ಪೋಷಕರಿಗೂ ವಿಷಯ ತಿಳಿಸದೆ ವಿದ್ಯಾರ್ಥಿ ಶಾಲೆಯಲ್ಲಿ ನರಳಾಡಿರುವ ಬಗ್ಗೆ ಪೋಷಕರು ವಿವರಿಸಿದ್ದಾರೆ.

ಕನ್ನಡಪ್ರಭ ವಾರ್ತೆ ರಾವಂದೂರುವಸತಿ ಶಾಲೆಯ ಪ್ರಾಂಶುಪಾಲರು ಮತ್ತು ಇಲ್ಲಿನ ನರ್ಸ್ ಸೇರಿದಂತೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಆದಿತ್ಯ ಎಂಬ ವಿದ್ಯಾರ್ಥಿಯು ಜಾರಿ ಬಿದ್ದು ಕಾಲು ಮುರಿದಿರುವುದರಿಂದ ತಂದೆ ವಿಶ್ವನಾಥ್ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಪಿರಿಯಾಪಟ್ಟಣದಲ್ಲಿರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಬೆಂಗಳೂರು ಆಡಳಿತ ವ್ಯಾಪ್ತಿಯ ರಾವಂದೂರು ಹೋಬಳಿಗೆ ಸೇರಿದ ಡಾ. ಬಿಆರ್ ಅಂಬೇಡ್ಕರ್ ವಸತಿ ಶಾಲೆಯಲ್ಲಿ ಕಳೆದ ಮೂರು ದಿನಗಳ ಹಿಂದೆ ಈ ಘಟನೆ ನಡೆದಿದ್ದರೂ ಸಹ ಚಿಕಿತ್ಸೆ ಕೊಡಿಸದೆ ಪೋಷಕರಿಗೂ ವಿಷಯ ತಿಳಿಸದೆ ವಿದ್ಯಾರ್ಥಿ ಶಾಲೆಯಲ್ಲಿ ನರಳಾಡಿರುವ ಬಗ್ಗೆ ಪೋಷಕರು ವಿವರಿಸಿದ್ದಾರೆ.ತಾಲೂಕಿನ ಕೊಣಸೂರು ಗ್ರಾಮದ ವಿಶ್ವನಾಥ್ ಎಂಬುವರ ಮಗ 9ನೇ ತರಗತಿ ವಿದ್ಯಾರ್ಥಿ ಆದಿತ್ಯ ಈ ನರಕ ಅನುಭವಿಸಿದ ವಿದ್ಯಾರ್ಥಿಯಾಗಿದ್ದು, ಶಾಲೆಯ ಪ್ರಾಂಶುಪಾಲರಾದ ಲತಾ ಎಂಬುವರು ಹುಣಸೂರು ತಾಲೂಕಿನ ಚಿಲುಕುಂದ ಗ್ರಾಮದಿಂದ ಬೇರೆ ಸರ್ಕಾರಿ ಶಾಲೆಗಳಂತೆ ಬಂದು ಹೋಗುವ ಇವರು ವಸತಿಶಾಲೆಯಲ್ಲಿ ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರ ಯೋಗ ಕ್ಷೇಮದ ಬಗ್ಗೆ ಯಾವುದೇ ಜವಾಬ್ದಾರಿ ಇಲ್ಲದಂತೆ ವರ್ತಿಸುತ್ತಿದ್ದಾರೆ.ಕಳೆದ ಸಾಲಿನಲ್ಲಿ ಎಸೆಸೆಲ್ಸಿ ಫಲಿತಾಂಶದಲ್ಲಿ 15 ವಿದ್ಯಾರ್ಥಿಗಳ ಪೈಕಿ 15 ವಿದ್ಯಾರ್ಥಿಗಳು ಸಹ ಅನುತ್ತೀರ್ಣವಾಗಿದ್ದರೂ ಸಹ ತಮ್ಮ ರಾಜಕೀಯ ಪ್ರಭಾವ ಬಳಸಿಕೊಂಡು ಅವರೇ ಪ್ರಾಂಶುಪಾಲರಾಗಿ ಮುಂದುವರೆಯುತ್ತಿರುವುದಕ್ಕೆ ವಿದ್ಯಾರ್ಥಿಗಳ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ.