24ರಂಂದು ಕವಿವಿ 74ನೇ ಘಟಿಕೋತ್ಸವ, ಮೂವರಿಗೆ ಗೌಡಾ

| Published : Sep 22 2024, 01:49 AM IST

24ರಂಂದು ಕವಿವಿ 74ನೇ ಘಟಿಕೋತ್ಸವ, ಮೂವರಿಗೆ ಗೌಡಾ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್‌ ಅಧ್ಯಕ್ಷತೆಯ ಘಟಿಕೋತ್ಸವದಲ್ಲಿ ಬಾಗಲಕೋಟೆಯ ಜಮಖಂಡಿಯ ತಾಲೂಕಿನ ಮರೇಗುದ್ದಿ ಗ್ರಾಮದ ನಿರುಪಾಧೀಶ ಸ್ವಾಮೀಜಿ, ಆಕ್ಸ್‌ಫರ್ಡ್‌ ಸಮೂಹ ಶಿಕ್ಷಣ ಸಂಸ್ಥಾಪಕ ಎಸ್.ಎನ್. ವೆಂಕಟಲಕ್ಷ್ಮಿ ನರಸಿಂಹರಾಜು ಹಾಗೂ ಆಂಧ್ರಪ್ರದೇಶದ ಮೂಲದ, ಸದ್ಯ ಹುಬ್ಬಳ್ಳಿ ನಿವಾಸಿ, ಹುಬ್ಬಳ್ಳಿಯ ರೈಲು ನಿಲ್ದಾಣ ಸೇರಿದಂತೆ ಬೃಹತ್ ರೈಲು ಯೋಜನೆಗಳ ಗುತ್ತಿಗೆದಾರ ಡಾ. ವೆಂಕಟ ಸತ್ಯ ವರಪ್ರಸಾದ ಚಿಗುರುಪಾಟಿ ಅವರಿಗೆ ಡಾಕ್ಟರ್ ಆಫ್ ಸೈನ್ಸ್ ಗೌರವ ಪದವಿ ಪ್ರದಾನ ಮಾಡಲಾಗುತ್ತಿದೆ

ಧಾರವಾಡ

ಕರ್ನಾಟಕ ವಿಶ್ವವಿದ್ಯಾಲಯದ 74ನೇ ಘಟಿಕೋತ್ಸವ ಸೆ. 24ರಂದು ನಡೆಯಲಿದ್ದು, ಈ ಘಟಿಕೋತ್ಸವದಲ್ಲಿ ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುವುದು ಎಂದು ಕುಲಪತಿ ಪ್ರೊ. ಕೆ.ಬಿ. ಗುಡಸಿ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್‌ ಅಧ್ಯಕ್ಷತೆಯ ಘಟಿಕೋತ್ಸವದಲ್ಲಿ ಬಾಗಲಕೋಟೆಯ ಜಮಖಂಡಿಯ ತಾಲೂಕಿನ ಮರೇಗುದ್ದಿ ಗ್ರಾಮದ ನಿರುಪಾಧೀಶ ಸ್ವಾಮೀಜಿ, ಆಕ್ಸ್‌ಫರ್ಡ್‌ ಸಮೂಹ ಶಿಕ್ಷಣ ಸಂಸ್ಥಾಪಕ ಎಸ್.ಎನ್. ವೆಂಕಟಲಕ್ಷ್ಮಿ ನರಸಿಂಹರಾಜು ಹಾಗೂ ಆಂಧ್ರಪ್ರದೇಶದ ಮೂಲದ, ಸದ್ಯ ಹುಬ್ಬಳ್ಳಿ ನಿವಾಸಿ, ಹುಬ್ಬಳ್ಳಿಯ ರೈಲು ನಿಲ್ದಾಣ ಸೇರಿದಂತೆ ಬೃಹತ್ ರೈಲು ಯೋಜನೆಗಳ ಗುತ್ತಿಗೆದಾರ ಡಾ. ವೆಂಕಟ ಸತ್ಯ ವರಪ್ರಸಾದ ಚಿಗುರುಪಾಟಿ ಅವರಿಗೆ ಡಾಕ್ಟರ್ ಆಫ್ ಸೈನ್ಸ್ ಗೌರವ ಪದವಿ ಪ್ರದಾನ ಮಾಡಲಾಗುತ್ತಿದೆ ಎಂದರು.

