ಸಾರಾಂಶ
ಬಸವರಾಜ ಹಿರೇಮಠ
ಧಾರವಾಡ: ರಾಜ್ಯದ ಎರಡನೇ ಅತ್ಯಂತ ಹಳೆಯ ವಿಶ್ವವಿದ್ಯಾಲಯ ಎನಿಸಿರುವ ಇಲ್ಲಿಯ ಕರ್ನಾಟಕ ವಿಶ್ವವಿದ್ಯಾಲಯವು ಕೇವಲ ಶೇ. 29ರಷ್ಟು ಕಾಯಂ ಬೋಧನೆ ಮತ್ತು ಬೋಧಕೇತರ ಸಿಬ್ಬಂದಿಯೊಂದಿಗೆ ಮುನ್ನಡೆಯುತ್ತಿದೆ...!ಇಷ್ಟು ಕಡಿಮೆ ಸಂಖ್ಯೆ ಕಾಯಂ ಸಿಬ್ಬಂದಿಯೊಂದಿಗೆ ವಿವಿಯಾದರೂ ಹೇಗೆ ಮುನ್ನಡೆಯುತ್ತಿದೆ ಎಂದು ಅಚ್ಚರಿ ಪಡಬೇಕಿಲ್ಲ... ಬೋಧನೆಗೆ ಅತಿಥಿ ಉಪನ್ಯಾಸಕರು ಹಾಗೂ ಬೋಧಕೇತರ ಕಾರ್ಯಕ್ಕೆ ಗುತ್ತಿಗೆ ನೌಕರರ ಮೇಲೆ ವಿಶ್ವವಿದ್ಯಾಲಯ ಕುಂಟುತ್ತಾ ಸಾಗುತ್ತಿರುವುದು ಉತ್ತರ ಕರ್ನಾಟಕ ಪಾಲಿಗೆ ದುರಂತದ ಸಂಗತಿ.
ಜ್ಞಾನವೇ ಶಕ್ತಿ ಎಂದು ಹೇಳಲಾಗುತ್ತದೆ. ಹಾಗೆಯೇ, ಯುವ ಪೀಳಿಗೆಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಸಮಾಜ ಸಬಲೀಕರಣಗೊಳಿಸಲು ಮತ್ತು ಸಂಶೋಧನೆಯನ್ನು ಪ್ರೋತ್ಸಾಹಿಸಲು ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗಿದೆ. ಆದರೆ, ಸತತ ಸರ್ಕಾರಗಳ ನಿರಾಸಕ್ತಿಯಿಂದಾಗಿ ಸರ್ಕಾರಿ ವಿಶ್ವವಿದ್ಯಾಲಯಗಳು ಅದರಲ್ಲೂ ಕರ್ನಾಟಕ ವಿವಿ ಬೋಧನೆ ಮತ್ತು ಕಲಿಕೆಯ ತೀವ್ರ ಕೊರತೆ ಅನುಭವಿಸುತ್ತಿದ್ದು, ಇದು ಈ ಭಾಗದ ಬೋಧನೆ ಮತ್ತು ಕಲಿಕೆಯ ಪ್ರಕ್ರಿಯೆ ಮತ್ತು ಸಂಶೋಧನೆಯ ಮೇಲೆ ತೀವ್ರ ಹೊಡೆತ ಬಿದ್ದಿದೆ.ಎಷ್ಟೆಷ್ಟು ಖಾಲಿ: ಹಲವಾರು ವರ್ಷಗಳಿಂದ ಕವಿವಿಯಲ್ಲಿ ಬೋಧಕ ಹಾಗೂ ಬೋಧಕೇತರ ಹುದ್ದೆಗಳು ಖಾಲಿಯಾಗಿದ್ದು, ಅವುಗಳನ್ನು ಭರ್ತಿ ಮಾಡಲು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದಿರುವುದೇ ಉತ್ತರ ಕರ್ನಾಟಕದ ದುರಂತ ಸತ್ಯ. ಕವಿವಿಯಲ್ಲಿ ಮಂಜೂರಾದ ಬೋಧನಾ ಹುದ್ದೆಗಳಲ್ಲಿ ಶೇ. 68.6 ಮತ್ತು ಮಂಜೂರಾದ ಬೋಧಕೇತರ ಹುದ್ದೆಗಳಲ್ಲಿ ಶೇ. 71.6ರಷ್ಟು ಹುದ್ದೆಗಳು ಹಿಂದಿನಿಂದಲೂ ಖಾಲಿ ಇವೆ ಎಂದು ಸ್ವತಃ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ ಇತ್ತೀಚೆಗೆ ನಡೆದ ವಿಧಾನಸಭೆ ಅಧಿವೇಶನದಲ್ಲಿ ಶಾಸಕ ಪ್ರಸಾದ ಅಬ್ಬಯ್ಯ ಅವರ ಪ್ರಶ್ನೆಗೆ ಉತ್ತರಿಸಿದ್ದಾರೆ.
