ಗದಗ: ಹಿಂದಿ ಸಾಮ್ರಾಜ್ಯಶಾಹಿಗಳ ಪರವಾಗಿ ವರ್ತಿಸುತ್ತ ಕರ್ನಾಟಕ ವಿರೋಧಿ ನಿಲುವು ಹೊಂದಿರುವ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಕೇಂದ್ರ ಸರ್ಕಾರ ಕೂಡಲೇ ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಕರವೇ ಜಿಲ್ಲಾಧ್ಯಕ್ಷ ಹನುಮಂತಪ್ಪ ಅಬ್ಬಿಗೇರಿ ಮಾತನಾಡಿ, ರಾಜ್ಯ ಸರ್ಕಾರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆಗೆ ಗ್ರೇಡಿಂಗ್ ವ್ಯವಸ್ಥೆ ಜಾರಿಗೆ ತಂದ ನಿರ್ಧಾರವನ್ನು ಮರುಪರಿಶೀಲಿಸುವಂತೆ ರಾಜ್ಯಪಾಲರು ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ಈ ಪತ್ರದ ಹಿಂದೆ ಕರ್ನಾಟಕದಲ್ಲಿ ಹಿಂದಿ ಹೇರಿಕೆಯನ್ನು ಶಾಶ್ವತವಾಗಿ ನಡೆಸುವ ಹುನ್ನಾರವಿದೆ. ರಾಜ್ಯಪಾಲರು ತಮ್ಮ ಕಾರ್ಯವ್ಯಾಪ್ತಿಯನ್ನು ಮೀರಿ ಕನ್ನಡಿಗರ ಆಶೋತ್ತರಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಹೀಗಾಗಿ ಅವರು ಕರ್ನಾಟಕದಲ್ಲಿ ಒಂದೇ ಒಂದು ನಿಮಿಷವೂ ರಾಜ್ಯಪಾಲರಾಗಿ ಉಳಿಯುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ.ರಾಜ್ಯಪಾಲರು ರಾಜ್ಯದ ದಿನನಿತ್ಯದ ಆಡಳಿತದಲ್ಲಿ ಮೂಗು ತೂರಿಸುವುದು ಅತ್ಯಂತ ಆಕ್ಷೇಪಾರ್ಹವಾದ ಬೆಳವಣಿಗೆಯಾಗಿದೆ. ರಾಜ್ಯ ಸರ್ಕಾರವನ್ನು ಕರ್ನಾಟಕದ ಜನತೆ ಆಯ್ಕೆ ಮಾಡಿದ್ದಾರೆ. ನಾಡಿನ ಜನರ ಬೇಕು, ಬೇಡಗಳನ್ನು ರಾಜ್ಯ ಸರ್ಕಾರ ತೀರ್ಮಾನಿಸುತ್ತದೆ. ಹೀಗಿರುವಾಗ ಸರ್ಕಾರದ ಮುಖ್ಯಸ್ಥರಾಗಿ ಸರ್ಕಾರದ ನಾಡಪರ ಕಾಳಜಿಯ ನಿರ್ಧಾರಗಳನ್ನು ಬೆಂಬಲಿಸುವುದು ಅವರ ಕರ್ತವ್ಯವಾಗಿರುತ್ತದೆ. ಆದರೆ ಅವರು ಹಿಂದಿ ಪರವಾಗಿ ಕಾರ್ಯ ನಿರ್ವಹಿಸುತ್ತಿರುವಂತೆ ತೋರುತ್ತದೆ. ಹೀಗಾಗಿ ಅವರನ್ನು ಕೇಂದ್ರ ಸರ್ಕಾರ ಕೂಡಲೇ ವಜಾಗೊಳಿಸಬೇಕೆಂದು ಆಗ್ರಹಿಸಿದರು.ಈ ವೇಳೆ ಕಾರ್ಯಕರ್ತರಾದ ನಬಿಸಾಬ ಕಿಲ್ಲೇದಾರ, ಲೋಕೇಶ ಸುತಾರ, ಶಿವು ಮಠದ, ಚನ್ನಬಸಯ್ಯ ಗಡ್ಡದೇವರಮಠ, ಶಿವು ಎಸ್. ಮಠದ, ಬಸವರಾಜ ಹೊಗೆಸೊಪ್ಪಿನ, ಬಿ. ಹೊಗೆಸೊಪ್ಪಿನ, ಶರಣಪ್ಪ ಪುರ್ತಗೇರಿ, ಪ್ರವೀಣ ಗಾಣಗೇರ, ಗಂಗಾಧರ ಕೋಟಿಗೇರಿಮಠ, ಅರುಣ ಮೆಕ್ಕಿ, ರೆಹಮಾನ ದರ್ಗಾದ, ಗಂಗಾಧರ ಕೊಂಚಿಗೇರಿಮಠ, ಗೌಸುಸಾಬ ಶಿರಹಟ್ಟಿ, ರವಿ ಮಲ್ಲಾಡದ, ಇಸಾಕಅಹ್ಮದ ನದಾಫ, ಸಿರಾಜ ಹೊಸಮನಿ, ಮಾರುತಿ ಎಲ್. ಈಳಗೇರ, ಕೃಷ್ಣ ಎಸ್. ಲಮಾಣಿ, ಆಶಾ ಜೂಲಗುಡ್ಡ, ವಿಜಯ ಬಡಿಗೇರ, ಆಶಾ ಜೂಲಗುಡ್ಡ, ವಿನಾಯಕ ಬದಿ, ದಾವಲಸಾಬ ತಹಶೀಲ್ದಾರ, ಹುಸೇನ ಅಕ್ಕಿ ಸೇರಿದಂತೆ ಕಾರ್ಯಕರ್ತರು ಇದ್ದರು.