ಗ್ರಾಮೀಣ ಮಹಿಳೆಯರಲ್ಲಿ ಸಾಂಕ್ರಾಮಿಕವಲ್ಲದ ಕಾಯಿಲೆಯ ಏರಿಕೆ?

| Published : Jan 22 2025, 12:33 AM IST

ಸಾರಾಂಶ

ಪ್ರಸ್ತುತ ಅಧ್ಯಯನವನ್ನು ರಾಜ್ಯದ ಚಿತ್ರದುರ್ಗ ಮತ್ತು ಚಾಮರಾಜನಗರ ಹಿಂದುಳಿದ ಜಿಲ್ಲೆಗಳಲ್ಲಿ ಕಳೆದ 4 ವರ್ಷಗಳಿಂದ ಸಂಶೋಧನೆ ನಡೆಸಲಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಹಿಂದುಳಿದ ಜಿಲ್ಲೆಗಳ ಗ್ರಾಮೀಣ ಮಹಿಳೆಯರಲ್ಲಿ ಸಾಂಕ್ರಾಮಿಕವಲ್ಲದ ಕಾಯಿಲೆಗಳಲ್ಲಿ ಆತಂಕಕಾರಿ ಏರಿಕೆಯನ್ನು ಇತ್ತೀಚಿನ ಸಂಶೋಧನೆ ಬಹಿರಂಗಪಡಿಸಿದೆ.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ನಡೆದ ಪಿಎಚ್.ಡಿ. ಅಧ್ಯಯನವು ಗ್ರಾಮೀಣ ಮಹಿಳೆಯರಲ್ಲಿ ಸಾಂಕ್ರಾಮಿಕವಲ್ಲದ ರೋಗಗಳ (ಎನ್‌ ಸಿಡಿ) ಎಂದರೆ ಹೃದಯ ಸಂಬಂಧ, ಕ್ಯಾನ್ಸರ್, ಸ್ಥೂಲ ಕಾಯತೆ ಮುಂತಾದ ಆರೋಗ್ಯ ಸಮಸ್ಯೆಗಳು ವೇಗವಾಗಿ ಹೆಚ್ಚಾಗುತ್ತಿದೆ ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ.

ರಾಜ್ಯ ಮುಕ್ತ ವಿವಿ ಅರ್ಥಶಾಸ್ತ್ರ ವಿಭಾಗದಲ್ಲಿ ಡಾ. ಶಿವಕುಮಾರಸ್ವಾಮಿ ಅವರ ಮಾರ್ಗದರ್ಶನದಲ್ಲಿ ಎಸ್. ಜ್ಯೋತಿಲಕ್ಷ್ಮಿ ಅವರು ನಡೆಸಿದ ಸಂಶೋಧನೆಯಿಂದ ಮೇಲಿನ ಅಂಶಗಳು ತಿಳಿದು ಬಂದಿದೆ.

ಪ್ರಸ್ತುತ ಅಧ್ಯಯನವನ್ನು ರಾಜ್ಯದ ಚಿತ್ರದುರ್ಗ ಮತ್ತು ಚಾಮರಾಜನಗರ ಹಿಂದುಳಿದ ಜಿಲ್ಲೆಗಳಲ್ಲಿ ಕಳೆದ 4 ವರ್ಷಗಳಿಂದ ಸಂಶೋಧನೆ ನಡೆಸಲಾಗಿದೆ. ಗ್ರಾಮೀಣ ಭಾಗದಲ್ಲಿ ಬದಲಾಗುತ್ತಿರುವ ಸಾಮಾಜಿಕ, ಆರ್ಥಿಕ, ಪರಿಸರ ಮತ್ತು ಜೀವನಶೈಲಿಯ ಇದಕ್ಕೆ ಮುಖ್ಯ ಕಾರಣ ಎನ್ನುವುವು ಸಂಶೋಧಕರ ಅಭಿಪ್ರಾಯ.

