ಕರ್ನಾಟಕ ವಿವಿ ಕುಲಪತಿ: ಒಂದು ಹುದ್ದೆಗೆ 191 ಅರ್ಜಿಗಳು ಸಲ್ಲಿಕೆ

| Published : May 08 2025, 12:31 AM IST

ಕರ್ನಾಟಕ ವಿವಿ ಕುಲಪತಿ: ಒಂದು ಹುದ್ದೆಗೆ 191 ಅರ್ಜಿಗಳು ಸಲ್ಲಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಮೈಸೂರು, ಗುಲ್ಬರ್ಗ ಮತ್ತು ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಿಂದ 25ರಿಂದ 30 ವರ್ಷಗಳಿಗೂ ಹೆಚ್ಚು ಬೋಧನಾ ಅನುಭವ ಹೊಂದಿರುವ ಹಲವಾರು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಶೋಧನಾ ಸಮಿತಿ ಮುಂದಿನ 10 ದಿನಗಳಲ್ಲಿ ಸರ್ಕಾರಕ್ಕೆ ಮೂರು ಹೆಸರುಗಳನ್ನು ಪ್ರಸ್ತಾಪಿಸುವ ಸಾಧ್ಯತೆಯಿದೆ ಮತ್ತು ಹದಿನೈದು ದಿನಗಳಲ್ಲಿ ಹೊಸ ಉಪಕುಲಪತಿ ನೇಮಿಸಬಹುದು ಎಂದು ಮೂಲಗಳು ''ಕನ್ನಡಪ್ರಭ''ಕ್ಕೆ ತಿಳಿಸಿವೆ.

ಧಾರವಾಡ: ರಾಜ್ಯದ ಎರಡನೇ ಅತ್ಯಂತ ಹಳೆಯ ವಿಶ್ವವಿದ್ಯಾಲಯವಾಗಿರುವ ಕರ್ನಾಟಕ ವಿವಿ ಕುಲಪತಿ ಸ್ಥಾನ ತೆರವಾಗಿ ಏಳು ತಿಂಗಳುಗಳು ಕಳೆದಿದ್ದು, ಹೊಸ ಕುಲಪತಿ ನೇಮಿಸಲು ರಾಜ್ಯ ಸರ್ಕಾರ ಅಂತಿಮವಾಗಿ ಶೋಧನಾ ಸಮಿತಿ ರಚಿಸಿದೆ. ಈ ಸಮಿತಿಯ ಮುಂದೆ ಕುಲಪತಿ ಹುದ್ದೆಗಾಗಿ 191 ಅರ್ಜಿಗಳು ಬಂದಿವೆ.

ಅರ್ಜಿಗಳನ್ನು ಪರಿಶೀಲಿಸಲು ಮತ್ತು ಮೂವರು ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಲು ರಾಜ್ಯ ಸರ್ಕಾರ ಏ. 24ರಂದು ಶೋಧನಾ ಸಮಿತಿ ರಚಿಸಿದೆ. ಅವರಲ್ಲಿ ಸರ್ಕಾರವು ಹೊಸ ಉಪಕುಲಪತಿಯನ್ನು ಕೆಲವು ದಿನಗಳಲ್ಲಿಯೇ ನೇಮಿಸಲಿದೆ ಎಂಬ ಮಾಹಿತಿ ಇದೆ.

ಶೋಧನಾ ಸಮಿತಿ: ಗುಲ್ಬರ್ಗ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಪ್ರೊ. ಎ.ಎಚ್. ರಾಜಾಸಾಬ್ ಅವರನ್ನು ಶೋಧನಾ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಸಮಿತಿಯ ಇತರ ಮೂವರು ಸದಸ್ಯರಲ್ಲಿ ಪ್ರೊ. ಕೈಲಾಶ್ ಚಂದ್ರ ಶರ್ಮಾ (ಯುಜಿಸಿ ನಾಮನಿರ್ದೇಶಿತ), ಡಾ. ಟಿ.ಆರ್. ಥಾಪಕ್ (ರಾಜ್ಯಪಾಲರ ನಾಮನಿರ್ದೇಶಿತ), ಡಾ. ವಿ.ಜಿ. ತಲಾವರ್ (ಸಿಂಡಿಕೇಟ್ ನಾಮನಿರ್ದೇಶಿತ) ಮತ್ತು ಉನ್ನತ ಶಿಕ್ಷಣ ಇಲಾಖೆಯ ಉಪ ಕಾರ್ಯದರ್ಶಿ ಶಶಿಧರ್ ಜಿ. ಅವರನ್ನು ಸಂಚಾಲಕರನ್ನಾಗಿ ನೇಮಿಸಲಾಗಿದೆ.

ಕುಲಪತಿ ಹುದ್ದೆಗೆ ಬಂದ ಅರ್ಜಿಗಳನ್ನು ಪರಿಶೀಲಿಸಿ, ಮುಚ್ಚಿದ ಲಕೋಟೆಯಲ್ಲಿ ಮೂರು ಹೆಸರುಗಳನ್ನು ಸರ್ಕಾರಕ್ಕೆ ಶಿಫಾರಸು ಮಾಡುವ ಕಾರ್ಯವನ್ನು ಶೋಧನಾ ಸಮಿತಿಗೆ ವಹಿಸಲಾಗಿದೆ.

