ಮಗು ಕೊಂದು ಬ್ಯಾಗಲ್ಲಿ ಸಾಗಿಸ್ತಿದ್ದವಳ ಸೆರೆ!

| Published : Jan 10 2024, 01:45 AM IST / Updated: Jan 10 2024, 04:21 PM IST

ಸಾರಾಂಶ

ಟ್ಯಾಕ್ಸಿ ಡಿಕ್ಕಿಯಲ್ಲಿಟ್ಟು ಗೋವಾದಿಂದ ಮಗುವಿನ ಶವವನ್ನು ತರುತ್ತಿದ್ದಾಗ ಚಿತ್ರದುರ್ಗದಲ್ಲಿ ಸಿನಿಮೀಯ ರೀತಿಯಲ್ಲಿ ತಾಯಿಯನ್ನು ಅರೆಸ್ಟ್‌ ಮಾಡಲಾಗಿದೆ. ಈಕೆ ಬೆಂಗಳೂರು ಸ್ಟಾರ್ಟಪ್‌ ಸಿಇಒ ಆಗಿದ್ದು ಆರು ದಿನ ಗೋವಾ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.

ಪಣಜಿ: ಗೋವಾದಲ್ಲಿ ತನ್ನ ಹೆತ್ತ 4 ವರ್ಷದ ಮಗನನ್ನು ಕೊಂದಿರುವ ಬೆಂಗಳೂರಿನ ಸ್ಟಾರ್ಟಪ್‌ ಒಂದರ ಸಿಇಒ ಸೂಚನಾ ಸೇಠ್, ಮಗನನ್ನು ಕೊಂದ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಳು ಎಂದು ಗೋವಾ ಪೊಲೀಸರು ಹೇಳಿದ್ದಾರೆ. ‘ಸೂಚನಾ ತನ್ನ ಮಗನನ್ನು ಉಸಿರುಗಟ್ಟಿಸಿ ಕೊಂದಿದ್ದಾಳೆ. ನಂತರ ತನ್ನ ಎಡಗೈ ಮಣಿಕಟ್ಟನ್ನು ಹರಿತವಾದ ವಸ್ತುವಿನಿಂದ ಕತ್ತರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. 

ಆಕೆ ಗೋವಾದಲ್ಲಿ ತಂಗಿದ್ದ ಸರ್ವೀಸ್‌ ಅಪಾರ್ಟ್‌ಮೆಂಟ್‌ನಲ್ಲಿನ ಟವೆಲ್‌ನಲ್ಲಿ ಕಂಡುಬಂದ ರಕ್ತದ ಕಲೆಗಳು ಆಕೆಯ ಕತ್ತರಿಸಿದ ಮಣಿಕಟ್ಟಿನವು’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪತಿಯ ಮೇಲಿನ ದ್ವೇಷದಿಂದಾಗಿ ಬೆಂಗಳೂರಿನ ಮಹಿಳಾ ಉದ್ಯಮಿಯೊಬ್ಬರು ತನ್ನ 4 ವರ್ಷದ ಮಗನನ್ನು ಹತ್ಯೆಗೈದ ಭೀಕರ ಘಟನೆ ಗೋವಾದಲ್ಲಿ ನಡೆದಿದೆ. ಗೋವಾದಲ್ಲಿ ಮಗುವನ್ನು ಯಾರಿಗೂ ಗೊತ್ತಾಗದಂತೆ ಕತ್ತು ಹಿಸುಕಿ ಹತ್ಯೆ ಮಾಡಿ, ಶವವನ್ನು ಲಗೇಜ್‌ ಬ್ಯಾಗ್‌ನಲ್ಲಿ ಇರಿಸಿ ಬೆಂಗಳೂರಿಗೆ ಟ್ಯಾಕ್ಸಿಯಲ್ಲಿ ಮರಳುತ್ತಿದ್ದಾಗ ಆಕೆ ಕರ್ನಾಟಕದ ಚಿತ್ರದುರ್ಗ ಜಿಲ್ಲಾ ಪೊಲೀಸರ ಕೈಗೆ ಸಿನಿಮೀಯ ರೀತಿ ಸಿಕ್ಕಿ ಬಿದ್ದಿದ್ದಾಳೆ.ಸೂಚನಾ ಸೇಠ್‌ ಎಂಬಾಕೆಯೇ ಕಂದಮ್ಮನನ್ನು ಬರ್ಬರವಾಗಿ ಕೊಂದ ತಾಯಿ ಹಾಗೂ ಚಿನ್ಮಯ್ ರಾಮನ್ ಸೇಠ್ (4) ಮೃತ ಮಗು.

