ಇಪ್ಪತ್ತೈದು ವರ್ಷಗಳ ಹಿಂದೆ ಈ ಪ್ರದೇಶದ ಪರಿಸ್ಥಿತಿ ಇಂದಿನಂತಿರಲಿಲ್ಲ. ಗ್ರಾಮೀಣ ಪ್ರದೇಶವಾಗಿದ್ದ ಇಲ್ಲಿ ಉತ್ತಮ ಸಂಪರ್ಕ ವ್ಯವಸ್ಥೆಯೂ ಇರಲಿಲ್ಲ. ಇಂದು ನಾವು ನೋಡುತ್ತಿರುವ ರಾಷ್ಟ್ರೀಯ ಹೆದ್ದಾರಿ-75, ಎಸ್ಟಿಆರ್ಆರ್ ಸಂಪರ್ಕ ವ್ಯವಸ್ಥೆಯೂ ಇರಲಿಲ್ಲ. ಆದರೆ, ಇಂತಹ ಪರಿಸ್ಥಿತಿಯಲ್ಲಿಯೇ ಇಲ್ಲಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುವ ದೂರದೃಷ್ಟಿಯನ್ನು ಹೊಂದಿದ್ದ ನಾಯಕತ್ವವನ್ನು ನಾವು ಸ್ಮರಿಸಬೇಕು.
ಕನ್ನಡಪ್ರಭವಾರ್ತೆ ಹೊಸಕೋಟೆ
ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಕರ್ನಾಟಕ ದೇಶದಲ್ಲೇ ಮುಂಚೂಣಿಯಲ್ಲಿದ್ದು, ಅತಿ ಹೆಚ್ಚು ವೈದ್ಯಕೀಯ ಕಾಲೇಜುಗಳು, ವೈದ್ಯಕೀಯ ಪದವಿ ಸೀಟುಗಳು, ಸ್ನಾತಕೋತ್ತರ ಸೀಟುಗಳು ಹಾಗೂ ನರ್ಸಿಂಗ್, ಫಿಸಿಯೋಥೆರಪಿ ಮತ್ತು ಅಲೈಡ್ ಹೆಲ್ತ್ ಸೈನ್ಸ್ ಕಾಲೇಜುಗಳನ್ನು ಹೊಂದಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ತಿಳಿಸಿದರು.ನಗರದ ದಂಡುಪಾಳ್ಯ ಬಳಿ ಇರುವ ಎಂವಿಜೆ ವೈದ್ಯಕೀಯ ಶಿಕ್ಷಣ ಸಂಸ್ಥೆ ಹಾಗೂ ಸಂಶೋಧನಾ ಆಸ್ಪತ್ರೆಯ ರಜತ ಮಹೋತ್ಸವ ಕಾರ್ಯಕ್ರಮ ಹಾಗೂ ನವೀಕೃತ ವೈದ್ಯಕೀಯ ಶಿಕ್ಷಣ ಸಂಸ್ಥೆ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಎಂವಿಜೆ ಸಂಸ್ಥೆಯ ಬೆಳವಣಿಗೆಯಲ್ಲಿ ಸಂಸ್ಥಾಪಕರಾದ ಡಾ. ಎಂ.ವಿ. ಜಯರಾಮನ್ ಅವರ ದೂರದೃಷ್ಟಿ ಮತ್ತು ಶಿಕ್ಷಣದ ಮೂಲಕ ಸಮಾಜದಲ್ಲಿ ಬದಲಾವಣೆ ತರಬೇಕೆಂಬ ಕನಸು ಮಹತ್ವದ ಪಾತ್ರ ವಹಿಸಿದೆ. ಟಿಸಿಎಚ್ ಶಿಕ್ಷಣ ಸಂಸ್ಥೆಯಾಗಿ ಆರಂಭವಾದ ಈ ಎಜುಕೇಷನ್ ಸೊಸೈಟಿ, ಕಾಲಕ್ರಮೇಣ ಕರ್ನಾಟಕದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿ ಬೆಳೆದಿದೆ. ವೈದ್ಯರಾಗಬೇಕೆಂಬ ಕನಸು ಹೊತ್ತ ನೂರಾರು, ಸಾವಿರಾರು ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ನೀಡುತ್ತಿರುವುದು ಸಂಸ್ಥೆಯ ಮಹತ್ವದ ಸಾಧನೆಯಾಗಿದೆ ಎಂದು ಹೇಳಿದರು.ಪ್ರತಿ ಜಿಲ್ಲೆಯಲ್ಲಿಯೂ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕೆಂಬ ಬದ್ಧತೆ ಸರ್ಕಾರಕ್ಕಿದೆ. ಖಾಸಗಿ ವೈದ್ಯಕೀಯ ಕಾಲೇಜುಗಳು ಸಾಕಷ್ಟು ಇದ್ದರೂ, ಪ್ರತಿಯೊಂದು ಜಿಲ್ಲೆಯ ಜನರಿಗೂ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸೇವೆಗಳು ಸುಲಭವಾಗಿ ಲಭ್ಯವಾಗಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ
