ದಸರಾ ರಜೆ ಮುಗಿಸಿ ಶಾಲೆಗಳು ಪುನರಾರಂಭಗೊಂಡ ಮೊದಲ ದಿನ ಶಿಕ್ಷಕರ ಮೊಬೈಲ್ಗೆ ಬಂದಿದ್ದ ಕರ್ತವ್ಯ (ಕೆಎಎಎಂಎಸ್) ಆ್ಯಪ್ ರಿಫ್ರೆಶ್ ಮಾಡಿ ಎಂಬ ಸಂದೇಶ ಇದೀಗ ಶಿಕ್ಷಕರ ಪಾಲಿಗೆ ಹಾಜರಾತಿ ಸಂಕಷ್ಟ ತಂದೊಡ್ಡಿದೆ. ಇಲಾಖೆಯ ಸೂಚನೆಯಂತೆ ಆ್ಯಪ್ ರಿಫ್ರೆಶ್ ಮಾಡಿಕೊಂಡ ಶಿಕ್ಷಕರು ಕಳೆದ 15 ದಿನಗಳಿಂದ ನಿತ್ಯ ಹಾಜರಾತಿ ದಾಖಲಿಸಲಾಗದೆ ಪರದಾಡುತ್ತಿದ್ದಾರೆ.
ನಾರಾಯಣ ಹೆಗಡೆ
ಕನ್ನಡಪ್ರಭ ವಾರ್ತೆ, ಹಾವೇರಿದಸರಾ ರಜೆ ಮುಗಿಸಿ ಶಾಲೆಗಳು ಪುನರಾರಂಭಗೊಂಡ ಮೊದಲ ದಿನ ಶಿಕ್ಷಕರ ಮೊಬೈಲ್ಗೆ ಬಂದಿದ್ದ ಕರ್ತವ್ಯ (ಕೆಎಎಎಂಎಸ್) ಆ್ಯಪ್ ರಿಫ್ರೆಶ್ ಮಾಡಿ ಎಂಬ ಸಂದೇಶ ಇದೀಗ ಶಿಕ್ಷಕರ ಪಾಲಿಗೆ ಹಾಜರಾತಿ ಸಂಕಷ್ಟ ತಂದೊಡ್ಡಿದೆ. ಇಲಾಖೆಯ ಸೂಚನೆಯಂತೆ ಆ್ಯಪ್ ರಿಫ್ರೆಶ್ ಮಾಡಿಕೊಂಡ ಶಿಕ್ಷಕರು ಕಳೆದ 15 ದಿನಗಳಿಂದ ನಿತ್ಯ ಹಾಜರಾತಿ ದಾಖಲಿಸಲಾಗದೆ ಪರದಾಡುತ್ತಿದ್ದಾರೆ.
ಶಾಲೆಯಲ್ಲಿಯೇ ಇದ್ದು ಪಾಠ ಬೋಧನೆ ಮಾಡಿದರೂ ಆ್ಯಪ್ ಮಾತ್ರ ಶಿಕ್ಷಕರು ಕಾರ್ಯಸ್ಥಳದಲ್ಲಿಲ್ಲ ಎಂದು ತೋರಿಸುತ್ತಿದೆ. ಹೀಗಾಗಿ ಆನ್ಲೈನ್ ಹಾಜರಾತಿ ಬದಲಿಗೆ ಒಒಡಿ ಎಂದು ನಮೂದಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ.ಕರ್ನಾಟಕ ಸರ್ಕಾರದ ಅಧಿಕಾರಿಗಳು, ಶಿಕ್ಷಕರು ಸೇರಿದಂತೆ ಸರ್ಕಾರಿ ನೌಕರರ ಹಾಜರಾತಿಗಾಗಿ ಈ ಆ್ಯಪ್ ಬಳಸಲಾಗುತ್ತಿದೆ. ನೌಕರರು ತಮ್ಮ ನಿಗದಿತ ಕೆಲಸದ ಸ್ಥಳದಲ್ಲೇ ಇದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಎಐ ಆಧಾರಿತ ಮುಖ ಗುರುತಿಸುವಿಕೆ ಮತ್ತು ಜಿಯೋ ಫೆನ್ಸಿಂಗ್ ತಂತ್ರಜ್ಞಾನದ ಕರ್ತವ್ಯ ಆ್ಯಪ್ ಅಳವಡಿಸಲಾಗಿದೆ.