ಘಟನೆ ಗೋವಾದಲ್ಲಿ ನಡೆದಿದ್ದರಿಂದ ಆಕೆಯನ್ನು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಐಮಂಗಲ ಪೊಲೀಸರು, ಗೋವಾ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಗೋವಾದ ಮಾಪುಸಾ ಕೋರ್ಟ್‌ಗೆ ಆಕೆಯನ್ನು ಹಾಜರುಪಡಿಸಿ 6 ದಿನ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.ಬಂಗಾಳ ಮೂಲದ ಸೂಚನಾ, ಕೇರಳ ಮೂಲದ ವೆಂಕಟರಾಮನ್‌ರನ್ನು ಮದುವೆಯಾಗಿದ್ದಳು. ಗಂಡ-ಹೆಂಡತಿಯ ಸಂಬಂಧ ಇತ್ತೀಚೆಗೆ ಹಳಸಿತ್ತು ಮತ್ತು ವಿಚ್ಛೇದನ ಪ್ರಕ್ರಿಯೆ ನಡೆಯುತ್ತಿದೆ. ವಿಚ್ಛೇದನ ಪ್ರಕ್ರಿಯೆ ವೇಳೆ ವಾರಕ್ಕೆ ಒಂದು ದಿನ ಮಗುವನ್ನು ಪತಿಯ ವಶಕ್ಕೆ ಒಪ್ಪಿಸಬೇಕು ಎಂದು ಕೋರ್ಟ್‌ ಸೂಚಿಸಿತ್ತು. ಆದರೆ ಮಗನನ್ನು ಪತಿಯ ವಶಕ್ಕೆ ಒಪ್ಪಿಸಲು ಮನಸ್ಸಿರದ ಆಕೆ ಗಂಡನ ಮೇಲಿನ ದ್ವೇಷದಿಂದ ಮಗುವನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾಳೆ ಎಂದು ಪ್ರಾಥಮಿಕ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ಆಗಿದ್ದೇನು?
ಸೂಚನಾ ಸೇಠ್‌ ಕೃತಕ ಬುದ್ಧಿಮತ್ತೆ ಕುರಿತ ಸ್ಟಾರ್ಟಪ್‌ ಕಂಪನಿ ‘ಮೈಂಡ್‌ಫುಲ್ ಎಐ ಲ್ಯಾಬ್‌’ನ ಸಿಇಒ ಆಗಿದ್ದಾಳೆ. ಗಂಡ ಕೆಲಸದ ಮೇರೆಗೆ ಇಂಡೋನೇಷ್ಯಾದಲ್ಲಿದ್ದರು. ಈ ವೇಳೆ ಈಕೆ 4 ವರ್ಷದ ಮಗುವಿನೊಂದಿಗೆ ಶನಿವಾರ ಗೋವಾಗೆ ಬಂದಿದ್ದಳು ಹಾಗೂ ಉತ್ತರ ಗೋವಾದ ಕ್ಯಾಂಡೋಲಿಮ್‌ನಲ್ಲಿ ಪ್ರವಾಸಿಗರಿಗೆಂದೇ ಮೀಸಲಾಗಿರುವ ‘ಸೋಲ್ ಬನ್ಯಾನ್ ಗ್ರಾಂಡೆ’ ಸರ್ವೀಸ್‌ ಅಪಾರ್ಟ್‌ಮೆಂಟ್‌ನಲ್ಲಿ ತಂಗಿದ್ದಳು. 

2 ದಿನದ ಬಳಿಕ ಆಕೆ ಬೆಂಗಳೂರಿಗೆ ಮರಳಲು ನಿರ್ಧರಿಸಿದಳು ಮತ್ತು ಅಪಾರ್ಟ್‌ಮೆಂಟ್‌ ಮ್ಯಾನೇಜ್‌ಮೆಂಟ್‌ಗೆ, ‘ಬೆಂಗಳೂರಿಗೆ ಬಾಡಿಗೆ ಟ್ಯಾಕ್ಸಿ ಬುಕ್‌ ಮಾಡಿಕೊಡಿ’ ಎಂದು ಕೇಳಿಕೊಂಡಳು. ಆಗ ಮ್ಯಾನೇಜ್‌ಮೆಂಟ್‌ನವರು ‘ವಿಮಾನದಲ್ಲಿ ಬೆಂಗಳೂರಿಗೆ ಹೋಗಿ. ಟ್ಯಾಕ್ಸಿಗಿಂತ ಅಗ್ಗವಾಗುತ್ತದೆ’ ಎಂದು ಸಲಹೆ ನೀಡಿದರು. ಆದರೆ ಅದಕ್ಕೆ ಒಪ್ಪದೆ ಟ್ಯಾಕ್ಸಿಯೇ ಬೇಕು ಎಂದು ಸೂಚನಾ ಪಟ್ಟು ಹಿಡಿದಿದ್ದರಿಂದ ಅಪಾರ್ಟ್‌ಮೆಂಟ್‌ನವರು ಈಕೆಗೆ ಟ್ಯಾಕ್ಸಿ ಬುಕ್‌ ಮಾಡಿ ಕೊಟ್ಟಿದ್ದರು.