ಕವಿವಿ ಗೌರವ ಡಾಕ್ಟರೇಟ್‌ಗಾಗಿ ಬಂದಿದ್ದ 17 ಅಭ್ಯರ್ಥಿಗಳ ಪೈಕಿ ತಜ್ಞರ ಸಮಿತಿಯು ಮೂವರ ಹೆಸರು ಅಂತಿಮಗೊಳಿಸಿ ರಾಜ್ಯಪಾಲರಿಗೆ ಕಳುಹಿಸಲಾಗಿತ್ತು. ರಾಜ್ಯಪಾಲರು ಮೂವರಿಗೆ ಅನುಮೋದನೆ ನೀಡಿದ್ದಾರೆ ಎಂದರು.

25 ಸಾವಿರ ಪದವಿ:

ಇಲ್ಲಿಯ ಕವಿವಿ ಗಾಂಧಿಭವನದಲ್ಲಿ ಬೆಳಗ್ಗೆ 11ಕ್ಕೆ ಕರ್ನಾಟಕ ವಿಜ್ಞಾನ ಹಾಗೂ ತಂತ್ರಜ್ಞಾನ ಅಕಾಡೆಮಿ ಅಧ್ಯಕ್ಷ ಪ್ರೊ. ಎಸ್. ಅಯ್ಯಪ್ಪನ್ ಘಟಿಕೋತ್ಸವ ಭಾಷಣ ಮಾಡಲಿದ್ದು, ಮುಖ್ಯ ಅತಿಥಿಯಾಗಿ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಪಾಲ್ಗೊಳ್ಳಲಿದ್ದಾರೆ. ಘಟಿಕೋತ್ಸವದಲ್ಲಿ 25,425 ವಿದ್ಯಾರ್ಥಿಗಳು ಪದವಿ ಸ್ವೀಕರಿಸಲಿದ್ದು, 120 ವಿದ್ಯಾರ್ಥಿಗಳು 278 ಚಿನ್ನದ ಪದಕ ಸ್ವೀಕರಿಸಲಿದ್ದಾರೆ. ಉಳಿದಂತೆ 52 ವಿದ್ಯಾರ್ಥಿಗಳಿಗೆ ಪಾರಿತೋಷಕ, 73 ವಿದ್ಯಾರ್ಥಿಗಳಿಗೆ ಶಿಷ್ಯವೇತನ, 82 ರ‍್ಯಾಂಕ್‌ಗಳನ್ನು ನೀಡಲಿದ್ದು, ಒಟ್ಟು 327 ವಿದ್ಯಾರ್ಥಿಗಳು ಪ್ರಶಸ್ತಿ ಸ್ವೀಕರಿಸಲಿದ್ದಾರೆ. 149 ಪಿಎಚ್‌ಡಿ ಪದವಿ, ಒಂದು ಎಂಫಿಲ್ ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು 4067, ಸ್ನಾತಕ ಪದವಿಯನ್ನು 21,139 ಕಾನೂನು ಪದವಿ 47, ಡಿಪ್ಲೊಮಾ 22 ಪದವಿ ಪ್ರದಾನ ನೆರವೇರಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕುಲಸಚಿವರಾದ ಡಾ. ಎ. ಚನ್ನಪ್ಪ, ಪ್ರೊ. ನಿಜಲಿಂಗಪ್ಪ ಮಟ್ಟಿಹಾಳ, ಹಣಕಾಸು ಅಧಿಕಾರಿ ಡಾ. ಸಿ. ಕೃಷ್ಣಮೂರ್ತಿ ಇದ್ದರು.