ಮಲೆನಾಡಿನ ಅವಿಭಾಜ್ಯ ಅಂಗವಾದ ಕರೂರು ಮತ್ತು ಬಾರಂಗಿ ಹೋಬಳಿಯ ಸಾರ್ವಜನಿಕರ ದೈನಂದಿನ ಬದುಕಿನ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವಲ್ಲಿ ತಾಲೂಕು, ಜಿಲ್ಲಾ ಹಾಗೂ ರಾಜ್ಯ ಸರ್ಕಾರಗಳು ಸಂಪೂರ್ಣ ನಿಷ್ಕ್ರಿಯವಾಗಿವೆ ಎಂದು ಆರೋಪಿಸಿ ಬಿಜೆಪಿ ಮಹಾ ಶಕ್ತಿ ಕೇಂದ್ರ ಕುದುರೂರು ಘಟಕದ ವತಿಯಿಂದ ಮಾ.31ರಂದು ಬೃಹತ್ ಜನಜಾಗೃತಿ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಬ್ಯಾಕೋಡು

ಮಲೆನಾಡಿನ ಅವಿಭಾಜ್ಯ ಅಂಗವಾದ ಕರೂರು ಮತ್ತು ಬಾರಂಗಿ ಹೋಬಳಿಯ ಸಾರ್ವಜನಿಕರ ದೈನಂದಿನ ಬದುಕಿನ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವಲ್ಲಿ ತಾಲೂಕು, ಜಿಲ್ಲಾ ಹಾಗೂ ರಾಜ್ಯ ಸರ್ಕಾರಗಳು ಸಂಪೂರ್ಣ ನಿಷ್ಕ್ರಿಯವಾಗಿವೆ ಎಂದು ಆರೋಪಿಸಿ ಬಿಜೆಪಿ ಮಹಾ ಶಕ್ತಿ ಕೇಂದ್ರ ಕುದುರೂರು ಘಟಕದ ವತಿಯಿಂದ ಮಾ.31ರಂದು ಬೃಹತ್ ಜನಜಾಗೃತಿ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.

ಕುದರೂರು ಮಹಾಶಕ್ತಿ ಕೇಂದ್ರದ ನೇತೃತ್ವದಲ್ಲಿ ನಡೆಯಲಿರುವ ಈ ಪಾದಯಾತ್ರೆಯು ಬ್ಯಾಕೋಡಿನಿಂದ ಆರಂಭವಾಗಿ ತುಮರಿವರೆಗೆ ಸಾಗಲಿದೆ. ಅಂದು ಮಧ್ಯಾಹ್ನ 12.30ಕ್ಕೆ ಈ ಪ್ರತಿಭಟನಾ ಮೆರವಣಿಗೆಯು ಚಾಲನೆ ಪಡೆಯಲಿದ್ದು, ಸಂಜೆ 5.30ರವರೆಗೆ ನಡೆಯುವ ಈ ಹೋರಾಟದ ಮೂಲಕ ಸರ್ಕಾರದ ಕಿವುಡು ಆಡಳಿತವನ್ನು ಎಚ್ಚರಿಸುವ ಪ್ರಯತ್ನ ಮಾಡಲಾಗುವುದು ಎಂದು ಬಿಜೆಪಿ ಮುಖಂಡರು ತಿಳಿಸಿದ್ದಾರೆ.

ಸರ್ಕಾರದ ವಿರುದ್ಧ ಕಿಡಿ:

ಕರೂರು-ಬಾರಂಗಿ ಹೋಬಳಿಯಲ್ಲಿ ಅರಣ್ಯ ಇಲಾಖೆಯ ದರ್ಬಾರ್ ಮಿತಿ ಮೀರಿದೆ. ರೈತರು ತಮ್ಮ ಸ್ವಂತ ತೋಟದ ಕೆಲಸಕ್ಕೆ ಮಣ್ಣು ತೆಗೆಯಲು ಕೂಡ ಅರಣ್ಯ ಇಲಾಖೆಯ ಅನುಮತಿ ಬೇಡುವ ಅನಿವಾರ್ಯತೆ ಎದುರಾಗಿದೆ. ಅನುಮತಿ ನೀಡಲು ಹಣದ ಬೇಡಿಕೆ ಇಡಲಾಗುತ್ತಿದೆ. ತಾಲ್ಲೂಕು ಆಡಳಿತವು ಅರಣ್ಯ ಇಲಾಖೆಯ ಈ ದೌರ್ಜನ್ಯದ ಮುಂದೆ ಅಸಹಾಯಕವಾಗಿದೆ. ಸಂಪೂರ್ಣ ಕಿವುಡ, ಮೂಗ, ಕುರುಡ ಸರ್ಕಾರವಾಗಿದೆ ಎಂದು ಮಹಾಶಕ್ತಿ ಕೇಂದ್ರ ಕುದುರೂರು ಇಲ್ಲಿನ ಅಧ್ಯಕ್ಷ ಸುಧೀಂದ್ರ ಭಟ್ ದೂರಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಬಡವರಿಗೆ ಒಂದೇ ಒಂದು ಹೊಸ ಮನೆಯನ್ನು ಮಂಜೂರು ಮಾಡಿಲ್ಲ ಎಂದು ಬಿಜೆಪಿ ತಾಲೂಕು ಕಾರ್ಯದರ್ಶಿ ನಾಗರಾಜ್ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಗ್ರಾಮ ಸಭೆಗಳಲ್ಲಿ ಕೇವಲ ಫಲಾನುಭವಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆಯೇ ಹೊರತು, ಮನೆ ನೀಡುವ ಪ್ರಕ್ರಿಯೆ ನಡೆಯುತ್ತಿಲ್ಲ. ಪ್ರಸ್ತುತ ವಿತರಿಸಲಾಗುತ್ತಿರುವ ಮನೆಗಳು ಕೇಂದ್ರ ಸರ್ಕಾರ ವಸತಿ ಯೋಜನೆಯಡಿ ನೀಡಿದವುಗಳಾಗಿವೆ. ರಾಜ್ಯ ಸರ್ಕಾರ ಬಡವರ ವಸತಿ ಹಕ್ಕನ್ನು ಕಸಿದುಕೊಳ್ಳುತ್ತಿದೆ ಎಂದು ಆರೋಪಿಸಿದರು.

ಶಿಕ್ಷಣದ ಕುಸಿತ:

ಹೋಬಳಿಯ 38 ಶಾಲೆಗಳ ಪೈಕಿ 30 ಶಾಲೆಗಳಲ್ಲಿ ಕಾಯಂ ಶಿಕ್ಷಕರೇ ಇಲ್ಲ. ಹೊರಗಿನಿಂದ ಬರುವ ಅತಿಥಿ ಶಿಕ್ಷಕರಿಗೆ ನೀಡುವ ವೇತನ ಸಾಲದ ಕಾರಣ ಅವರು ಬರುತ್ತಿಲ್ಲ. ಇದರಿಂದ ಗ್ರಾಮೀಣ ಮಕ್ಕಳ ಭವಿಷ್ಯ ಮಂಕಾಗುತ್ತಿದೆ. ಆರೋಗ್ಯ ವ್ಯವಸ್ಥೆ: ತುಮರಿ ಮತ್ತು ಬ್ಯಾಕೋಡು ಆಸ್ಪತ್ರೆಗಳು ಸಿಬ್ಬಂದಿಗಳಿಲ್ಲದೆ ಸೊರಗುತ್ತಿವೆ. ತುರ್ತು ಚಿಕಿತ್ಸೆಯೂ ಜನರಿಗೆ ಮರೀಚಿಕೆಯಾಗಿದೆ ಎಂದು ಬಿಜೆಪಿ ಮುಖಂಡರು ದೂರಿದರು.

‘ಈ-ಸ್ವತ್ತು’ ಸಾಫ್ಟ್‌ವೇರ್ ವಿಳಂಬ: ಕಳೆದ ಆರು ತಿಂಗಳಿನಿಂದ ಈ-ಸ್ವತ್ತು ಸಾಫ್ಟ್‌ವೇರ್ ಅಪ್‌ಡೇಟ್ ನೆಪದಲ್ಲಿ ರಾಜ್ಯಾದ್ಯಂತ ಕೆಲಸ ಸ್ಥಗಿತಗೊಂಡಿದೆ. ಇದರಿಂದ ಹೊಸ ಮನೆಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಬೇಕಾದ ದಾಖಲೆಗಳು ಸಿಗದೆ ಜನರು ಕತ್ತಲಲ್ಲಿ ಕಳೆಯುವಂತಾಗಿದೆ ಎಂದರು.