ರಾತ್ರಿ ವೇಳೆಯಲ್ಲಿ ಯಾವುದೇ ವಿದ್ಯುತ್ ನಿಲುಗಡೆಯಾದ ಸಂದರ್ಭದಲ್ಲಿ ಕತ್ತಲಲ್ಲಿ ಹೊಡೆದಾಡಿಕೊಂಡು ರಾತ್ರಿ ಕಳೆದರೂ ಸಹ ಕೇಳುವವರೇ ಇಲ್ಲವಾಗಿದೆ ಮೇಲ್ವಿಚಾರಕನಿಗೂ ಪ್ರಾಂಶುಪಾಲರಿಗೂ ಸರಿಯಾದ ರೀತಿಯಲ್ಲಿ ಹೊಂದಾಣಿಕೆ ಇಲ್ಲದೆ ವಿದ್ಯಾರ್ಥಿಗಳಿಗೆ ತಳಪಬೇಕಾದ ಸೌಲಭ್ಯಗಳು ಸರಿಯಾದ ರೀತಿ ತಲಪದೆ ವಿದ್ಯಾಭ್ಯಾಸದ ಬಗ್ಗೆ ಗಮನವೇ ಇಲ್ಲವಾಗಿದೆ ಎಂದು ಆರೋಪಿಸಿದ್ದಾರೆ.ಶೌಚಾಲಯ ಮತ್ತು ಸ್ನಾನದ ಕೊಠಡಿಗಳನ್ನು ಸರಿಯಾದ ರೀತಿಯಲ್ಲಿ ಸ್ವಚ್ಛತೆ ಮಾಡದೇ ಇರುವುದರಿಂದ ಪಾಚಿ ಬೆಳೆದು 9ನೇ ತರಗತಿ ವಿದ್ಯಾರ್ಥಿ ಆದಿತ್ಯ ಬಲ ಕಾಲು ಮುರಿದು ಮೂರು ದಿನಗಳ ಕಾಲ ಸರಿಯಾದ ರೀತಿಯಲ್ಲಿ ಚಿಕಿತ್ಸೆ ದೊರೆಯದಿದ್ದರೂ ಈ ವಸತಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನರ್ಸ್ ಜ್ಯೋತಿ ಯಾವುದೇ ಪ್ರಾಥಮಿಕ ಚಿಕಿತ್ಸೆಯ ಪ್ರಯತ್ನವನ್ನು ಮಾಡದೆ ಬೇಜವಾಬ್ದಾರಿ ತೋರಿದ್ದು ಪ್ರತಿದಿನ ಹಾಜರ್ ಹಾಕಿ ಸುತ್ತಾಡಿ ವಾಪಸ್ ಹೋಗುವ ನರ್ಸ್ ಜ್ಯೋತಿ ಇಲ್ಲಿನ ವಿದ್ಯಾರ್ಥಿಗಳಿಗೆ ಇದ್ದರೂ ಇಲ್ಲವಾಗಿದ್ದಾರೆ.ವಿದ್ಯಾರ್ಥಿ ಆದಿತ್ಯನಿಗೆ ಒಂದು ತಿಂಗಳ ಕಾಲ ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ಸಲಹೆ ನೀಡಿದರ ಮೇರೆಗೆ ತಂದೆ ವಿಶ್ವನಾಥ್ ತಮ್ಮ ಮನೆಯಲ್ಲಿ ಚಿಕಿತ್ಸೆ ಮುಂದುವರಿಸಿದ್ದಾರೆ, ಯಾವುದೇ ಪೋಷಕರ ಸಭೆ ಕರೆಯದೆ ತಮ್ಮ ಇಚ್ಚೆಯಂತೆ ಯಾವುದೇ ನಿಯಮ ಪಾಲಿಸದೆ ಇರುವುದರಿಂದ ಇವರ ವಿರುದ್ಧ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಕಾನೂನು ಕ್ರಮ ಕೈಗೊಂಡು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಆಹಾರ ನೀಡದಿದ್ದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರನ್ನು ಒಗ್ಗೂಡಿಸಿ ಹೋರಾಟ ನಡೆಸುವುದಾಗಿ ಪೋಷಕ ವಿಶ್ವನಾಥ್ ಎಚ್ಚರಿಕೆ ನೀಡಿದ್ದಾರೆ.-------------