆಪಿಎಸ್ ನ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸಾಮಾಜಿಕ ಪರಿಶೋಧನೆ ಮತ್ತು ಪೋಷಕರ ಸಭೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಕರ್ನಾಟಕ ಪಬ್ಲಿಕ್ ಶಾಲೆ ಪ್ರಾಥಮಿಕ ವಿಭಾಗದಲ್ಲಿ 350 ಕ್ಕೂ ಹೆಚ್ಚು ಮಕ್ಕಳು ಇರುವುದರಿಂದ ಬಿಸಿಯೂಟಕ್ಕೆ ದೊಡ್ಡದಾದ ಸಭಾಂಗಣ ಅಗತ್ಯವಿದೆ ಎಂದು ಶಾಲೆ ಎಸ್.ಡಿಎಂಸಿ ಕಾರ್ಯಾಧ್ಯಕ್ಷ ಲಕ್ಷ್ಮಣ ಶೆಟ್ಟಿ ತಿಳಿಸಿದರು.ಶುಕ್ರವಾರ ಕರ್ನಾಟಕ ಪಬ್ಲಿಕ್ ಸ್ಕೂಲಿನ ಪ್ರಾಥಮಿಕ ಶಾಲಾ ವಿಭಾಗದಲ್ಲಿ ನಡೆದ ಸಾಮಾಜಿಕ ಪರಿಶೋಧನೆ ಹಾಗೂ ಪೋಷಕರ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಾಥಮಿಕ ಶಾಲಾ ವಿಭಾಗದಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದ್ದು ಶಿಕ್ಷಕರ ಕೊರತೆಯೂ ಇದೆ. 19 ಶಿಕ್ಷಕರು ಇರಬೇಕಾದಲ್ಲಿ 13 ಶಿಕ್ಷಕರು ಮಾತ್ರ ಇದ್ದಾರೆ. 6 ಶಿಕ್ಷಕರ ಕೊರತೆ ಇದೆ. ಖಾಯಂ ಮುಖ್ಯೋಪಾಧ್ಯಾಯರು ಬೇಕಾಗಿದ್ದಾರೆ. ಕೆಪಿಎಸ್ ಶಾಲೆಗೆ ಅನುದಾನದ ಕೊರತೆ ಇದೆ ಎಂದರು. ಸಾಮಾಜಿಕ ಪರಿಶೋಧನೆ ಕಾರ್ಯಕ್ರಮದ ತಾಲೂಕು ವ್ಯವಸ್ಥಾಪಕಿ ರಶ್ಮಿತ ಮಾಹಿತಿ ನೀಡಿ, ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದೇವೆ. ಸರ್ಕಾರಿ ಶಾಲೆಗಳ ಪೋಷಕರಿಗೆ, ಮಕ್ಕಳಿಗೆ ಒಟ್ಟು 134 ಪ್ರಶ್ನೆಗಳಿವೆ. ಯಾವುದೇ ಸಮಸ್ಯೆ ಇದ್ದರೆ ಹೇಳಬಹುದು. ಮುಂದಿನ 5 ವರ್ಷಗಳಲ್ಲಿ ಎಲ್ಲಾ ಸರ್ಕಾರಿ ಶಾಲೆಗಳಿಗೆ ಸಮಗ್ರ ಶಿಕ್ಷಣ ನೀಡಲು ಕೇಂದ್ರದಿಂದ ಸಾಕಷ್ಟು ಅನುದಾನ ಬರಲಿದೆ. ಸರ್ಕಾರ ಈಗ ನೀಡುತ್ತಿರುವ ಸೌಲಭ್ಯ ಸರಿಯಾಗ ತಲುಪುತ್ತಿದೆಯೇ ಎಂಬುದನ್ನು ಪರಿಶೀಲನೆ ಮಾಡುತ್ತಿದ್ದೇವೆ. ಶಾಲೆಗಳ ಸಮಸ್ಯೆ ಸರ್ಕಾರಕ್ಕೆ ತಲುಪಿಸುತ್ತೇವೆ. ಮಕ್ಕಳಿಗೆ ಯಾವುದೇ ಕೊರತೆಯಾಗಬಾರದು ಎಂಬುದೇ ಸರ್ಕಾರದ ಉದ್ದೇಶ. ಆರೋಗ್ಯಕರ ಚರ್ಚೆ ನಡೆಯಬೇಕು ಎಂದರು. ಸಭೆಯಲ್ಲಿ ಎಸ್.ಡಿಎಂಸಿ ಸದಸ್ಯರು, ಪೋಷಕರು ಹಾಗೂ ಶಿಕ್ಷಕರು ತಮ್ಮ ಅಭಿಪ್ರಾಯ ತಿಳಿಸಿ, ಮೊಟ್ಟೆ, ತರಕಾರಿ ಘಟಕ ಗಳಿಗೆ ಇನ್ನಷ್ಟು ಅನುದಾನ ಅಗತ್ಯ. ಮಕ್ಕಳಿಗೆ ನೀಡುತ್ತಿರುವ ಯೂನಿ ಫಾರಂಗಳಲ್ಲಿ ಅಳತೆ ವ್ಯತ್ಯಾಸವಿದೆ. ಆದ್ದರಿಂದ ಮಕ್ಕಳ ಅಳತೆಗೆ ತಕ್ಕಂತೆಮಕ್ಕಳಿಗೆ ಯೂನಿಫಾರಂ ನೀಡಬೇಕು. ಅಲ್ಲದೆ 350 ಮಕ್ಕಳಿಗೆ ಈಗ ಇರುವ ಕೊಠಡಿ ಸಾಕಾಗುತ್ತಿಲ್ಲ. ಹೊಸ ಕೊಠಡಿಗಳ ಅಗತ್ಯವಿದೆ. ಮಕ್ಕಳು ಸಂಖ್ಯೆಗೆ ಅನುಗುಣವಾಗಿ ಹೊಸ ಶೌಚಾಲಯ ಅಗತ್ಯವಿದೆ. ಶುದ್ದ ಕುಡಿಯುವ ನೀರಿನ ಘಟಕ ಬೇಕಾಗಿದೆ ಎಂದರು. ಮಕ್ಕಳು ಮಾತನಾಡಿ, ಕ್ರೀಡೆ ಪರಿಕರ ಬೇಕಾಗಿದೆ. ಕ್ರೀಡೆಗಾಗಿ ಒಂದು ದಿನ ಮೀಸಲಿಡಬೇಕು. ಮಳೆಯಿಂದ ಕೆಲವು ಕೊಠಡಿ ಗಳು ಸೋರುತ್ತಿದ್ದು ದುರಸ್ತಿ ಮಾಡಿಸಿಕೊಡಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಕೆಪಿಎಸ್ ನ ಎಸ್.ಡಿಎಂಸಿ ಉಪಾಧ್ಯಕ್ಷ ಪುರುಶೋತ್ತಮ್, ತಾಲೂಕು ಬಿಸಿಎಂ ಹಾಸ್ಟೆಲ್ ವಿಸ್ತರಣಾಧಿಕಾರಿ ಧರ್ಮ ರಾಜ್, ಎಸ್.ಡಿಎಂಸಿ ಶೈಕ್ಷಣಿಕ ಸಮಿತಿ ಅಧ್ಯಕ್ಷ ಕೆ.ಎ.ಅಬೂಬಕರ್, ಕೆಪಿಎಸ್ ಪ್ರಾಂಶುಪಾಲೆ ಸರಸ್ವತಿ, ಎಸ್.ಡಿಎಂಸಿ ಸದಸ್ಯರಾದ ಎಚ್.ಎನ್.ರವಿಶಂಕರ್, ಉದಯ ಗಿಲಿ, ಮೇಘನ,ಶಕುಂತಳ,ದೇವೇಂದ್ರ, ಸಲೀಂ,ಪಪಂ ಸದಸ್ಯ ಮಹಮ್ಮದ್ ವಸೀಂ, ಶಾಲಾ ಮುಖ್ಯೋಪಾಧ್ಯಾಯಿನಿ ಗಂಗಮ್ಮ ಇದ್ದರು.