ಆಯ್ದ ಮಹಿಳೆಯರಿಂದ ಸಂಗ್ರಹಿಸಿದ ಮಾಹಿತಿಯು ಪ್ರಕಾರ ಯುವತಿಯರಲ್ಲೆ ರಕ್ತಹೀನತೆ (ಶೇ.12), ಅಧಿಕ ರಕ್ತದೊತ್ತಡ(ಶೇ.8), ಮಧುಮೇಹ (ಶೇ.10), ಋತುಸ್ತ್ರಾವ ಸಂಬಂಧಿತ (ಶೇ.12), ಮೂತ್ರಪಿಂಡ ಕಾಯಿಲೆಗಳು (ಶೇ.4) ಮತ್ತು ದೀರ್ಘಕಾಲದ ಉಸಿರಾಟದ ಕಾಯಿಲೆಗಳ (ಶೇ.7) ಪ್ರಕರಣಗಳಲ್ಲಿ ಗಮನಾರ್ಹ ಹೆಚ್ಚಳವನ್ನು ಈ ಪಿಎಚ್.ಡಿ ಸಂಶೋಧನೆ ಬಹಿರಂಗಪಡಿಸಿದೆ. ಅದರಲ್ಲೂ ಚಾಮರಾಜನಗರ ಜಿಲ್ಲೆಯಲ್ಲೂ ಈ ಸಮಸ್ಯೆ ಹೆಚ್ಚಳವಾಗಿದೆ ಎನ್ನುವದು ಸಂಶೋಧಕರ ಅಭಿಪ್ರಾಯವಾಗಿದೆ.

ಮಾನಸಿಕ ಆರೋಗ್ಯ ಸಮಸ್ಯೆ ಸಹ ನಿಧಾನವಾಗಿ ಏರುಗತಿಯತ್ತ ಸಾಗುತ್ತಿದೆ. ವಿಶೇಶವಾಗಿ ಋತುಸ್ಥಂಬ ವಯಸ್ಸಿಗೆ ಹತ್ತಿರವಾಗುತ್ತಿರುವ (ಮೆನೊಫಾಸ್) ಮಹಿಳೆಯರಲ್ಲಿ ಮೇಲಿನ ಆರೋಗ್ಯ ಸಮಸ್ಯೆಗಳು ತೀವ್ರವಾಗಿ ಏರಿಕೆ ಆಗುತ್ತಿರುವುದನ್ನು ಅಧ್ಯಯನವು ಗಮನಿಸಿದೆ.

ಅನಾರೋಗ್ಯಕರ ಆಹಾರ ಪದ್ಧತಿ, ಸೀಮಿತ ದೈಹಿಕ ಚಟುವಟಿಕೆ ಮತ್ತು ಹೆಚ್ಚಿನ ಮಾನಸಿಕ ಒತ್ತಡ, ಅಸಮರ್ಪಕ ವೈದ್ಯಕೀಯ ಸೌಲಭ್ಯಗಳು, ಅರಿವಿನ ಕೊರತೆ, ಸಾಮಾಜಿಕ- ಸಾಂಸ್ಕೃತಿಕ ಅಡೆತಡೆಗಳು, ವಾಯುಮಾಲಿನ್ಯ, ಕಳಪೆ ನೈರ್ಮಲ್ಯ ಮತ್ತು ಅಪಾಯಕಾರಿ ವಸ್ತುಗಳಿಗೆ ಒಡ್ಡಿಕೊಳ್ಳುವುದರಿಂದ ಗ್ರಾಮೀಣ ಮಹಿಳೆಯರ ಆರೋಗ್ಯದಲ್ಲಿ ಗಣನೀಯ ಬದಲಾವಣೆ ಉಂಟಾಗುತ್ತಿರುವುದು ಕಂಡು ಬಂದಿದೆ ಎನ್ನುತ್ತದೆ ವರದಿ.

----

ಬಾಕ್ಸ್...

ಸಂಶೋಧನೆಯ ಶಿಫಾರಸುಗಳು

- ಸಮುದಾಯ ಆಧಾರಿತ ಆರೋಗ್ಯ ಜಾಗೃತಿ ಕಾರ್ಯಕ್ರಮಗಳನ್ನು ಜಾರಿಗೊಳಿಸುವುದು

- ಆರೋಗ್ಯಕರ ಜೀವನಶೈಲಿ ಮತ್ತು ರೋಗಗಳ ಆರಂಭಿಕ ಪತ್ತೆಯ ಬಗ್ಗೆ ಅರಿವಿನೊಂದಿಗೆ ಮಹಿಳೆಯರನ್ನು ಸಬಲೀಕರಣಗೊಳಿಸುವುದು.

