ಧಾರವಾಡ:

ಇಲ್ಲಿಯ ಕರ್ನಾಟಕ ವಿಶ್ವವಿದ್ಯಾಲಯದ 75ನೇ ವಾರ್ಷಿಕ ಘಟಿಕೋತ್ಸವ ಏ. 23ರಂದು ಬೆಳಗ್ಗೆ 11ಕ್ಕೆ ಗಾಂಧಿ ಭವನದಲ್ಲಿ ನಡೆಯಲಿದೆ ಎಂದು ಕುಲಪತಿ ಪ್ರೊ. ಎ.ಎಂ. ಖಾನ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್‌ ಘಟಿಕೋತ್ಸವದ ಅಧ್ಯಕ್ಷತೆ ವಹಿಸಲಿದ್ದು ಇಸ್ರೋ ನಿಕಟಪೂರ್ವ ಅಧ್ಯಕ್ಷ ಪ್ರೊ. ಎ.ಎಸ್. ಕಿರಣಕುಮಾರ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ ಆಗಮಿಸಲಿದ್ದಾರೆ ಎಂದರು.

ಘಟಿಕೋತ್ಸವದಲ್ಲಿ ಸುವರ್ಣ ಪದಕ, ಪಾರಿತೋಷಕ, ಶಿಷ್ಯವೇತನ ಮತ್ತು ರ‍್ಯಾಂಕ್‌ ನೀಡಲಾಗುತ್ತಿದೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಒಟ್ಟು 270 ವಿದ್ಯಾರ್ಥಿಗಳ ಪೈಕಿ 113 ವಿದ್ಯಾರ್ಥಿಗಳು ಉಪಸ್ಥಿತಿಯಲ್ಲಿ ಸುವರ್ಣ ಪದಕ ಪಡೆಯಲಿದ್ದಾರೆ. 57 ವಿದ್ಯಾರ್ಥಿಗಳು ಪಾರಿತೋಷಕ ಹಾಗೂ 78 ವಿದ್ಯಾರ್ಥಿಗಳು ಶಿಷ್ಯವೇತನ ಪಡೆಯಲಿದ್ದಾರೆ. 69 ವಿದ್ಯಾರ್ಥಿಗಳು ರ‍್ಯಾಂಕ್‌ ಪಡೆಯಲಿದ್ದು 252 ಸಂಶೋಧಕರಿಗೆ ಪಿಎಚ್‌.ಡಿ ಪ್ರದಾನ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

24030 ಪದವಿ ವಿತರಣೆ:


ಪದವಿಯ ವಿವಿಧ ವಿಷಯಗಳಲ್ಲಿ ಒಟ್ಟು 24,030 ವಿದ್ಯಾರ್ಥಿಗಳು ಘಟಿಕೋತ್ಸವದಲ್ಲಿ ಪದವಿ ಪಡೆಯಲಿದ್ದಾರೆ. ಹಾಗೆಯೇ, ಸ್ನಾತಕೋತ್ತರದ ಕಲೆ, ವಾಣಿಜ್ಯ, ಸಮಾಜ ವಿಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ, ಕಾನೂನು ಮತ್ತು ನಿರ್ವಹಣೆ, ಶಿಕ್ಷಣ ಮತ್ತು ದೈಹಿಕ ಶಿಕ್ಷಣ ವಿಷಯಗಳ ಒಟ್ಟು 4129 ವಿದ್ಯಾರ್ಥಿಗಳು ಉಪಸ್ಥಿತಿ ಮತ್ತು ಅನುಪಸ್ಥಿತಿಯಲ್ಲಿ ಪದವಿ ಪಡೆಯಲಿದ್ದಾರೆ. ವಿವಿಧ ವಿಷಯಗಳಲ್ಲಿ 69 ವಿದ್ಯಾರ್ಥಿಗಳು ಸ್ನಾತಕೋತ್ತರ ಡಿಪ್ಲೊಮಾ ಪದವಿ ಪಡೆಯಲಿದ್ದಾರೆ ಎಂದರು.

ಗೌಡಾ ಪ್ರದಾನ:

ವಿವಿಯಿಂದ ಈ ವರೆಗೆ ಘಟಿಕೋತ್ಸವದಲ್ಲಿ 104 ಗಣ್ಯರಿಗೆ ಗೌರವ ಡಾಕ್ಟರೇಟ್ ನೀಡಿದ್ದು ಈ ಬಾರಿಯೂ ಗೌಡಾ ನೀಡಲಾಗುತ್ತಿದೆ. ರಾಜ್ಯಪಾಲರಿಗೆ ಗಣ್ಯರ ಹೆಸರಿನ ಪಟ್ಟಿ ಕಳಿಸಿದ್ದು ಅಂತಿಮವಾಗಬೇಕಷ್ಟೇ ಎಂದು ಪ್ರಶ್ನೆಯೊಂದಕ್ಕೆ ಕುಲಪತಿ ಉತ್ತರಿಸಿದರು.

