ಸಾರಾಂಶ
ಸ್ವಾಭಿಮಾನಿ ಬಣದಿಂದ ಜನಜಾಗೃತಿ । ಕನ್ನಡ ಅಭಿವೃದ್ದಿ ಪ್ರಾಧಿಕಾರದ ಆದೇಶ ಅನುಷ್ಠಾನಗೊಳಿಸಲು ಆಗ್ರಹ
ಕನ್ನಡಪ್ರಭ ವಾರ್ತೆ ಬಾಗೇಪಲ್ಲಿಅಂಗಡಿ ಮುಗ್ಗಟುಗಳ ಮೇಲೆ ಕನ್ನಡ ನಾಮಫಲಕಗಳನ್ನು ಅಳವಡಿಸುವ ಮೂಲಕ ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಬೇಕೆಂಬ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಆದೇಶವನ್ನು ಅನುಷ್ಠಾನಗೊಳಿಸಲು ಇಲ್ಲಿನ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮೀನಾ ಮೇಷ ಎಣಿಸುತ್ತಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣದ ತಾಲೂಕು ಅಧ್ಯಕ್ಷ ಬಿಟಿಸಿ ಸೀನಾ ಆಕ್ರೋಶ ವ್ಯಕ್ತಪಡಿಸಿದರು.
ಅಂಗಡಿಗಳ ಮೇಲೆ ಕಡ್ಡಾಯವಾಗಿ ಕನ್ನಡ ಭಾಷೆಯಲ್ಲಿ ನಾಮಫಲಕಗಳನ್ನು ಅಳವಡಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಹಾಗೂ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಂಗವಾಗಿ ಕರವೇ ಸ್ವಾಭಿಮಾನಿ ಬಣದ ವತಿಯಿಂದ ಜನಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದ ಅವರು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅದೇಶದಂತೆ ಶೇ.60 ರಷ್ಟು ಕನ್ನಡ ಭಾಷೆಯಲ್ಲಿ ಹಾಗೂ ಶೇ.ರಷ್ಟು ಅನ್ಯ ಭಾಷೆಯಲ್ಲಿ ನಾಮಫಲಕಗಳನ್ನು ಅಳವಡಿಸಬೇಕು ಆದರೆ ತಾಲೂಕಿನ ಬಹುತೇಕ ಅಂಗಡಿ ಮಾಲೀಕರು ಸರ್ಕಾರದ ಆದೇಶವನ್ನುಗಾಳಿಗೆ ತೂರಿ ಕನ್ನಡ ಭಾಷೆಯನ್ನು ನಿರ್ಲಕ್ಷಿಸಿ ಇಂಗ್ಲೀಷ್ ಸೇರಿದಂತೆ ಅನ್ಯಭಾಷೆಯ ನಾಮಫಲಕಗಳನ್ನು ಹೆಚ್ಚಾಗಿ ಅಳವಡಿಸಿದ್ದರೂ ಸಹ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮಾತ್ರ ಅನ್ಯ ಭಾಷೆಯ ನಾಮಫಲಕಗಳನ್ನು ತೆರೆವುಗೊಳಿಸುವ ಕ್ರಮಕ್ಕೆ ಮುಂದಾಗಿಲ್ಲ ಅಲ್ಲದೆ ಪ್ರಾಧಿಕಾರದ ಆದೇಶವನ್ನು ಅನುಷ್ಠಾನಕ್ಕೆ ತರುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.ಕನ್ನಡ ಭಾಷೆ ಉಳಿಸಿ ಬೆಳೆಸಬೇಕಾಗಿರುವುದು ಪ್ರತಿಯೊಬ್ಬ ಕನ್ನಡಿಗರ ಕರ್ತವ್ಯವಾಗಿದೆ. ಕನ್ನಡ ಭಾಷೆಗೆ ಮೊದಲ ಆದ್ಯತೆಯನ್ನು ಕನ್ನಡಿಗರಾದ ನಾವು ನೀಡಬೇಕಾಗಿದೆ. ಇತರೆ ಭಾಷೆಗಳ ಮೇಲೆ ನಮಗೆ ಯಾವುದೇ ದ್ವೇಶವಿಲ್ಲ, ಅನ್ಯಭಾಷಿಗರನ್ನು ಪ್ರೀತಿಸಿ ಗೌರವಿಸೋಣ ಆದರೆ ನಮ್ಮ ನೆಲ,ಜಲ ಬಳಸಿಕೊಂಡು ವ್ಯಾಪಾರ ವಹಿವಾಟು ನಡೆಸುವ ಅನ್ಯಭಾಷಿಕರಿಗೆ ಕನ್ನಡ ಭಾಷೆ ಕಲಿಯುವುದಲ್ಲದೆ ತಮ್ಮ ಅಂಗಡಿಗಳ ಮೇಲೆ ಕನ್ನಡ ಭಾಷೆಯಲ್ಲಿ ನಾಮಫಲಕಗಳನ್ನು ಹಾಕಬೇಕೆಂದರು.
