ರಂಭಾಪುರಿ ಪೀಠದಲ್ಲಿ ಕಾರ್ತಿಕ ದೀಪೋತ್ಸವ ನ.27ಕ್ಕೆ

| Published : Nov 22 2023, 01:00 AM IST

ಸಾರಾಂಶ

ರಂಭಾಪುರಿ ಪೀಠದಲ್ಲಿ ಕಾರ್ತಿಕ ದೀಪೋತ್ಸವ ನ.27ಕ್ಕೆನೂತನ ಶಾಲಾ ಕಟ್ಟಡದ ಉದ್ಘಾಟನಾ ಸಮಾರಂಭ

ನೂತನ ಶಾಲಾ ಕಟ್ಟಡದ ಉದ್ಘಾಟನಾ ಸಮಾರಂಭಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ರಂಭಾಪುರಿ ಪೀಠದಲ್ಲಿ ನ.27ರ ಸೋಮವಾರದಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಸಾನ್ನಿಧ್ಯದಲ್ಲಿ ಕಾರ್ತಿಕ ದೀಪೋತ್ಸವ, ಶ್ರೀ ವೀರಭದ್ರಸ್ವಾಮಿ ರಥೋತ್ಸವ ಹಾಗೂ ನೂತನ ಶಾಲಾ ಕಟ್ಟಡ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಶ್ರೀ ಪೀಠದ ವಾರ್ತಾ ಸಂಯೋಜನಾಧಿಕಾರಿ ಸಿ.ಎಚ್.ಬಾಳನಗೌಡ ತಿಳಿಸಿದ್ದಾರೆ.

ನ.27ರ ಬೆಳಿಗ್ಗೆ 10.30ಕ್ಕೆ ಶ್ರೀ ಜಗದ್ಗುರು ರೇಣುಕಾಚಾರ್ಯ ಶಿಕ್ಷಣ ಪ್ರತಿಷ್ಠಾನದ ವೀರಭದ್ರಸ್ವಾಮಿ ವಸತಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಜಗದ್ಗುರು ರುದ್ರಮುನೀಶ್ವರ ವಸತಿ ಪ್ರೌಢಶಾಲೆ ನೂತನ ಕಟ್ಟಡದ ಉದ್ಘಾಟನೆ ನಡೆಯಲಿದೆ. ಸಮಾರಂಭವನ್ನು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಉದ್ಘಾಟಿಸಲಿದ್ದಾರೆ. ಕಾನೂನು ಮತ್ತು ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಖಾತೆ ಸಚಿವ ಎಚ್.ಕೆ.ಪಾಟೀಲ್ ನೂತನ ಕಾರ್ಯಾಲಯ, ಗ್ರಂಥಾಲಯ, ನೂತನ ಶಾಲಾ ಕಟ್ಟಡವನ್ನು ಶಿಕ್ಷಣ ಖಾತೆ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಲಿದ್ದಾರೆ. ಅರಣ್ಯ ಸಚಿವ ಈಶ್ವರ ಖಂಡ್ರೆ ಶ್ರೀಪೀಠದ ಮುಖವಾಣಿ ರಂಭಾಪುರಿ ಬೆಳಗು ಸಂಚಿಕೆ ಬಿಡುಗಡೆ ಮಾಡಲಿದ್ದು, ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಗೌರವಾಧ್ಯಕ್ಷ ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮೀಜಿ ಹಾಗೂ ಅಧ್ಯಕ್ಷ ಮುಕ್ತಿ ಮಂದಿರ ಕ್ಷೇತ್ರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿ ಉಪಸ್ಥಿತರಿರುವರು. ಜಿಪಂ ಮಾಜಿ ಉಪಾಧ್ಯಕ್ಷ ಎಂ.ಎಸ್.ಚನ್ನಕೇಶವ, ಎಂಎಡಿಬಿ ಮಾಜಿ ಅಧ್ಯಕ್ಷೆ ಬಿ.ಸಿ.ಗೀತಾ, ಬಿ.ಕಣಬೂರು ಗ್ರಾಪಂ ಅಧ್ಯಕ್ಷ ಸದಾಶಿವ ಮತ್ತಿತರರು ಭಾಗವಹಿಸುವರು. ಬೆಂಗಳೂರು ಎವಿಎಸ್ ಪ್ರಾಜೆಕ್ಟ್‌ ನ ಕಟ್ಟಡ ಗುತ್ತಿಗೆದಾರ ಬಾಳಯ್ಯ ಇಂಡಿಮಠ, ಕಟ್ಟಡ ವಿನ್ಯಾಸಕಾರ ಸಿ.ತುಕಾರಾಮ, ಹರ್ಷಿತಾ ಕಲ್ಯಾಣಿ ಅವರಿಗೆ ರಂಭಾಪುರಿ ಜಗದ್ಗುರು ಗುರುರಕ್ಷೆ ನೀಡಲಿದ್ದಾರೆ.

ಸಂಜೆ ಜಗದ್ಗುರು ಸಾನ್ನಿಧ್ಯದಲ್ಲಿ ಕಾರ್ತಿಕ ದೀಪೋತ್ಸವ ಹಾಗೂ ಶ್ರೀ ವೀರಭದ್ರಸ್ವಾಮಿ ರಥೋತ್ಸವ ನಾಡಿನ ಭಕ್ತ ಸಮೂಹದೊಂದಿಗೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ೨೧ಬಿಹೆಚ್‌ಆರ್ ೧: ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ಉದ್ಘಾಟನೆಗೆ ಸಿದ್ಧಗೊಂಡಿರುವ ನೂತನ ಶಾಲಾ ಕಟ್ಟಡ.