ಕಾರವಾರ ಕಾಂಗ್ರೆಸ್‌ ಶಾಸಕ ಸತೀಶ್‌ ಶೈಲ್‌ ಬಂಧನ : 6 ಕೇಸ್‌ಗಳಲ್ಲಿ ಸೈಲ್‌ ಸೇರಿ 7 ಜನ ದೋಷಿ

| Published : Oct 25 2024, 01:02 AM IST / Updated: Oct 25 2024, 05:32 AM IST

Satish Sail
ಕಾರವಾರ ಕಾಂಗ್ರೆಸ್‌ ಶಾಸಕ ಸತೀಶ್‌ ಶೈಲ್‌ ಬಂಧನ : 6 ಕೇಸ್‌ಗಳಲ್ಲಿ ಸೈಲ್‌ ಸೇರಿ 7 ಜನ ದೋಷಿ
Share this Article
  • FB
  • TW
  • Linkdin
  • Email

ಸಾರಾಂಶ

ಬೇಲೆಕೇರಿ ಬಂದರಿನಿಂದ ಅದಿರು ನಾಪತ್ತೆಯಾದ ಪ್ರಕರಣದ ಸಂಬಂಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಮಹತ್ವದ ಆದೇಶ ಪ್ರಕಟಿಸಿದ್ದು, ಕಾರವಾರದ ಕಾಂಗ್ರೆಸ್‌ ಶಾಸಕ ಸತೀಶ್‌ ಸೈಲ್‌ ಸೇರಿದಂತೆ ಏಳು ಮಂದಿಯನ್ನು ಆರು ಪ್ರಕರಣಗಳಲ್ಲಿ ದೋಷಿ ಎಂದು ತೀರ್ಪು ನೀಡಿದೆ.

ಬೆಂಗಳೂರು : ಬೇಲೆಕೇರಿ ಬಂದರಿನಿಂದ ಅದಿರು ನಾಪತ್ತೆಯಾದ ಪ್ರಕರಣದ ಸಂಬಂಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಮಹತ್ವದ ಆದೇಶ ಪ್ರಕಟಿಸಿದ್ದು, ಕಾರವಾರದ ಕಾಂಗ್ರೆಸ್‌ ಶಾಸಕ ಸತೀಶ್‌ ಸೈಲ್‌ ಸೇರಿದಂತೆ ಏಳು ಮಂದಿಯನ್ನು ಆರು ಪ್ರಕರಣಗಳಲ್ಲಿ ದೋಷಿ ಎಂದು ತೀರ್ಪು ನೀಡಿದೆ.

ನ್ಯಾಯಾಲಯದ ತೀರ್ಪು ಹೊರಬಿದ್ದ ಬೆನ್ನಲ್ಲೇ ಸಿಬಿಐ ಅಧಿಕಾರಿಗಳು ಶಾಸಕ ಸತೀಶ್‌ ಸೈಲ್‌, ಬಂದರು ಸಂರಕ್ಷಣಾಧಿಕಾರಿ ಮಹೇಶ್‌ ಬಿಳೆಯಿ, ಸತೀಶ್‌ ಸೈಲ್‌ ಆಪ್ತ ಚೇತನ್‌ ಸಾಹ, ಲಾಲ್ ಮಹಲ್ ಕಂಪನಿಯ ಮುಖ್ಯಸ್ಥ ಪ್ರೇಮ್‌ಚಂದ್ ಗರ್ಗ್‌, ಶ್ರೀಲಕ್ಷ್ಮೀ ವೆಂಕಟೇಶ್ವರ ಟ್ರೇಡರ್ಸ್ ಮಾಲೀಕ ಕಾರದಪುಡಿ ಮಹೇಶ್, ಸ್ವಸ್ತಿಕ್ ಕಂಪನಿ ಮಾಲಿಕ ಸ್ವಸ್ತಿಕ್‌ ನಾಗರಾಜ್ ಸೇರಿದಂತೆ ಏಳು ಮಂದಿಯನ್ನು ಬಂಧಿಸಿದರು.

