ಶ್ರದ್ಧಾಭಕ್ತಿಯ ಏಳೂರು ಒಡೆಯ ಯಲಗೂರೇಶ್ವರನ ಕಾರ್ತಿಕೋತ್ಸವ

| Published : Mar 03 2024, 01:30 AM IST

ಸಾರಾಂಶ

ಆಲಮಟ್ಟಿ: ಏಳೂರು ಒಡೆಯ ಯಲಗೂರೇಶ್ವರನ ಕಾರ್ತಿಕೋತ್ಸವಕ್ಕೆ ಶನಿವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಚಾಲನೆ ನೀಡಲಾಯಿತು. ನಸುಕಿನ ಜಾವದಿಂದಲೇ ಸಹಸ್ರಾರು ಸಂಖ್ಯೆಯ ಭಕ್ತರು ಯಲಗೂರದತ್ತ ಆಗಮಿಸುತ್ತಿದ್ದು ಭಕ್ತಿಯ ಪರಾಕಾಷ್ಠೆಗೆ ಸಾಕ್ಷಿಯಾಗಿತ್ತು. ಪಾದಯಾತ್ರೆಯ ಮೂಲಕ ಬಂದ ಭಕ್ತರಿಗೆ ನಾನಾ ಕಡೆಗಳಲ್ಲಿ ಅಲ್ಪೋಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು

ಕನ್ನಡಪ್ರಭ ವಾರ್ತೆ ಆಲಮಟ್ಟಿ: ಏಳೂರು ಒಡೆಯ ಯಲಗೂರೇಶ್ವರನ ಕಾರ್ತಿಕೋತ್ಸವಕ್ಕೆ ಶನಿವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಚಾಲನೆ ನೀಡಲಾಯಿತು. ನಸುಕಿನ ಜಾವದಿಂದಲೇ ಸಹಸ್ರಾರು ಸಂಖ್ಯೆಯ ಭಕ್ತರು ಯಲಗೂರದತ್ತ ಆಗಮಿಸುತ್ತಿದ್ದು ಭಕ್ತಿಯ ಪರಾಕಾಷ್ಠೆಗೆ ಸಾಕ್ಷಿಯಾಗಿತ್ತು. ಪಾದಯಾತ್ರೆಯ ಮೂಲಕ ಬಂದ ಭಕ್ತರಿಗೆ ನಾನಾ ಕಡೆಗಳಲ್ಲಿ ಅಲ್ಪೋಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. ವಿವಿಧ ಆಚಾರ್ಯರ ನೇತೃತ್ವದ ತಂಡ ವೇದಘೋಷಗಳೊಂದಿಗೆ ಪೂಜಾ ಕೈಂಕರ್ಯಗಳನ್ನ ನೆರವೇರಿಸಿದರು. ಅವಳಿ ಜಿಲ್ಲೆಗಳಿಂದ ಬಂದಿದ್ದ ಮಹಿಳೆಯರು, ಹಲವಾರು ಭಜನಾ ತಂಡಗಳು ಶೋಭಾಯಾತ್ರೆಯಲ್ಲಿ ಭಾಗವಹಿಸಿ, ಮೆರಗು ನೀಡಿದರು. ಭಜನೆಯೊಂದಿಗೆ ಮೆರವಣಿಗೆ ಸಾಗಿದ್ದು, ಎಲ್ಲೆಡೆ ಹರ್ಷೋದ್ಘಾರ ಮುಗಿಲು ಮುಟ್ಟಿದ್ದವು. ಗ್ರಾಮದ ತುಂಬೆಲ್ಲಾ ಶೋಭಾಯಾತ್ರೆಯಲ್ಲಿ ಮಹಿಳೆಯರ ಕೋಲಾಟ ಗಮನ ಸೆಳೆಯಿತು. ಯಲಗೂರಿನ ಕಾರ್ತಿಕೋತ್ಸವಕ್ಕೆ ವಿಜಯಪುರ, ಬಾಗಲಕೋಟೆ, ಮುದ್ದೇಬಿಹಾಳ, ಬಸವನ ಬಾಗೇವಾಡಿ, ತೆಲಗಿ, ಹುಬ್ಬಳ್ಳಿ, ಬೆಳಗಾವಿ, ಆಲಮಟ್ಟಿ, ಯಲಗೂರ ಸೇರಿದಂತೆ ವಿವಿಧ ಭಕ್ತರು ಆಗಮಿಸಿದ್ದು, ಭಜನಾ ತಂಡಗಳಿಂದ ಎರಡು ದಿನಗಳ ಕಾಲ ನಿರಂತರ ಭಜನೆ ಸದ್ದು ಜೋರಾಗಿತ್ತು.

