ಸಾರಾಂಶ
ರಾಜಾಜಿನಗರದಲ್ಲಿ ಶ್ರೀರಾಮ ಸೇವಾ ಮಂಡಳಿಯಿಂದ ಕರ್ನಾಟಕದ ಅತಿ ಎತ್ತರದ 63 ಅಡಿ ಉದ್ದದ ಶ್ರೀರಾಮಾಂಜನೇಯ ಪ್ರತಿಮೆಯ ಪ್ರತಿಷ್ಠಾಪನಾ ಮಹೋತ್ಸವವು ಅ.21 ರಿಂದ ಮೂರು ದಿನ ನೆರವೇರಲಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜಾಜಿನಗರದ ಶ್ರೀರಾಮ ಮಂದಿರದಲ್ಲಿ ಶ್ರೀರಾಮ ಸೇವಾ ಮಂಡಳಿಯಿಂದ ಕರ್ನಾಟಕದ ಅತಿ ಎತ್ತರದ 63 ಅಡಿ ಉದ್ದದ ಶ್ರೀರಾಮಾಂಜನೇಯ ಪ್ರತಿಮೆಯ ಪ್ರತಿಷ್ಠಾಪನಾ ಮಹೋತ್ಸವವು ಅ.21 ರಿಂದ ಮೂರು ದಿನ ನೆರವೇರಲಿದೆ. 23ಕ್ಕೆ ವಿದ್ಯುಕ್ತವಾಗಿ ಮೂರ್ತಿ ಪ್ರತಿಷ್ಠಾಪಿಸಲಾಗುತ್ತದೆ ಎಂದು ಮಾಗಡಿ ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಡಾ। ಎಚ್.ಎಂ.ಕೃಷ್ಣಮೂರ್ತಿ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.21ರ ಸಂಜೆ ಗಣಪತಿ ಪೂಜೆ, ವಿದ್ವಜ್ಜನ ಪ್ರಾರ್ಥನೆ, ದೇವತಾ ಪ್ರಾರ್ಥನೆ, ಕಳಸ ಪ್ರತಿಷ್ಠಾಪನೆ ನಡೆಯಲಿದೆ. 22ರಂದು ಬೆಳಗ್ಗೆ 63 ಅಡಿಯ ಶ್ರೀರಾಮಾಂಜನೇಯ ಚರಪ್ರತಿಷ್ಠಾನ ಪೂಜೆ, ಹೋಮ ಸಂಕಲ್ಪವು ಸಿದ್ಧಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಪ್ರಾರಂಭವಾಗಲಿದೆ. 23ರಂದು ಬೆಳಗ್ಗೆ 11ಕ್ಕೆ ಶ್ರೀರಾಮಾಂಜನೇಯ ಚರ ಪ್ರತಿಷ್ಠಾಪನೆ ಮತ್ತು ಲೋಕರ್ಪಣೆಯನ್ನು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಅದಿ ಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ನೆರವೇರಿಸಲಿದ್ದಾರೆ ಎಂದು ವಿವರಿಸಿದರು.
ಶ್ರೀರಾಮ ಸೇವಾ ಮಂಡಳಿ ಅಧ್ಯಕ್ಷ ಕೆ.ಎಸ್.ಶ್ರೀಧರ್ ಮಾತನಾಡಿ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವರಾದ ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ಸಚಿವರಾದ ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಷ್ಟ್ರಿಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಚಿತ್ರನಟರಾದ ಶಿವರಾಜ್ ಕುಮಾರ್, ರಮೇಶ್ ಅರವಿಂದ್, ಶ್ರೀಮುರುಳಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಸ್ವಾಗತ ಸಮಿತಿಯಲ್ಲಿ ಸಂಸದ ಪಿ.ಸಿ.ಮೋಹನ್, ಶಾಸಕ ಎಸ್.ಸುರೇಶ್ ಕುಮಾರ್, ಮುಖಂಡ ಆರ್.ವಿ.ಹರೀಶ್ ಸಹಕಾರ ನೀಡುತ್ತಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ। ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನೆರವೇರುತ್ತಿದೆ ಎಂದು ತಿಳಿಸಿದರು.ಬಿಬಿಎಂಪಿ ಮಾಜಿ ಸದಸ್ಯ ಮೋಹನ್ ಕುಮಾರ್, ಶಿಲ್ಪಿ ಜೀವನ್ ಶಿವಮೊಗ್ಗ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.