ಎಂದು ತಿಳಿಸಿದರು. ವೈದ್ಯಕೀಯ ಶಿಕ್ಷಣದಲ್ಲಿ ಎಐ ಬಳಕೆ ಅನಿವಾರ್ಯ:ಭವಿಷ್ಯದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರದಲ್ಲಿಯೂ ಕರ್ನಾಟಕ ತನ್ನ ನಾಯಕತ್ವವನ್ನು ಉಳಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಇತರ ಸಚಿವ ಸಹೋದ್ಯೋಗಿಗಳೊಂದಿಗೆ ಸಮನ್ವಯ ಸಾಧಿಸಿ, ರಾಜ್ಯದಲ್ಲಿ ಎಐಗೆ ಸಂಬಂಧಿಸಿದ ಹಲವು ಉತ್ಕೃಷ್ಟತಾ ಕೇಂದ್ರಗಳನ್ನು ಸ್ಥಾಪಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ವೈದ್ಯಕೀಯ ಕ್ಷೇತ್ರದಲ್ಲಿಯೂ ಎಐ ಬಳಕೆಗೆ ಹೆಚ್ಚಿನ ಆದ್ಯತೆ ನೀಡಬೇಕು. ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಬೋಧಕ ಸಿಬ್ಬಂದಿಗೆ ಎಐ ತಂತ್ರಜ್ಞಾನವನ್ನು ಹೇಗೆ ಬಳಸಬೇಕು, ಅದಕ್ಕೆ ಯಾವ ರೀತಿಯ ಪ್ರಶ್ನೆಗಳನ್ನು ಕೇಳಬೇಕು, ಅದರ ಪರಿಣಾಮಗಳೇನು ಮತ್ತು ಅದರ ಮಿತಿಗಳೇನು ಎಂಬುದರ ಕುರಿತು ತರಬೇತಿ ನೀಡುವುದು ಅಗತ್ಯವಾಗಿದೆ ಎಂದು ಹೇಳಿದರು.ಪ್ರತಿ ಜಿಲ್ಲೆಗೂ ಸರ್ಕಾರಿ ವೈದ್ಯಕೀಯ ಕಾಲೇಜು?
ವೈದ್ಯಕೀಯ ಕಾಲೇಜು ಸ್ಥಾಪಿಸುವುದು ಇಂದಿನ ದಿನಗಳಲ್ಲಿ ಅತ್ಯಂತ ದುಬಾರಿ ಮತ್ತು ಸವಾಲಿನ ಕೆಲಸವಾಗಿದೆ. ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್ಎಂಸಿ) ನಿಯಮಗಳು ಕಟ್ಟುನಿಟ್ಟಾಗಿದ್ದು, ಅಗತ್ಯ ಮೂಲಸೌಕರ್ಯ, ಬೋಧಕ ಸಿಬ್ಬಂದಿ ಹಾಗೂ ಇತರ ಸೌಲಭ್ಯಗಳನ್ನು ಒದಗಿಸಲು ದೊಡ್ಡ ಪ್ರಮಾಣದ ಹೂಡಿಕೆ ಅಗತ್ಯವಿದೆ. ಹೀಗಾಗಿ ಹೊಸ ಖಾಸಗಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸುವುದು ಸುಲಭದ ಕೆಲಸವಲ್ಲ. ಕರ್ನಾಟಕದಲ್ಲಿ ವೈದ್ಯಕೀಯ ಶಿಕ್ಷಣ ಸಚಿವನಾಗಿ ದೀರ್ಘಕಾಲ ಕಾರ್ಯನಿರ್ವಹಿಸಿರುವ ಅನುಭವದಲ್ಲಿ ಈ ಕ್ಷೇತ್ರದ ಬೆಳವಣಿಗೆಯನ್ನು ಹತ್ತಿರದಿಂದ ಗಮನಿಸಿದ್ದೇನೆ. ಮೊದಲ ಬಾರಿಗೆ ಸಚಿವನಾದಾಗ ಪ್ರತಿ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸುವ ನಿರ್ಧಾರ ಕೈಗೊಂಡಿದ್ದೆ. ಆಗ ಹಣಕಾಸು ಇಲಾಖೆಯೂ ಸೇರಿದಂತೆ ಹಲವು ವಲಯಗಳಿಂದ ಇಂತಹ ಯೋಜನೆಯ ಅಗತ್ಯವೇನು ಎಂಬ ಪ್ರಶ್ನೆಗಳು ಎದುರಾಗಿದ್ದವು. ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣದ ವಿಸ್ತರಣೆ, ಸರ್ಕಾರಿ ವೈದ್ಯಕೀಯ ಕಾಲೇಜುಗಳ ಸ್ಥಾಪನೆ ಮತ್ತು ಆಧುನಿಕ ತಂತ್ರಜ್ಞಾನದ ಅಳವಡಿಕೆ ಮೂಲಕ ಭವಿಷ್ಯದ ವೈದ್ಯರನ್ನು ಸಜ್ಜುಗೊಳಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ತಿಳಿಸಿದರು.ಶಾಸಕ ಶರತ್ ಬಚ್ಚೇಗೌಡ ಮಾತನಾಡಿ ‘ವೈದ್ಯೋ ನಾರಾಯಣೋ ಹರಿ'''' ಎಂದರೆ ವೈದ್ಯರು ದೇವರಿಗೆ ಸಮಾನರು ಎಂಬ ಅರ್ಥ. ಆದರೆ ಎಂವಿಜೆ ಕಾಲೇಜಿನಲ್ಲಿ ಕೇವಲ ಭವಿಷ್ಯದ ನಾಗರಿಕರನ್ನು ರೂಪಿಸುತ್ತಿಲ್ಲ; ಬದಲಾಗಿ, ಮುಂದೊಂದು ದಿನ ಸಾವಿರಾರು ಜನರ ಬದುಕಿನಲ್ಲಿ ದೇವರಂತೆ ಕಾಣಿಸಿಕೊಳ್ಳುವ ವೈದ್ಯರನ್ನು ರೂಪಿಸಲಾಗುತ್ತಿದೆ. ಎಂ.ವಿ.ಜೆ. ಸಮೂಹ ಶಿಕ್ಷಣ ಸಂಸ್ಥೆಯು ಕಳೆದ 25 ವರ್ಷಗಳಿಂದ ಇಂತಹ ಮಹತ್ತರ ಕಾರ್ಯವನ್ನು ಮಾಡುತ್ತಾ ಬಂದಿದೆ.ಇಪ್ಪತ್ತೈದು ವರ್ಷಗಳ ಹಿಂದೆ ಈ ಪ್ರದೇಶದ ಪರಿಸ್ಥಿತಿ ಇಂದಿನಂತಿರಲಿಲ್ಲ. ಗ್ರಾಮೀಣ ಪ್ರದೇಶವಾಗಿದ್ದ ಇಲ್ಲಿ ಉತ್ತಮ ಸಂಪರ್ಕ ವ್ಯವಸ್ಥೆಯೂ ಇರಲಿಲ್ಲ. ಇಂದು ನಾವು ನೋಡುತ್ತಿರುವ ರಾಷ್ಟ್ರೀಯ ಹೆದ್ದಾರಿ-75, ಎಸ್ಟಿಆರ್ಆರ್ ಸಂಪರ್ಕ ವ್ಯವಸ್ಥೆಯೂ ಇರಲಿಲ್ಲ. ಆದರೆ, ಇಂತಹ ಪರಿಸ್ಥಿತಿಯಲ್ಲಿಯೇ ಇಲ್ಲಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುವ ದೂರದೃಷ್ಟಿಯನ್ನು ಹೊಂದಿದ್ದ ನಾಯಕತ್ವವನ್ನು ನಾವು ಸ್ಮರಿಸಬೇಕು. ಅಂದು ಬಿತ್ತಿದ ಒಂದು ಸಣ್ಣ ಆಲೋಚನೆಯ ಬೀಜ ಇಂದು ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಮತ್ತು ಲಕ್ಷಾಂತರ ಜನರಿಗೆ ವೈದ್ಯಕೀಯ ಸೇವೆ ಒದಗಿಸುವ ಬೃಹತ್ ಸಂಸ್ಥೆಯಾಗಿ ಬೆಳೆದಿದೆ. 250 ವೈದ್ಯಕೀಯ ಸೀಟುಗಳನ್ನು ಹೊಂದಿರುವುದು ಹೆಮ್ಮೆಯ ಸಂಗತಿ. ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಇದು ಗಮನಾರ್ಹ ಸಾಧನೆಯಾಗಿದೆ ಎಂದು ಹೇಳದರು.ರಾಜೀವ್ ಗಾಂಧೀ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ.ಭಗವಾನ್ ಬಿ.ಸಿ, ಎಂವಿಜೆ ಕಾಲೇಜು ಕಾರ್ಯದರ್ಶಿ ಡಾ.ಎಂಜೆ.ಮೋಹನ್, ಸಿಇಓ ಡಾ.ಧರಣಿ ಮೋಹನ್, ಪ್ರಾಂಶುಪಾಲ ಡಾ.ಜಿ.ದಯಾನಂದ್ ಹಾಜರಿದ್ದರು.