ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಕೃಷಿ ಉತ್ಪನ್ನಗಳ ಮೇಲಿನ ಜಿ.ಎಸ್.ಟಿ ತೆರಿಗೆ ರದ್ದು ಮಾಡಿ. ರೈತ ಉತ್ಪಾದಕ ಸಂಸ್ಥೆಗಳ ವರಮಾನ ತೆರಿಗೆ ಹಾಗೂ ಎಂ.ಐ.ಟಿ ತೆರಿಗೆ ಕಾನೂನು ರದ್ದುಪಡಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಅವರು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಒತ್ತಾಯಿಸಿದರು.ಕರ್ನಾಟಕ ರಾಜ್ಯ ಮುಕ್ತ ವಿವಿಯ ಘಟಿಕೋತ್ಸವ ಸಭಾಂಗಣದಲ್ಲಿ ಶುಕ್ರವಾರ ಆರಂಭವಾದ ಮೈಸೂರು ಸಂಗೀತ ಸುಗಂಧ ಉತ್ಸವ ಕಾರ್ಯಕ್ರಮ ಉದ್ಘಾಟನೆಗೆ ಆಗಮಿಸಿದ್ದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ರೈತರು ಮನವಿ ಸಲ್ಲಿಸಿದರು.
ಕೇಂದ್ರ ಸರ್ಕಾರ ರೈತರು ಖರೀದಿಸುವ ಕೃಷಿ ಬಳಕೆಗೆ ಹನಿ ನೀರಾವರಿ ಕೊಳವೆಗಳು. ಕೀಟನಾಶಕಗಳು. ರಸಗೊಬ್ಬರಗಳ ಮೇಲೆ ಜಿ.ಎಸ್.ಟಿ ವಿಧಿಸಿರುವುರಿಂದ ರೈತರು ಖರೀದಿಸುವ ಬೆಲೆ ಹೆಚ್ಚಾಗುತ್ತಿದೆ. ಇದು ರೈತರಿಗೆ ನುಂಗಲಾರದ ತುತ್ತಾಗಿದೆ. ಇದನ್ನು ರದ್ದುಪಡಿಸಬೇಕು. ಹಲವು ವರ್ಷಗಳಿಂದ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ರೈತರ ಬಗ್ಗೆ ವಿಶೇಷ ಕಾಳಜಿವಹಿಸಿ ಕೃಷಿ ಉಪಕರಣ ಖರೀದಿಯ ಮೇಲೆ ಜಿ.ಎಸ್.ಟಿ ರದ್ದುಪಡಿಸಬೇಕು ಎಂದರು.ಕೃಷಿ ಸಾಲಕ್ಕೆ ರೈತರ ಸಿಬಿಲ್ ಸ್ಕೋರ್ ಪರಿಗಣಿಸುವ ನಿಯಮ ರದ್ದು ಮಾಡಿ ಹಾಗೂ ಕೃಷಿ ಸಾಲ ವಸೂಲಿಗೆ ಬ್ಯಾಂಕುಗಳು ರೈತರ ಜಮೀನು ಮುಟ್ಟುಗೂಲು ಹಾಕಿ ಹರಾಜು ಮಾಡುವ ಸರ್ಫೈಸಿ ಕಾಯ್ದೆ ರದ್ದುಪಡಿಸಬೇಕು. ಮಹಿಳಾ ಸ್ವ ಸಹಾಯ ಸಂಘಗಳಿಗೆ ಖಾಸಗಿ ಫೈನಾನ್ಸ್ ಗಳು ವಸೂಲಾತಿ ಕಿರುಕುಳ ನೀಡುತ್ತಿರುವುದಕ್ಕೆ ಕಡಿವಾಣ ಹಾಕಲು ಕಠಿಣ ಕಾನೂನು ಜಾರಿಗೆ ತರಬೇಕು ಎಂದು ಅವರು ಆಗ್ರಹಿಸಿದರು.