ಸರ್ಕಾರಿ ಶಾಲೆಗಳ ಶಿಕ್ಷಕರ ಹಾಜರಾತಿಯನ್ನು ಪಾರದರ್ಶಕಗೊಳಿಸುವ ಉದ್ದೇಶದಿಂದ ಜಾರಿಗೊಳಿಸಿರುವ ಕರ್ತವ್ಯ ಆ್ಯಪ್ ಇದೀಗ ತಾಂತ್ರಿಕ ದೋಷದಿಂದಲೇ ಶಿಕ್ಷಕರಿಗೆ ತಲೆನೋವಾಗಿ ಪರಿಣಮಿಸಿದೆ. ದಸರಾ ರಜೆ ಬಳಿಕ ಶಾಲೆಗಳು ಆರಂಭವಾದ ದಿನ ಆ್ಯಪ್ ರಿಫ್ರೆಶ್ ಮಾಡಿಕೊಳ್ಳುವಂತೆ ಶಿಕ್ಷಕರಿಗೆ ಸಂದೇಶ ಬಂದಿತ್ತು. ಅದರಂತೆ ಸೂಚನೆ ಪಾಲಿಸಿ ರಿಫ್ರೆಶ್ ಮಾಡಿಕೊಂಡ ಶಿಕ್ಷಕರಿಗೆ ಆನಂತರದಿಂದಲೇ ಹಾಜರಾತಿ ದಾಖಲಿಸುವಾಗ ಸಮಸ್ಯೆ ಎದುರಾಗಿದೆ. ಮುಖಚಹರೆ ಗುರುತಿಸುವ ಮೂಲಕ ಹಾಜರಾತಿ ಹಾಕಲು ಪ್ರಯತ್ನಿಸಿದಾಗ ‘Outside Facility’ ಎಂಬ ಸಂದೇಶ ಕಾಣಿಸಿಕೊಳ್ಳುತ್ತಿದೆ. ಅಂದರೆ, ನಿಗದಿತ ಕಾರ್ಯಸ್ಥಳದ ಹೊರಗಿದ್ದೀರಿ ಎಂದು ಆ್ಯಪ್ ಸೂಚಿಸುತ್ತಿದೆ.ಶಿಕ್ಷಕರು ಶಾಲೆಯಲ್ಲಿಯೇ ಇದ್ದು ಹಾಜರಾತಿ ದಾಖಲಿಸಲು ಪ್ರಯತ್ನಿಸಿದರೂ ಆ್ಯಪ್ ಸ್ಥಳವನ್ನು ಗುರುತಿಸುತ್ತಿಲ್ಲ. ನಿಗದಿತ ಜಿಯೋಫೆನ್ಸಿಂಗ್ ವ್ಯಾಪ್ತಿಯಲ್ಲಿದ್ದರೂ ಕಾರ್ಯಸ್ಥಳದ ಹೊರಗಿದ್ದಾರೆ ಎಂಬ ಸಂದೇಶ ಬರುತ್ತಿರುವುದು ಶಿಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ. ರಾಜ್ಯಾದ್ಯಂತ ಈ ಸಮಸ್ಯೆ ಎದುರಾಗಿದೆ. ರಾಜ್ಯದಲ್ಲಿ ಒಟ್ಟು 1,76,877 ನೌಕರರು ಆ್ಯಪ್ ನೋಂದಾಯಿಸಿಕೊಂಡಿದ್ದು, ನ.5ರಂದು 1,48,812 ಮಂದಿ ಚೆಕ್ಇನ್ ಮಾಡಿದ್ದಾರೆ. ಉಳಿದವರಿಗೆ ತಾಂತ್ರಿಕ ತೊಡಕು ಎದುರಾಗುತ್ತಿರುವುದು ಈ ಅಂಕಿಸಂಖ್ಯೆಯಿಂದ ತಿಳಿದುಬರುತ್ತದೆ.