ವಿಧಾನಸಭೆಯಲ್ಲಿ ಚರ್ಚೆ: ಮಂಜೂರಾದ 620 ಬೋಧಕ ಹುದ್ದೆಗಳಲ್ಲಿ 422 ಖಾಲಿ ಇದ್ದು, ಬರೀ 198 ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗೆಯೇ ಎ, ಬಿ, ಸಿ ಮತ್ತು ಡಿ ಗುಂಪುಗಳಲ್ಲಿ ಮಂಜೂರಾದ 1201 ಬೋಧಕೇತರ ಹುದ್ದೆಗಳಲ್ಲಿ 860 ಖಾಲಿ ಇದ್ದು, 341 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು, ಖಾಲಿ ಹುದ್ದೆಗಳನ್ನು ಅತಿಥಿ ಉಪನ್ಯಾಸಕರ, ಗುತ್ತಿಗೆ ಆಧಾರದ ಮೇಲೆ ನಿಭಾಯಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ನಿವೃತ್ತ ಬೋಧಕ ಮತ್ತು ಬೋಧಕೇತರ ನೌಕರರಿಗೆ ಪಿಂಚಣಿ ಪಾವತಿ ವಿಳಂಬದ ಬಗ್ಗೆಯೂ ಅಬ್ಬಯ್ಯ ಪ್ರಶ್ನೆಗಳನ್ನು ಎತ್ತಿದ್ದರು. ಇದಕ್ಕೆ, ಉನ್ನತ ಶಿಕ್ಷಣ ಸಚಿವರು, 2025-2026ನೇ ಸಾಲಿಗೆ ಪಿಂಚಣಿ ಪಾವತಿಗಾಗಿ ಸರ್ಕಾರ ₹55 ಕೋಟಿಗಳನ್ನು ನಿಗದಿಪಡಿಸಿದೆ ಮತ್ತು ಅದರಲ್ಲಿ ₹13.75 ಕೋಟಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಉತ್ತರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.ಪ್ರಾಥಮಿಕ ಹಂತದಿಂದ ಉನ್ನತ ಹಂತದ ವರೆಗೆ ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರವನ್ನು ನಿರ್ವಹಿಸುತ್ತಿರುವ ರೀತಿಗೆ ಶಿಕ್ಷಣ ತಜ್ಞರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಿಕ್ಷಣವು ಸರ್ಕಾರದ ಆದ್ಯತೆಯಾಗಿ ಕಾಣುತ್ತಿಲ್ಲ. ಈಗಾಗಲೇ ಸ್ಥಾಪಿತವಾಗಿರುವ ವಿಶ್ವವಿದ್ಯಾಲಯಗಳು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿರುವಾಗ ಸರ್ಕಾರವು ಪ್ರತಿ ಜಿಲ್ಲೆಯಲ್ಲಿ ಹೊಸ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವ ಬಗ್ಗೆ ಮಾತನಾಡುತ್ತಿದೆ. ಇದು ಹಾಸ್ಯಾಸ್ಪದ ಎಂದು ಕವಿವಿ ಮಾಜಿ ಕುಲಪತಿಯೊಬ್ಬರು ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿದರು.
ಕವಿವಿಯಲ್ಲಿ ಒಟ್ಟು ಬೋಧನೆ ಹಾಗೂ ಬೋಧಕೇತರ ಹುದ್ದೆಗಳ ಅಂಕಿ-ಸಂಖ್ಯೆಅನುಮೋದನೆ- 1821ಕಾರ್ಯನಿರ್ವಹಣೆ- 539ಖಾಲಿ- 1282