ಸಾರಾಂಶ
ಕನ್ನಡಪ್ರಭ ವಾರ್ತೆ ಕುಷ್ಟಗಿ
ತಾಲೂಕಿನ ಕೇಸೂರು ಗ್ರಾಮದ ಚನ್ನಪೇಟೆಯ ಬಸವಣ್ಣ ದೇವರ ಕಾರ್ತಿಕೋತ್ಸವವು ಭಕ್ತರ ಸಮ್ಮುಖದಲ್ಲಿ ಸೋಮವಾರ ವಿಜೃಂಭಣೆಯಿಂದ ಜರುಗಿತು.ಈ ಸಂದರ್ಭ ವೃತ್ತ ಪ್ರಾಚಾರ್ಯ ಆದಪ್ಪ ಸಾಲವಾಡಗಿ ಮಾತನಾಡಿ, ಅಜ್ಞಾನ ಮತ್ತು ಮೂಢನಂಬಿಕೆ ಹೋಗಲಾಡಿಸಿ ಜ್ಞಾನದ ಬೆಳಕನ್ನು ಬೆಳಗಿಸುವುದೇ ಕಾರ್ತಿಕೋತ್ಸವವಾಗಿದೆ. ಎಲ್ಲರೂ ಜಾತಿಯತೆ, ಭಿನ್ನಾಭಿಪ್ರಾಯ ಮರೆತು ಬಾಳಬೇಕು. ಅಂದಾಗ ಮಾತ್ರ ಶಾಂತಿ, ನೆಮ್ಮದಿ, ಸಮೃದ್ಧಿಯಿಂದ ಇರಲು ಸಾಧ್ಯ ಎಂದರು.
ಕಾರ್ತಿಕೋತ್ಸವದ ಪ್ರಯುಕ್ತ ಸೋಮವಾರ ಬೆಳಗಿನ ಜಾವ ಬಸವಣ್ಣ ದೇವರ ಮೂರ್ತಿಗೆ ವಿಶೇಷ ಪೂಜೆ ಪುನಸ್ಕಾರಗಳು ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಹರಕೆ ಹೊತ್ತ ಭಕ್ತರು ತಮ್ಮ ಹರಕೆ ತೀರಿಸಿ ದರ್ಶನ ಪಡೆದರು.ಕಾರ್ತಿಕೋತ್ಸವದ ಅಂಗವಾಗಿ ಬಸವಣ್ಣ ದೇವಸ್ಥಾನವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಸಂಜೆ ಯುವಕರು, ಮಹಿಳೆಯರು ಮತ್ತು ಮಕ್ಕಳು ದೀಪ ಹಚ್ಚುವ ಮೂಲಕ ಸಂಭ್ರಮಿಸಿದರು. ಇದೇ ವೇಳೆ ಮಹಾಮಂಗಳಾರತಿ ಹಾಡುವುದರೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು. ಈ ವೇಳೆ ಮಲ್ಲನಗೌಡ ಟೆಂಗುಂಟಿ, ಕಲ್ಲಯ್ಯ ಸ್ವಾಮಿ, ಗುರುಸಿದ್ದಯ್ಯ ಮಳಿಮಠ, ಉಮೇಶಗೌಡ ಟೆಂಗುಂಟಿ, ಹನುಮಂತರಾವ ದೇಸಾಯಿ, ಶಂಕರಪ್ಪ ಅಂಗಡಿ, ಆನಂದಪ್ಪ ಸುರಪೂರ, ಅಮರೇಶ ಬಳಿಗೇರ, ಬೋಜಪ್ಪ ತಂಗಡಗಿ, ಬಸವರಾಜ ತಾಳಿಕೋಟಿ, ಗುಂಡಪ್ಪ ಬಳಿಗೇರ, ರಮೇಶ ತಂಗಡಗಿ, ಶುಖಮುನಿ ತಂಗಡಗಿ, ನಿಂಗನಗೌಡ ಟೆಂಗುಂಟಿ, ವೀರಯ್ಯ ಮಳಿಮಠ, ಈರನಗೌಡ ಟೆಂಗುಂಟಿ, ಉಮೇಶ ಮಡಿವಾಳರ, ಯಂಕಪ್ಪ ದಾಸರ ಸೇರಿದಂತೆ ಅನೇಕ ಮಹಿಳೆಯರು ಮಕ್ಕಳು ಇದ್ದರು.ಕೇಸೂರು ಗ್ರಾಮಸಭೆಗೆ ಅಧಿಕಾರಿಗಳ ಗೈರು, ಆಕ್ರೋಶ:
ಅನೇಕ ಅಧಿಕಾರಿಗಳ ಗೈರು ಹಾಜರಾತಿಯಲ್ಲಿಯೇ ಕುಷ್ಟಗಿ ತಾಲೂಕಿನ ನಡುವಲಕೊಪ್ಪ ಗ್ರಾಮದಲ್ಲಿ ಕೇಸೂರು ಗ್ರಾಪಂ ಗ್ರಾಮಸಭೆ ಹಾಗೂ ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆ ನಡೆಯಿತು.ಮಂಗಳವಾರ ಬೆಳಗ್ಗೆ ತಾಲೂಕಿನ ನಡುವಲಕೊಪ್ಪದಲ್ಲಿ ಕೇಸೂರು ಗ್ರಾಪಂಯ ಗ್ರಾಮಸಭೆ, ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆ ಆಯೋಜನೆ ಮಾಡಲಾಗಿತ್ತು.ಗ್ರಾಪಂ ಜೆಇ, ಅಕ್ಷರದಾಸೋಹ ಅಧಿಕಾರಿಗಳು, ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪವಿಭಾಗದ ಅಧಿಕಾರಿಗಳು, ಕುಡಿಯುವ ನೀರು ಮತ್ತು ನೈರ್ಮಲ್ಯದ ಅಧಿಕಾರಿಗಳು, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರು, ರೇಷ್ಮೆ ಇಲಾಖೆ, ಸಾಮಾಜಿಕ ವಲಯ ಹಾಗೂ ಪ್ರಾದೇಶಿಕ ವಲಯ ಅರಣ್ಯ ಇಲಾಖೆಯ ಅಧಿಕಾರಿಗಳು ಗೈರಾಗಿದ್ದನ್ನು ಕಂಡ ಗ್ರಾಮಸ್ಥರು ಸಭೆಗೆ ಅಧಿಕಾರಿಗಳು ಯಾಕೆ ಬಂದಿಲ್ಲ. ಅವರು ನಮ್ಮ ಗ್ರಾಪಂ ವ್ಯಾಪ್ತಿಯಲ್ಲಿ ಕೆಲಸ ಮಾಡುವುದಿಲ್ಲವೇ ಎಂದು ಪ್ರಶ್ನಿಸಿದರು.ನಂತರ ಪಿಡಿಒ ಗಂಗಯ್ಯ ವಸ್ತ್ರದ ಮಾತನಾಡಿ, ನಾವು ಒಂದು ವಾರದ ಮುಂಚೆಯೆ ಅವರಿಗೆ ನೋಟಿಸ್ ನೀಡಲಾಗಿದೆ. ಅವರು ಅನ್ಯ ಕೆಲಸದ ಕಾರಣ ಬಂದಿಲ್ಲ ಎಂದು ಹಾರಿಕೆಯ ಉತ್ತರ ನೀಡಿದರು.ಸಾಮಾಜಿಕ ಲೆಕ್ಕಪರಿಶೋಧನೆಯ ಅಧಿಕಾರಿ ರವಿ ಜಂಬಲದಿನ್ನಿ ಮಾತನಾಡಿ, ನರೇಗಾ ಕಾಮಗಾರಿ ಮಾಡಲಾಗಿದ್ದು, ಅವುಗಳ ಕುರಿತು ಆಕ್ಷೇಪಣೆಗಳು ಇದ್ದರೆ ನಮ್ಮ ಗಮನಕ್ಕೆ ತರುವ ಮೂಲಕ ಪರಿಹಾರ ಕಂಡುಕೊಳ್ಳಬೇಕು ಎಂದರು.ಗ್ರಾಮ ಕಾಯಕ ಮಿತ್ರ ಅನಿತಾ ವಾರ್ಡ್ ಸಭೆಯಲ್ಲಿ ಪಟ್ಟಿ ಮಾಡಲಾದ ಕ್ರಿಯಾ ಯೋಜನೆ ಓದಿದರು.