ಈ ವೇಳೆ ಸೂಚನಾ ಒಬ್ಬಳೇ ಟ್ಯಾಕ್ಸಿ ಹತ್ತಿದಳು. ಆಗ ಮಗ ನಾಪತ್ತೆಯಾಗಿರುವುದನ್ನು ಹಾಗೂ ಸಂದೇಹಾಸ್ಪದವಾಗಿ ಭಾರದ ಬ್ಯಾಗ್‌ ಒಯ್ಯುತ್ತಿದ್ದರಿಂದ ಅಪಾರ್ಟ್‌ಮೆಂಟ್‌ ಸಿಬ್ಬಂದಿ ಗಮನಿಸಿ, ಈ ಬಗ್ಗೆ ಕೇಳಿದಾಗ ‘ಸ್ನೇಹಿತರ ಮನೆಯಲ್ಲಿ ಮಗುವನ್ನು ಬಿಟ್ಟಿದ್ದೇನೆ’ ಎಂದು ಹೇಳಿದಳು.ಸೂಚನಾ ಫ್ಲ್ಯಾಟ್‌ ಖಾಲಿ ಮಾಡಿದ ಬಳಿಕ, ಮನೆಗೆಲಸದ ಸಿಬ್ಬಂದಿಗೆ ಆಕೆಯ ಫ್ಲ್ಯಾಟ್‌ನಲ್ಲಿ ರಕ್ತದ ಕಲೆಗಳು ಕಂಡುಬಂದವು.

 ಹೀಗಾಗಿ ಸಿಬ್ಬಂದಿ ಗೋವಾದ ಕ್ಯಾಲಂಗೂಟ್‌ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದರು.ಆಗ ಪೊಲೀಸರು ಟ್ಯಾಕ್ಸಿ ಚಾಲಕನಿಗೆ ಫೋನ್‌ ಮಾಡಿ, ‘ಸೂಚನಾಗೆ ಫೋನ್‌ ಕೊಡು’ ಎಂದರು. ಸೂಚನಾಗೆ ಮಗನ ಬಗ್ಗೆ ಪೊಲೀಸರು ವಿಚಾರಿಸಿದಾಗ ‘ನನ್ನ ಸ್ನೇಹಿತರ ಮನೆಯಲ್ಲಿ ಇದ್ದಾನೆ’ ಎಂದು ಹೇಳಿಕೊಂಡು ವಿಳಾಸ ನೀಡಿದಳು. ರಕ್ತದ ಕಲೆಗಳು ಫ್ಲ್ಯಾಟ್‌ನಲ್ಲಿ ಪತ್ತೆಯಾಗಿವೆ ಎಂದಾಗ ‘ನನಗೆ ಋತುಸ್ರಾವ ಆದ ಕಲೆಗಳವು’ ಎಂದಳು. ಬಳಿಕ ತನಿಖೆ ವೇಳೆ ಆಕೆ ನೀಡಿದ್ದ ಸ್ನೇಹಿತರ ವಿಳಾಸ ನಕಲಿ ಎಂದು ತಿಳಿದುಬಂತು.ನಂತರ ಪೊಲೀಸರು ಮತ್ತೆ ಚಾಲಕನಿಗೆ ಕರೆ ಮಾಡಿದರು. 

