ಸಾರಾಂಶ
ಕನ್ನಡಪ್ರಭ ವಾರ್ತೆ ಟಿ. ನರಸೀಪುರ
ಪುರಸಭೆಯಲ್ಲಿ ನಡೆದಿರುವ ತೆರಿಗೆ ವಂಚನೆಗೆ ಪ್ರಕರಣದ ಆರೋಪಿ ಟಿ.ಎಂ. ನಂಜುಂಡಸ್ವಾಮಿ ಹಾಗೂ ಅವರ ಕುಟುಂಬದವರ ಹೆಸರಲ್ಲಿರುವ ಅಕ್ರಮ ಆಸ್ತಿಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡು, ಪ್ರಕರಣವನ್ನು ಸಿಐಡಿಗೆ ವಹಿಸುವಂತೆ ಒತ್ತಾಯಿಸಿ ಕರ್ನಾಟಕ ದಸಂಸ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟಿಸಿದರು.ಸಮಿತಿಯ ರಾಜ್ಯ ಸಂಚಾಲಕ ಎಸ್. ಚಂದ್ರಶೇಖರ್ ಮಾತನಾಡಿ, ಇ-ಆಸ್ತಿ ಮಾಡುವಾಗ ದಾಖಲಾತಿ ಸ್ವೀಕೃತ ವಿಭಾಗದಿಂದ ಕೇಸ್ ವರ್ಕರ್ ಹಾಗೂ ಕಂದಾಯ ಅಧಿಕಾರಿ ಸೇರಿದಂತೆ ಎಲ್ಲರೂ ಪ್ರತಿಯೊಂದು ದಾಖಲೆಗಳನ್ನು ಪರಿಶೀಲಿಸಿ ಎಲ್ಲಾ ದಾಖಲಾತಿಗಳು ಕ್ರಮಬದ್ಧವಾಗಿದ್ದಲ್ಲಿ ಹಂತ ಹಂತವಾಗಿ ಸಂಬಂಧಿಸಿದವರ ಬಳಿ ಇ-ಆಸ್ತಿ ಕಡತಗಳು ಟಿಪ್ಪಣಿ ವರದಿಯಾಗಿ ಅಂತಿಮವಾಗಿ ಮುಖ್ಯಾಧಿಕಾರಿಗಳ ಸಹಿಗಾಗಿ ಹೋಗಬೇಕಿದೆ. ಆದರೆ ಇದ್ಯಾವುದನ್ನು ಪರಿಶೀಲಿಸದೆ ಸಾವಿರಾರು ಇ-ಆಸ್ತಿ ಖಾತೆ ಆಗಿದೆ ಎಂದು ಮುಖ್ಯಾಧಿಕಾರಿಗಳು ಜಾಲ ತಾಣದಲ್ಲಿ ಮಾತನಾಡಿರುವ ಬಗ್ಗೆ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ರೈತ ಮುಖಂಡರಾದ ಮಹದೇವಸ್ವಾಮಿ, ಮಹದೇವ್ ಮಾತನಾಡಿ, ಪ್ರಕರಣವನ್ನು ಸಿಐಡಿ ತನಿಖೆಗೆ ಒಳಪಡಿಸಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದರು.ಜಿಲ್ಲಾ ಸಂಚಾಲಕ ರಾಜು, ಮರಿಸ್ವಾಮಿ, ಪ್ರಭಾಕರ್, ಮನೋಜ್ ಕುಮಾರ್, ಗೋವಿಂದರಾಜು, ರಾಚಪ್ಪ, ಕುಮಾರ್, ಶಿವಕುಮಾರ್, ಗವಿಸಿದ್ದಯ್ಯ, ಪರಶುರಾಮ್, ಶಿವಕುಮಾರ್, ಜಯಣ್ಣ, ಮಹೇಶ್, ಸ್ವಾಮಿ, ಎಂ.ಕೆ. ಮಲ್ಲೇಶ್, ಕೃಷ್ಣ, ರವಿಕಾಂತ್, ಶಿವು, ಅರ್ಜುನ್, ಚಿನ್ನಸ್ವಾಮಿ , ಮಹಾದೇವಸ್ವಾಮಿ, ರೈತ ಮುಖಂಡರಾದ ರಾಮಕೃಷ್ಣ, ಚೆಲುವರಾಜು, ಶಿವನಂಜು, ರಾಜು, ಶಾಂತನಾಗರಾಜು , ಶಂಕರೇಗೌಡ, ಸೋಮಣ್ಣ, ಜಗದೀಶ್, ವೆಂಕಟೇಶ್ ಭಾಗವಹಿಸಿದ್ದರು.