ಇನ್ನು, ಅಪರಾಧಿಗಳ ವಿರುದ್ಧ ನ್ಯಾಯಾಲಯವು ಶುಕ್ರವಾರ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ. ಬೇಲೆಕೇರಿ ಬಂದರಿನಲ್ಲಿ ಜಪ್ತಿ ಮಾಡಲಾದ 11,312 ಮೆಟ್ರಿಕ್ ಟನ್ ಅದಿರನ್ನು ಅನುಮತಿ ಇಲ್ಲದೆ ಸಾಗಾಟ ಮಾಡಿದ ಆರೋಪವು ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿ ಎಂದು ತೀರ್ಪು ನೀಡಲಾಗಿದೆ.

ಅದಿರು ನಾಪತ್ತೆ ಪ್ರಕರಣ ಸಂಬಂಧ ಶುಕ್ರವಾರಕ್ಕೆ ಶಿಕ್ಷೆಯ ಪ್ರಮಾಣವನ್ನು ಕಾಯ್ದಿರಿಸಿದ ನ್ಯಾಯಾಲಯವು ತಕ್ಷಣವೇ ಅಪರಾಧಿಗಳನ್ನು ವಶಕ್ಕೆ ಪಡೆಯುವಂತೆ ಸೂಚನೆ ನೀಡಿತು. ಹೀಗಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ಆರೋಪಿಗಳನ್ನು ಸಿಬಿಐ ಅಧಿಕಾರಿಗಳು ಬಂಧಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಆರು ಪ್ರಕರಣಗಳಲ್ಲಿ ಅಂತಿಮ ಆದೇಶ ಹೊರಡಿಸಲಾಗಿದೆ. ದಾಖಲಾದ ಆರು ಪ್ರಕರಣಗಳ ಬಗ್ಗೆ ತನಿಖೆ ನಡೆಸಿ ಸಿಬಿಐ ಆರೋಪ ಪಟ್ಟಿ ಸಲ್ಲಿಕೆ ಮಾಡಿತ್ತು.

ಶಾಸಕ ಸತೀಶ್ ಸೈಲ್ ಮಾಲಿಕತ್ವದ ಮಲ್ಲಿಕಾರ್ಜುನ ಶಿಪ್ಪಿಂಗ್‌ ಪ್ರೈ.ಲಿ. ಕಂಪನಿಯು ಅದಿರು ನಾಪತ್ತೆ ಪ್ರಕರಣದ ಕೇಂದ್ರಬಿಂದುವಾಗಿದೆ. ಸುಪ್ರೀಂಕೋರ್ಟ್‌ 2009ರಿಂದ ಮೇ 2010ರ ನಡುವೆ ರಾಜ್ಯದಲ್ಲಿ ನಡೆದ ಅಕ್ರಮ ಗಣಿಗಾರಿಕೆ ಮತ್ತು ಅಕ್ರಮ ಅದಿರು ಸಾಗಣೆ ಕುರಿತು ತನಿಖೆ ನಡೆಸುವಂತೆ ಸೂಚನೆ ನೀಡಿತ್ತು. ಅದರಂತೆ ಸಿಬಿಐ 2013ರ ಸೆ.13ರಂದು ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಂಡಿತ್ತು.

ಸತೀಶ್‌ ಸೈಲ್ ಮಾಲಿಕತ್ವದ ಕಂಪನಿ ಸುಮಾರು 7.23 ಲಕ್ಷ ಟನ್ ಮೆಟ್ರಿಕ್ ಅದಿರನ್ನು ಬೇಲೆಕೇರಿ ಮೂಲಕ ವಿದೇಶಕ್ಕೆ ರಫ್ತು ಮಾಡಿರುವುದು ತನಿಖೆಯಲ್ಲಿ ಕಂಡುಬಂತು. ಬೇಲೆಕೇರಿ ಬಂದರಿನ ಮೂಲಕ ಸುಮಾರು 88.06 ಲಕ್ಷ ಮೆಟ್ರಿಕ್ ಟನ್ ಅದಿರನ್ನು 73 ರಫ್ತು ಕಂಪನಿಗಳ ಮೂಲಕ ವಿದೇಶಕ್ಕೆ ರವಾನೆ ಮಾಡಲಾಗಿತ್ತು ಎಂಬುದನ್ನು ಕೇಂದ್ರೀಯ ಸಮಿತಿ ಪ್ರಾಧಿಕಾರ (ಸಿಇಸಿ) ವರದಿಯಲ್ಲಿ ಉಲ್ಲೇಖ ಮಾಡಲಾಗಿತ್ತು. ಆರೋಪಿಗಳ ಜತೆ ಸಂಚು ರೂಪಿಸಿ ಸತೀಶ್‌ ಸೈಲ್‌ ಅದಿರನ್ನು ಅಕ್ರಮವಾಗಿ ರಫ್ತು ಮಾಡಿದ್ದರು. ಹೀಗೆ ರಫ್ತಾಗಿರುವ ಅದಿರಿನಲ್ಲಿ 7.23 ಲಕ್ಷ ಮೆಟ್ರಿಕ್ ಟನ್ ಅದಿರನ್ನು ಸತೀಶ್ ಸೈಲ್ ಒಡೆತನದ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈ.ಲಿ. ಕಂಪನಿಯೇ ರಫ್ತು ಮಾಡಿತ್ತು ಎಂದು ಸಿಬಿಐ ಆರೋಪಿಸಿತ್ತು.