ಒಒಡಿ ಮೊರೆ ಹೋಗುವ ಅನಿವಾರ್ಯತೆಶಿಕ್ಷಕರಿಗೆ ಪ್ರತಿದಿನ ಆನ್ಲೈನ್ ಹಾಜರಾತಿ ಕಡ್ಡಾಯವಾಗಿರುವುದರಿಂದ ಆ್ಯಪ್ ಕೈಕೊಟ್ಟಾಗ ಬೇರೆ ದಾರಿಯಿಲ್ಲದೆ ಒಒಡಿ ಆಯ್ಕೆಯನ್ನು ಬಳಸುತ್ತಿದ್ದಾರೆ. ಶಾಲೆಯಲ್ಲಿಯೇ ಕರ್ತವ್ಯ ನಿರ್ವಹಿಸಿದರೂ ದಾಖಲೆಯಲ್ಲಿ ಅಧಿಕೃತ ಕರ್ತವ್ಯದ ಮೇಲಿರುವಂತೆ ನಮೂದಾಗುತ್ತಿದೆ. ಇದರಿಂದ ನೈಜ ಹಾಜರಾತಿ ಮತ್ತು ಆ್ಯಪ್ನಲ್ಲಿ ದಾಖಲಾಗುತ್ತಿರುವ ಹಾಜರಾತಿ ನಡುವೆ ವ್ಯತ್ಯಾಸ ಉಂಟಾಗುತ್ತಿದೆ. ಮುಂದಿನ ದಿನಗಳಲ್ಲಿ ಹಾಜರಾತಿ ಪರಿಶೀಲನೆ, ವೇತನ ಅಥವಾ ಕರ್ತವ್ಯ ದಾಖಲೆಗೆ ಸಂಬಂಧಿಸಿದಂತೆ ಶಿಕ್ಷಕರು ಅನಗತ್ಯ ತೊಂದರೆ ಅನುಭವಿಸಬೇಕಾದ ಆತಂಕವೂ ಎದುರಾಗಿದೆ.
15 ದಿನವಾದರೂ ಪರಿಹಾರವಿಲ್ಲ:ಕಳೆದ 15 ದಿನಗಳಿಂದ ಸಮಸ್ಯೆ ಮುಂದುವರಿದಿದ್ದರೂ ಸಮರ್ಪಕ ಪರಿಹಾರ ದೊರೆಯದಿರುವುದಕ್ಕೆ ಶಿಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ. ಆ್ಯಪ್ನ ಸರ್ವರ್, ಜಿಪಿಎಸ್ ಸ್ಥಳ ಗುರುತಿಸುವಿಕೆ ಹಾಗೂ ಜಿಯೋಫೆನ್ಸಿಂಗ್ ವ್ಯವಸ್ಥೆಯಲ್ಲಿನ ಲೋಪಗಳನ್ನು ಪರಿಶೀಲಿಸಿ ತಕ್ಷಣ ಸರಿಪಡಿಸಬೇಕು. ತಾಂತ್ರಿಕ ಕಾರಣದಿಂದ ಹಾಜರಾತಿ ದಾಖಲಿಸಲಾಗದ ದಿನಗಳನ್ನು ಶಿಕ್ಷಕರ ಕರ್ತವ್ಯಲೋಪವೆಂದು ಪರಿಗಣಿಸಬಾರದು. ಈಗಾಗಲೇ ಒಒಡಿ ಎಂದು ನಮೂದಿಸಿರುವ ದಿನಗಳನ್ನೂ ಪರಿಶೀಲಿಸಿ ನೈಜ ಹಾಜರಾತಿಗೆ ಅನುಗುಣವಾಗಿ ದಾಖಲಿಸುವ ವ್ಯವಸ್ಥೆ ಕಲ್ಪಿಸಬೇಕು ಎಂದು ಶಿಕ್ಷಕರು ಒತ್ತಾಯಿಸಿದ್ದಾರೆ.ಕರ್ತವ್ಯ ಆ್ಯಪ್ನಲ್ಲಿ ಹಾಜರಾತಿ ಹಾಕಲು ಕೆಲವರಿಗೆ ಸಮಸ್ಯೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ತಾಂತ್ರಿಕ ಸಮಸ್ಯೆಯಿಂದ ಹೀಗಾಗಿದೆ. ಜಿಯೋ ಲೊಕೇಶನ್ ತೆಗೆದುಕೊಳ್ಳುತ್ತಿಲ್ಲ. ಸರಿಪಡಿಸುವ ಕೆಲಸ ಆಗುತ್ತಿದೆ. ಶೀಘ್ರದಲ್ಲಿ ಸಮಸ್ಯೆ ಬಗೆಹರಿಯಲಿದೆ ಎಂದು ಹಾವೇರಿ ಡಿಡಿಪಿಐ ಮೋಹನ ದಂಡಿನ ಹೇಳಿದರು.