191 ಅರ್ಜಿಗಳು: ಶೋಧನಾ ಸಮಿತಿಯು ಕುಲಪತಿ ಹುದ್ದೆಗೆ 191 ಅರ್ಜಿಗಳನ್ನು ಸ್ವೀಕರಿಸಿದೆ. ಒಟ್ಟು ಅರ್ಜಿಗಳಲ್ಲಿ 30ಕ್ಕೂ ಹೆಚ್ಚು ಅರ್ಜಿಗಳು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಪ್ರಾಧ್ಯಾಪಕರಿಂದ ಬಂದಿವೆ.

ಮೈಸೂರು, ಗುಲ್ಬರ್ಗ ಮತ್ತು ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಿಂದ 25ರಿಂದ 30 ವರ್ಷಗಳಿಗೂ ಹೆಚ್ಚು ಬೋಧನಾ ಅನುಭವ ಹೊಂದಿರುವ ಹಲವಾರು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಶೋಧನಾ ಸಮಿತಿ ಮುಂದಿನ 10 ದಿನಗಳಲ್ಲಿ ಸರ್ಕಾರಕ್ಕೆ ಮೂರು ಹೆಸರುಗಳನ್ನು ಪ್ರಸ್ತಾಪಿಸುವ ಸಾಧ್ಯತೆಯಿದೆ ಮತ್ತು ಹದಿನೈದು ದಿನಗಳಲ್ಲಿ ಹೊಸ ಉಪಕುಲಪತಿ ನೇಮಿಸಬಹುದು ಎಂದು ಮೂಲಗಳು ''''''''ಕನ್ನಡಪ್ರಭ''''''''ಕ್ಕೆ ತಿಳಿಸಿವೆ.

1949ರಲ್ಲಿ ಸ್ಥಾಪನೆಯಾದಾಗಿನಿಂದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ 17 ಉಪಕುಲಪತಿಗಳು ಸೇವೆ ಸಲ್ಲಿಸಿದ್ದಾರೆ. ಆದಾಗ್ಯೂ ಇಲ್ಲಿಯ ವರೆಗೆ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದ ಯಾರನ್ನೂ ನೇಮಿಸಲಾಗಿಲ್ಲ. ಈ ಬಾರಿ ವಿಸಿ ಹುದ್ದೆಗೆ ಸರ್ಕಾರ ಎಸ್‌ಸಿ ಅಥವಾ ಎಸ್‌ಟಿ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕೆಂಬ ಒತ್ತಾಯವನ್ನು ಕವಿವಿ ಎಸ್‌ಸಿ-ಎಸ್‌ಟಿ ಸ್ನಾತಕೋತ್ತರ ಶಿಕ್ಷಕರ ಸಂಘವು ಸರ್ಕಾರಕ್ಕೆ ಒತ್ತಾಯಿಸಿದೆ. ಕುಲಪತಿ ಹುದ್ದೆಗೆ 9 ಹಿರಿಯ ದಲಿತ ಪ್ರಾಧ್ಯಾಪಕರು ಅರ್ಹರಿದ್ದು, ಈ ಬಾರಿಯ ಕುಲಪತಿ ಹುದ್ದೆಗೆ ಯಾರನ್ನಾದರೂ ನೇಮಿಸಬೇಕು ಎಂದು ಈ ಸಂಘವು ಬಲವಾಗಿ ಒತ್ತಾಯಿಸಿದೆ.

ಮೂರು ವರ್ಷಗಳ ಕಾಲ ಪ್ರೊ. ಕೆ.ಬಿ. ಗುಡಸಿ ಸೇವೆ ಸಲ್ಲಿಸಿದ್ದರು. ಸೆ. 30ರಂದು ಉಪಕುಲಪತಿ ಹುದ್ದೆ ಖಾಲಿಯಾಗಿತ್ತು. ನವೆಂಬರ್‌ನಲ್ಲಿ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಅವರು, ಹುದ್ದೆ ಭರ್ತಿ ಮಾಡಲು ಆತುರವಿಲ್ಲ. ವಿಶ್ವವಿದ್ಯಾಲಯವನ್ನು ಮುನ್ನಡೆಸಲು ಸಮರ್ಥವಾದ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಅನುಭವ ಹೊಂದಿರುವ ಅಭ್ಯರ್ಥಿಗಳನ್ನು ಹುಡುಕಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದರು. ಅದರ ಪ್ರಕಾರ, ಕಳೆದ 7 ತಿಂಗಳಲ್ಲಿ ಮೂವರು ಕುಲಪತಿಗಳನ್ನು ಪ್ರಭಾರಿಯಾಗಿ ನೇಮಿಸಲಾಯಿತು ಮತ್ತು ಪ್ರಸ್ತುತ ಪ್ರೊ. ಜಯಶ್ರೀ ಎಸ್. ಪ್ರಭಾರಿ ಕುಲಪತಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.