ಪಾದಯಾತ್ರೆಯ ಹಕ್ಕೊತ್ತಾಯಗಳು:

ಬಗರ್ ಹುಕುಂ ಮತ್ತು 94 ಸಿ ಅಡಿಯಲ್ಲಿ ಬಾಕಿ ಇರುವ ಹಕ್ಕುಪತ್ರಗಳನ್ನು ಕೂಡಲೇ ವಿತರಿಸಬೇಕು. ವಸತಿ ಯೋಜನೆಯಡಿ ಕಳೆದ 3 ವರ್ಷಗಳಿಂದ ವಂಚಿತರಾದವರಿಗೆ ಮನೆಗಳನ್ನು ಮಂಜೂರು ಮಾಡಬೇಕು. ಸೇತುವೆ ನಿರ್ಮಾಣವಾದರೂ ಹಳ್ಳಿ ಹಳ್ಳಿಗಳಿಗೆ ಸರ್ಕಾರಿ ಸಾರಿಗೆ ವ್ಯವಸ್ಥೆಯನ್ನು ಆರಂಭಿಸಬೇಕು. ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಮತ್ತು ಇತರ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು.

ಈ ಬೃಹತ್ ಪಾದಯಾತ್ರೆಯಲ್ಲಿ ಮಾಜಿ ಸಚಿವರಾದ ಹರತಾಳು ಹಾಲಪ್ಪ, ಟಿ.ಡಿ. ಮೇಗರಾಜ್, ಕೇಂದ್ರ ಸಾಂಬಾರ ಮಂಡಳಿಯ ಸದಸ್ಯರಾದ ಪ್ರಸನ್ನ ಕೆರಕೈ. ಕೆ.ಎಸ್.ಪ್ರಶಾಂತ್.ರಾಜನಂದಿನಿ ಕಾಗೋಡು . ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ. ಅನೇಕ ಪ್ರಮುಖ ಮುಖಂಡರು ಭಾಗವಹಿಸಲಿದ್ದಾರೆ.

ಗಣಪತಿ ಇನ್ಸೋಡಿ. ಬಿಜೆಪಿ ತಾಲೂಕು ಕಾರ್ಯದರ್ಶಿ ಸಾವಿತ್ರಿ ಶಿವರಾಜ್. ಸಚಿನ್ ತುಮರಿ. ಶ್ರೀಧರ್ ಚುಟ್ಟಿಕೆರೆ.ಸತೀಶ್ ಹೊನ್ನಳ್ಳಿ. ಗೋವರ್ಧನ ಅರಬಳ್ಳಿ ಇದ್ದರು.

ಆಡಳಿತಾರೂಢ ಪಕ್ಷದ ಮುಖಂಡರ ಮನೆಗಳಲ್ಲಿ ಅಕ್ರಮ ಮದ್ಯ ಮಾರಾಟ ರಾಜಾರೋಷವಾಗಿ ನಡೆಯುತ್ತಿದೆ. ಇದನ್ನು ಪ್ರಶ್ನಿಸಿದ ಮಹಿಳೆಯರಿಗೆ ಬೆದರಿಕೆ ಹಾಕಲಾಗುತ್ತಿದೆ. ಪೊಲೀಸರು ಅಕ್ರಮ ಮದ್ಯದ ಬಗ್ಗೆ ಮೌನ ವಹಿಸಿ, ಬಡವರು ಮನೆ ಕಟ್ಟಲು ಬಳಸುವ ಕೇವಲ ಕಲ್ಲು-ಮರಳು ಸಾಗಿಸುವ ಗಾಡಿಗಳನ್ನು ಹಿಡಿಯಲು ರಾತ್ರಿಯಿಡೀ ಹೊಂಚು ಹಾಕುತ್ತಿದ್ದಾರೆ. ಅಧಿಕಾರಿಗಳ ಮೇಲೆ ಸರ್ಕಾರದ ಹಿಡಿತವೇ ತಪ್ಪಿಹೋಗಿದೆ.

ಮಂಜಯ್ಯ ಸಂಸೆ. ಮಾಜಿ ಕೆಡಿಪಿ ಸದಸ್ಯ.