ಕೇಂದ್ರ ಸರ್ಕಾರ ರೈತ ಉತ್ಪಾದಕ ಸಂಸ್ಥೆಗಳನ್ನು ಆರಂಭಿಸಲು ಪ್ರೋತ್ಸಾಹ ಧನ ನೀಡಿದೆ. ಆದರೆ ಈ ಉತ್ಪಾದಕ ಸಂಸ್ಥೆಗೆ ವರಮಾನ ತೆರಿಗೆ ವಿಧಿಸಲಾಗುತ್ತಿದೆ ಹಾಗೂ ಎಂಎಟಿ ತೆರಿಗೆ ಪಾವತಿಸಬೇಕು ಎಂದು ಈಗಾಗಲೇ ನೂರಾರು ರೈತ ಉತ್ಪಾದಕ ಸಂಸ್ಥೆಗಳಿಗೆ ವಸುಲಾತಿ ನೋಟಿಸ್ ವರಮಾನ ತೆರಿಗೆ ಇಲಾಖೆಯಿಂದ ನೀಡಲಾಗಿದೆ. ಇದರಿಂದ ನಷ್ಟದಲ್ಲಿರುವ ಸಂಕಷ್ಟ ಅನುಭವಿಸುತ್ತಿರುವ ರೈತ ಉತ್ಪಾದಕ ಸಂಸ್ಥೆಗಳ ಮುಖ್ಯಸ್ಥರು ಚಿಂತಾ ಕ್ರಾಂತರಾಗಿದ್ದಾರೆ ಎಂದು ಅವರು ಹೇಳಿದರು.ಕೇಂದ್ರ ಸರ್ಕಾರ ರೈತರಿಂದಲೇ ರೈತರಿಗಾಗಿ ಆರಂಭಿಸಿರುವ ಸಹಕಾರ ಸಂಘಗಳಿಗೆ ತೆರಿಗೆ ವಿನಾಯಿತಿ ನೀಡಿದೆ. ಆದರೆ ರೈತರಿಂದಲೇ ರೈತರಿಗಾಗಿ ಕಂಪನಿ ಕಾಯ್ದೆಯಲ್ಲಿ ಆರಂಭವಾಗಿರುವ ಉತ್ಪಾದಕ ಸಂಸ್ಥೆಗಳಿಗೆ
ಎಂಎಟಿ ತೆರಿಗೆ, ವರಮಾನ ತೆರಿಗೆ ವಿಧಿಸುವುದು ನ್ಯಾಯವಲ್ಲ. ಕೇಂದ್ರ ಸರ್ಕಾರ ಆದೇಶದಲ್ಲಿ ಸಹಕಾರ ಸಂಘಗಳು ಹಾಗೂ ರೈತ ಉತ್ಪಾದಕ ಸಂಸ್ಥೆಗಳು ಸಮಾನಾಂತರ ಅವಕಾಶ ಹೊಂದಬಹುದು ಎಂದು ಕೇಂದ್ರ ಸರ್ಕಾರದ ಆದೇಶದಲ್ಲಿ ತಿಳಿಸಿದ್ದಾರೆ. ಈ ಎಲ್ಲಾ ವಿಚಾರ ಗಮನಿಸಿ ಹತ್ತು ವರ್ಷಗಳ ಕಾಲ ತೆರಿಗೆ ವಸುಲಾತಿ ಕಾನೂನು ರದ್ದು ಮಾಡುವ ಆದೇಶ ಹೊರಡಿಸಬೇಕು ಎಂದು ಅವರು ಕೋರಿದರು.ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ರೈತ ಮುಖಂಡರಾದ ಹತ್ತಳ್ಳಿ ದೇವರಾಜ್, ಬರಡನಪುರ ನಾಗರಾಜ್, ಮಾರ್ಬಳ್ಳಿ ನೀಲಕಂಠಪ್ಪ, ಕುರುಬೂರು ಸಿದ್ದೇಶ್, ಲಕ್ಷ್ಮಿಪುರ ವೆಂಕಟೇಶ್, ಅಂಬಳೆ ಮಂಜುನಾಥ್, ಕುರುಬೂರು ಪ್ರದೀಪ್, ಕಾಟೂರ್ ನಾಗೇಶ್, ಬನ್ನೂರ್ ಸೂರಿ ಇದ್ದರು.
ಈ ವೇಳೆ ಮಾತನಾಡಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಕೃಷಿ ಚಟುವಟಿಕೆ ಮಾಡುವ ರೈತರಿಗೆ ಯಾವುದೇ ತೆರಿಗೆ ವಿಧಿಸಿಲ್ಲ. ಜಿ.ಎಸ್.ಟಿ ಬಗ್ಗೆ ನಿಮ್ಮ ರಾಜ್ಯದ ಸಚಿವರು ಮಂಡಳಿ ಸಭೆಯಲ್ಲಿ ಚರ್ಚಿಸಲು ಅವಕಾಶವಿದೆ. ರೈತ ಉತ್ಪಾದಕ ಸಂಸ್ಥೆಗಳಿಗೆ ಎಂಎಟಿ ತೆರಿಗೆ ಕೂಡ ಇಲ್ಲ. ಇಲಾಖೆ ವತಿಯಿಂದ ನೋಟಿಸ್ ಬಂದಿದ್ದರೆ, ದಾಖಲಾತಿ ಕೊಡಿ ಎಂದಾಗ ನಮ್ಮ ಸಂಸ್ಥೆ ರೈತಮಿತ್ರ ರೈತ ಉತ್ಪಾದಕ ಸಂಸ್ಥೆಗೆ ಬಂದಿದೆ ಎಂದು ಕುರುಬೂರು ಶಾಂತಕುಮಾರ್ ಹೇಳಿದಾಗ ಕೇಂದ್ರ ಸಚಿವರು ಪಕ್ಕದಲ್ಲಿದ್ದ ಜಿಲ್ಲಾಧಿಕಾರಿ ಶ್ರೀನಿವಾಸ್ ರೆಡ್ಡಿ ಅವರಿಗೆ ಅದರ ಪ್ರತಿಯನ್ನು ನನಗೆ ಕಳುಹಿಸುವಂತೆ ಸೂಚಿಸಿದರು.ಮೈಕ್ರೋ ಫೈನಾನ್ಸ್ ಗಳು ಮಹಿಳಾ ಸಂಘಗಳಿಗೆ ಸಾಲ ನೀಡಿ ಕಿರುಕುಳ ನೀಡುತ್ತಿದ್ದಾರೆ ಇದು ತಪ್ಪಿಸಲು ವಿಶೇಷ ಕಠಿಣ ಕಾನೂನು ಜಾರಿ ತರುವ ಬಗ್ಗೆ ಚಿಂತನೆ ನಡೆಸುವುದಾಗಿ ಅವರು ತಿಳಿಸಿದರು.