ಸಂಗೀತ ಕಾರ್ಯಕ್ರಮ: ಹದಿದಾಸ ಸಂಗೀತ ಸಾಹಿತ್ಯ ವೇದಿಕೆಯಿಂದ ಆಯೋಜಿಸಿರುವ ಅಹೋರಾತ್ರಿ ಸಂಗೀತ ಕಾರ್ಯಕ್ರಮಕ್ಕೆ ವಿ.ಬಿ.ಕುಲಕರ್ಣಿ, ಗೋಪಾಲ ಗದ್ದನಕೇರಿ, ನಾರಾಯಣ ಒಡೆಯರ, ಟ್ರಸ್ಟ್ ಅಧ್ಯಕ್ಷ ಅನಂತ ಓಂಕಾರ, ನರಸಿಂಹ ಆಲೂರವಿ ಇತರರು ಚಾಲನೆ ನೀಡಿದರು. ಇಡೀ ರಾತ್ರಿ ಸಂಗೀತ ಕಾರ್ಯಕ್ರಮ ನಡೆಯಿತು.

ಬಂಡಿ ಸ್ಪರ್ಧೆ: ಗ್ರಾಮದ ಹೊರಭಾಗದಲ್ಲಿ ತೆರದ ಬಂಡಿ ಸ್ಟರ್ಧೆ ಜರುಗಿತು. ದಾಸೋಹ ಸಮಿತಿ ಅಧ್ಯಕ್ಷ ಶ್ಯಾಮ ಪಾತರದ ಬಂಡಿ ಓಟಕ್ಕೆ ಚಾಲನೆ ನೀಡಿದರು. ಪ್ರವಾಸೋದ್ಯಮ ಇಲಾಖೆಯ ಯಾತ್ರಿ ನಿವಾಸದಲ್ಲಿ ಮೂರು ದಿನಗಳ ಕಾಲ ನಿರಂತರ ಅನ್ನದಾಸೋಹ ವ್ಯವಸ್ಥೆ ಮಾಡಿದ್ದಾಗಿ ತಿಳಿಸಿದರು.

ಕಾರ್ತಿಕೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ ಹಿನ್ನಲೆಯಲ್ಲಿ ಎರಡು ದಿನ ಆಲಮಟ್ಟಿಯ ಎಂಎಚ್ಎಂ ಪ್ರೌಢಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ನ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಕೌಟ್ಸ್ ಮಾಸ್ಟರ್ ಎಂ.ಎಚ್.ಬಳಬಟ್ಟಿ ನೇತೃತ್ವದಲ್ಲಿ ಸ್ವಯಂ ಸೇವೆ ನೀಡಿದರು.

ಆರೋಗ್ಯ ತಪಾಸಣೆ: ಪಿ ಎಂ ನಾಡಗೌಡ ದಂತ ಮಹಾವಿದ್ಯಾಲಯದ ವೈದ್ಯರು ಭಕ್ತರಿಗೆ ಉಚಿತ ದಂತ ತಪಾಸಣೆ, ಬಾಗಲಕೋಟೆಯ ಕುಮಾರೇಶ್ವರ ಆಸ್ಪತ್ರೆ, ವಿಜಯಪುರದ ಕಣಬೂರ ಆಸ್ಪತ್ರೆಗಳಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ಕೂಡ ಆಯೋಜನೆ ಮಾಡಲಾಗಿತ್ತು.