ಫೆಬ್ರವರಿ 20 ರವರೆವಿಗೂ ಗಡುವು ನೀಡಲಾಗುವುದು ನಂತರ ಕನ್ನಡ ಭಾಷೆಯಲ್ಲಿ ನಾಮಫಲಕ ಅಳವಡಿಸದ ನಾಮಫಲಕಗಳನ್ನು ತೆರವುಗೊಳಿಸುವ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ ಅವರು ಅನ್ಯ ಭಾಷೆಯ ನಾಮಫಲಕಗಳನ್ನು ತೆರವುಗೊಳಿಸುವ ಹೋರಾಟದಲ್ಲಿ ಅನಾಹುತುಗಳು ಸಂಭವಿಸಿದರೆ ಅದಕ್ಕೆ ತಹಸೀಲ್ದಾರ್ ಮತ್ತು ಪುರಸಭೆ ಅಧಿಕಾರಿಗಳೇ ನೇರ ಹೊಣೆಗಾರರಾಗುತ್ತಾರೆ ಎಂದರು.ಇದಕ್ಕೂ ಮೊದಲು ಡಾ.ಎಚ್.ಎನ್.ವೃತ್ತದಿಂದ ಪಟ್ಟಣದ ಮುಖ್ಯರಸ್ತೆಯಲ್ಲಿ ಕಡ್ಡಾಯವಾಗಿ ಕನ್ನಡ ನಾಮಫಲಕಗಳನ್ನು ಹಾಕುವಂತೆ ಕರವೇ ಕಾರ್ಯಕರ್ತರು, ಸಾಹಿತಿಗಳು, ಕನ್ನಡ ಅಭಿಮಾನಿಗಳು ಹಾಗೂ ವಿದ್ಯಾರ್ಥಿಗಳು ಮೆರವಣಿಗೆ ನಡೆಸುವ ಮೂಲಕ ಜನಜಾಗೃತಿ ಮೂಡಿಸಿದರು. ನಂತರ ಕರವೇ ಕಾರ್ಯಕರ್ತರು ಪುರಸಭೆ ಮುಖ್ಯಾಧಿಕಾರಿ ರುದ್ರಮ್ಮ ಶರಣಪ್ಪ ರವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಾಹಿತಿ ವಲಿ ಭಾಷಾ, ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ಅಗ್ರಹಾರ ಎಸ್.ಮೋಹನ್, ತಾ.ಕಾರ್ಯದರ್ಶಿ ಜಭೀವುಲ್ಲಾ, ಯುವ ಘಟಕದ ಅಧ್ಯಕ್ಷ ಜಗಧೀಶ್ ಬಾಬು, ಮುಖಂಡರಾದ ಬಾಲರಾಜು, ಕೃಷ್ಣಪ್ಪ, ರಾಮಕೃಷ್ಣಾರೆಡ್ಡಿ, ನಾಗಿರೆಡ್ಡಿ ಸೇರಿದಂತೆ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಇದ್ದರು.ಬಾಗೇಪಲ್ಲಿಯಲ್ಲಿ ಕರವೇ ಸ್ವಾಭಿಮಾನಿ ಬಣದ ವತಿಯಿಂದ ಹಮ್ಮಿಕೊಂಡಿದ್ದ ಜನಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಕರವೇ ತಾಲೂಕು ಅಧ್ಯಕ್ಷ ಬಿಟಿಸಿ ಸೀನಾ ಚಾಲನೆ ನೀಡದರು.