‘ಬಂಗಾಳಿ ಆಗಿರುವ ಸೂಚನಾಗೆ ಕೊಂಕಣಿ ಅರ್ಥವಾಗುವುದಿಲ್ಲ. ಕೊಂಕಣಿಯಲ್ಲೇ ಮಾತಾಡು. ನೀನೆಲ್ಲಿರುವೆ ಹೇಳು’ ಎಂದು ಟ್ಯಾಕ್ಸಿ ಚಾಲಕನಿಗೆ ಸೂಚಿಸಿದರು. ಆಗ ಟ್ಯಾಕ್ಸಿ ಚಾಲಕ ತಾನು ಚಿತ್ರದುರ್ಗ ಜಿಲ್ಲೆಯಲ್ಲಿ ಸಾಗುತ್ತಿದ್ದೇನೆ ಎಂದ. ಹೀಗಾಗಿ, ‘ಮಾರ್ಗಮಧ್ಯದ ಚಿತ್ರದುರ್ಗ ಜಿಲ್ಲೆಯ ಯಾವುದಾದರೂ ಠಾಣೆಗೆ ಟ್ಯಾಕ್ಸಿ ತೆಗೆದುಕೊಂಡು ಹೋಗಿ ನಿಲ್ಲಿಸು’ ಎಂದು ಸೂಚಿಸಿದರು.ಟ್ಯಾಕ್ಸಿ ಚಾಲಕ ಚಿತ್ರದುರ್ಗ ಜಿಲ್ಲೆ ಹಿರಿಯೂರು ಬಳಿಯ ಐಮಂಗಲ ಪೊಲೀಸ್‌ ಠಾಣೆಯಲ್ಲಿ ಟ್ಯಾಕ್ಸಿ ನಿಲ್ಲಿಸಿದ. ಆಗ ಐಮಂಗಲ ಪೊಲೀಸರು ಟ್ಯಾಕ್ಸಿ ಪರಿಶೀಲಿಸಿದಾಗ ಲಗೇಜ್‌ ಬ್ಯಾಗ್‌ನಲ್ಲಿ ಮಗುವಿನ ಶವ ಪತ್ತೆಯಾಯಿತು. 

ಕೂಡಲೇ ಸೂಚನಾಳನ್ನು ಬಂಧಿಸಿದ ಐಮಂಗಲ ಪೊಲೀಸರು, ಬಳಿಕ ಟ್ರಾನ್ಸಿಟ್‌ ರಿಮಾಂಡ್‌ ಪಡೆದು ಬಂದ ಗೋವಾ ಪೊಲೀಸರಿಗೆ ಹಸ್ತಾಂತರಿಸಿದರು. ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಐಮಂಗಲ ಆಸ್ಪತ್ರೆ ಶವಾಗಾರದ ಮಾರ್ಚರಿಗೆ ಶಿಫ್ಟ್ ಮಾಡಲಾಗಿದೆ. ಈ ನಡುವೆ, ಸೂಚನಾಳ ಪತಿ ವೆಂಕಟರಾಮನ್‌ ಇಂಡೋನೇಷ್ಯಾದಿಂದ ಹಿರಿಯೂರಿಗೆ ಬಂದು ಮಗುವಿನ ಶವ ನೋಡಿ ಗದ್ಗದಿತರಾಗಿದ್ದಾರೆ.

ಗೋವಾದ ಕ್ಯಾಲಂಗೂಟ್‌ ಪೊಲೀಸರು ಸೂಚನಾ ಮೇಲೆ ಕೊಲೆ (ಐಪಿಸಿ ಸೆಕ್ಷನ್‌ 302) ಮತ್ತು ಸಾಕ್ಷ್ಯ ನಾಶ (ಸೆಕ್ಷನ್‌ 201) ಹಾಗೂ ಗೋವಾ ಮಕ್ಕಳ ಕಾಯ್ದೆಯ ಕೇಸು ದಾಖಲಿಸಿದ್ದಾರೆ. ಆಕೆಯ ತೀವ್ರ ವಿಚಾರಣೆ ನಡೆದಿದೆ.

ಕೃತಕ ಬುದ್ಧಿಮತ್ತೆಯಲ್ಲಿ ಸೂಚನಾ ‘ಟಾಪ್‌-100 ಬ್ರಿಲಿಯಂಟ್‌ ಮಹಿಳೆ’ಸೂಚನಾಳ ಮೈಂಡ್‌ಫುಲ್ ಎಐ ಲ್ಯಾಬ್‌ನ ಲಿಂಕ್ಡ್‌ಇನ್ ಪುಟದ ಪ್ರಕಾರ, ಸೂಚನಾ ಸೇಠ್ 2021ರಲ್ಲಿ ಕೃತಕ ಬುದ್ಧಿಮತ್ತೆ ಕ್ಷೇತ್ರದ ‘ಟಾಪ್‌-100 ಎಐ ಬ್ರಿಲಿಯಂಟ್‌ ಮಹಿಳೆ’ಯರಲ್ಲಿ ಒಬ್ಬಳಾಗಿದ್ದಳು. ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಹಾರ್ವರ್ಡ್‌ ವಿವಿ ಸೇರಿ ಅನೇಕ ಸಂಸ್ಥೆಗಳ ಜತೆ ಆಕೆ ಕಾರ್ಯನಿರ್ವಹಿಸಿದ್ದಳು.