- ಹಿಂದುಳಿದ ಜಿಲ್ಲೆಗಳಲ್ಲಿ ಪ್ರಾಥಮಿಕ ಆರೋಗ್ಯ ವ್ಯವಸ್ಥೆಗಳನ್ನು ಬಲಪಡಿಸುವುದು

- ಗ್ರಾಮೀಣ ಪ್ರದೇಶಗಳಲ್ಲಿ ಕೈಗೆಟುಕುವ ಮತ್ತು ಗುಣಮಟ್ಟದ ಆರೋಗ್ಯ ಸೇವೆಗಳಿಗೆ ಖಾಸಗಿಯವರ ಪ್ರವೇಶಕ್ಕೆ ಅವಕಾಶ - ಗ್ರಾಮೀಣ ಮಹಿಳೆಯರ ವಿಶಿಷ್ಟ ಆರೋಗ್ಯ ಅಗತ್ಯಗಳನ್ನು ಪರಿಹರಿಸಲು ಲಿಂಗ-ಸೂಕ್ಷ್ಮ ಆರೋಗ್ಯ ನೀತಿಗಳನ್ನು ಪ್ರತಿಪಾದಿಸುವುದು.

----

ಕೋಟ್...

ಫೋಟೋ- 21ಎಂವೈಎಸ್30

---

ಗ್ರಾಮೀಣ ಮಹಿಳೆಯರಲ್ಲಿ ಹೆಚ್ಚುತ್ತಿರುವ ಎನ್‌ ಸಿಡಿ ಹೊರೆಯನ್ನು ಪರಿಹರಿಸಲು ಉದ್ದೇಶಿತ ಮಧ್ಯಸ್ಥಿಕೆಗಳ ತುರ್ತು ಅಗತ್ಯವನ್ನು ಈ ಅಧ್ಯಯನವು ಎತ್ತಿ ತೋರಿಸುತ್ತದೆ. ಆರೋಗ್ಯ ಸೇವೆಯನ್ನು ಸುಧಾರಿಸುವುದು, ಆರೋಗ್ಯ ಸಾಕ್ಷರತೆಯನ್ನು ಉತ್ತೇಜಿಸುವುದು ಮತ್ತು ಸಾಮಾಜಿಕ- ಪರಿಸರ ಸವಾಲುಗಳನ್ನು ಎದುರಿಸುವುದು ಇತ್ಯಾದಿ ಅಂಶಗಳು ಗ್ರಾಮೀಣ ಸಮುದಾಯಗಳಲ್ಲಿ ಉತ್ತಮ ಆರೋಗ್ಯ ಫಲಿತಾಂಶಗಳನ್ನು ಖಚಿತಪಡಿಸಿಕೊಳ್ಳಲು ನಿರ್ಣಾಯಕವಾಗಿದೆ.

- ಡಾ.ಎಸ್. ಜ್ಯೋತಿಲಕ್ಷ್ಮಿ, ಸಂಶೋಧಕಿ

----

ಫೋಟೋ- 21ಎಂವೈಎಸ್31

ವಿಮಾ ಸೌಲಭ್ಯವಿದ್ದರೂ ಅದು ಉಪಯೋಗಕ್ಕೆ ಬರುತ್ತಿಲ್ಲ. ರೋಗಿಗಳ ಸ್ವಂತ ಹಣ ಹೆಚ್ಚಾಗಿ ಖರ್ಚಾಗುತ್ತಿದೆ. ವಿಮೆಯ ವ್ಯಾಪ್ತಿಗೆ ಇನ್ನು ಹಲವಾರು ಎನ್.ಸಿ.ಡಿ. ಕಾಯಿಲೆಗಳನ್ನ ಒಳಪಡಿಸಬೇಕಿದೆ. ಗ್ರಾಮೀಣ ಭಾಗದಲ್ಲಿ ಮಹಿಳಾ ವೈದ್ಯರ ಅಗತ್ಯೆತೆ ಬಹಳ ಹೆಚ್ಚಾಗಿದೆ. ಮಹಿಳೆಯರ ಆರ್ಥೀಕ ಸ್ಥಿತಿಯು ಉತ್ತಮಗೊಳ್ಳಬೇಕಿದೆ.

- ಡಾ. ಶಿವಕುಮಾರಸ್ವಾಮಿ, ಪಿಎಚ್.ಡಿ ಮಾರ್ಗದರ್ಶಕರು