ಜುಲೈನಲ್ಲಿ ಶೈಕ್ಷಣಿಕ ವರ್ಷದಿಂದ ಪದವಿ ಕೋರ್ಸ್‌ ಎಐ ಪಠ್ಯಕ್ರಮ ಬೋಧಿಸಲು ಎಲ್ಲ ತಯಾರಿ ನಡೆದಿದೆ. ಈಗಾಗಲೇ ಇರುವ ವಿಷಯಗಳಲ್ಲಿಯೇ 15 ಗಂಟೆ ಎಐ ಆಧಾರಿತ ಪಠ್ಯ ಸೇರ್ಪಡೆಗೆ ರಚಿಸಿರುವ ಸಮಿತಿ ಅಂತಿಮಗೊಳಿಸುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕುಲಪತಿ ಡಾ. ಖಾನ್‌, ವಿವಿಯ ಆಸ್ತಿ-ಪಾಸ್ತಿ ಉಳಿಸಿಕೊಳ್ಳಲು ಸಮೀಕ್ಷೆ ಕಾರ್ಯ ಶುರುವಾಗಿದೆ. ಈಗಾಗಲೇ ಸರ್ವೇಯರ್‌ ನೇಮಿಸಿದ್ದು ದಾಖಲೆಗಳ ಸಂಗ್ರಹಣೆ ನಡೆದಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕುಲಸಚಿವ ಡಾ. ಶಂಕರ ವಣಿಕ್ಯಾಳ, ಮೌಲ್ಯಮಾಪನ ಕುಲಸಚಿವ ಪ್ರೊ. ನಿಜಲಿಂಗಪ್ಪ ಮಟ್ಟಿಹಾಳ, ಪತ್ರಿಕೋದ್ಯಮ ವಿಭಾಗದ ಪ್ರೊ. ಸಂಜಯಕುಮಾರ ಮಾಲಗತ್ತಿ, ಡಾ. ಜೆ.ಎಂ. ಚಂದುನವರ, ಡಾ. ಪ್ರಭಾಕರ ಕಾಂಬಳೆ, ಡಾ. ವಿಶ್ವನಾಥ ಚಿಂತಾಮಣಿ, ಡಾ. ಮಂಜುನಾಥ ಅಡಿಗಲ್ ಇದ್ದರು.ಕವಿವಿಯಿಂದ ಬಸವಶ್ರೀ ಪ್ರಶಸ್ತಿ...

ಬಸವಣ್ಣನವರ ಕುರಿತಾಗಿ ಅತ್ಯುತ್ತಮ ಕಾರ್ಯ ಮಾಡಿದ ಗಣ್ಯರಿಗೆ ಕವಿವಿಯಿಂದ ಇದೇ ವರ್ಷದಿಂದ ಬಸವಶ್ರೀ ಪ್ರಶಸ್ತಿ ನೀಡಿ ಗೌರವಿಸಲು ತೀರ್ಮಾನಿಸಲಾಗಿದೆ. ಈ ಕುರಿತಾಗಿ ಏ. 27ರಂದು ಸಮಿತಿ ಸಭೆ ನಡೆಸಿ ಹೆಸರು ಅಂತಿಮಗೊಳಿಸಲಾಗುವುದು. ಪ್ರಶಸ್ತಿ ಪುರಸ್ಕೃತರಿಗೆ ₹ 25 ಸಾವಿರ ಮೊತ್ತದ ಪ್ರಶಸ್ತಿ ಇರಲಿದೆ.ಕವಿವಿ ಆರ್ಥಿಕ ಆರೋಗ್ಯ ಸಾಧಾರಣವಾಗಿದೆ. ಹಳೇಯ ವಿವಿಯಾಗಿರುವ ಕಾರಣ ಪಿಂಚಣಿ ವಿತರಣೆ ಸವಾಲಾಗಿದೆ. ಕಳೆದ ವರ್ಷ ₹ 126 ಕೋಟಿ ಪೈಕಿ ಬರೀ ₹ 80 ಕೋಟಿ ಬಂದಿದೆ. ಈ ವರ್ಷ ₹ 136 ಕೋಟಿ ಪೈಕಿ ಬಂದಿದ್ದು ₹ 67.5 ಕೋಟಿ. ಆಂತರಿಕ ಸಂಪನ್ಮೂಲದಿಂದ ಈ ಕೊರತೆ ನೀಗಿಸುವುದು ಕಷ್ಟಸಾಧ್ಯವಾಗಿದೆ. ಪಿಂಚಣಿಗೆ ಪ್ರತಿ ವರ್ಷ ₹ 100 ಕೋಟಿ ನೀಡಿದರೆ, ಆಂತರಿಂಕ ಸಂಪನ್ಮೂಲದಿಂದ ಉಳಿದ ಹಣ ನಿಭಾಯಿಸಬಹುದು ಎಂದು ಕುಲಪತಿ ಡಾ. ಖಾನ್‌ ಮಾಹಿತಿ ನೀಡಿದರು.