ಶಾಸಕರಾಗಿದ್ದಲೇ ಎರಡನೇ ಬಾರಿ ಬಂಧನ:

ಅದಿರು ಅಕ್ರಮ ರಫ್ತು ಪ್ರಕರಣದಲ್ಲಿ ಸಿಬಿಐ 2012ರ ಸೆ.16ರಂದು ಶಾಸಕ ಸತೀಶ್ ಸೈಲ್ ಮನೆಯ ಮೇಲೆ ದಾಳಿ ಮಾಡಿ ಮಹತ್ವದ ದಾಖಲೆ ವಶಪಡಿಸಿಕೊಂಡಿತ್ತು. ನಂತರ 2013ರ ಸೆ.20ರಂದು ಸತೀಶ್‌ ಸೈಲ್ ಅವರನ್ನು ಬಂಧಿಸಿತ್ತು. ಒಂದು ವರ್ಷಕ್ಕೂ ಅಧಿಕ ಕಾಲ ಜೈಲು ವಾಸ ಅನುಭವಿಸಿದ್ದ ಅವರು, 2014ರ ಡಿ.16ರಂದು ಜಾಮೀನು ಪಡೆದು ಹೊರಬಂದಿದ್ದರು.

ನಂತರ 2018ರಲ್ಲಿ ಕಾಂಗ್ರೆಸ್ ಪಕ್ಷದಿಂದ ಚುನಾವಣೆಯಲ್ಲಿ ಸ್ಪರ್ಧಿಸಿ ಬಿಜೆಪಿಯ ರೂಪಾಲಿ ನಾಯ್ಕ್‌ ವಿರುದ್ಧ ಸೋತಿದ್ದರು. 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಕಾರವಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.

ಏನಿದು ಪ್ರಕರಣ? ಏನಿದು ಬೇಲೆಕೇರಿ ಅದಿರು ಪ್ರಕರಣ?

- ಬಳ್ಳಾರಿ, ಚಿತ್ರದುರ್ಗ ಜಿಲ್ಲೆಯ ಅರಣ್ಯ ಪ್ರದೇಶಗಳಿಂದ ಅಕ್ರಮವಾಗಿ ಕಬ್ಬಿಣದ ಅದಿರು ವಿದೇಶಕ್ಕೆ ರಫ್ತಾಗುತ್ತಿತ್ತು - 2009ರ ಮಾ.20ರಂದು ಅರಣ್ಯ ಇಲಾಖೆ ₹350 ಕೋಟಿ ಮೌಲ್ಯದ 8.5 ಲಕ್ಷ ಮೆಟ್ರಿಕ್‌ ಟನ್‌ ಅದಿರು ಜಪ್ತಿ ಮಾಡಿತ್ತು- ಈ ಅದಿರನ್ನು ಕಾಯ್ದುಕೊಳ್ಳುವಂತೆ ಬಂದರು ಇಲಾಖೆಗೆ ಅರಣ್ಯ ಇಲಾಖೆಯು ಕಟ್ಟುನಿಟ್ಟಿನ ಸೂಚನೆಯನ್ನು ನೀಡಿತ್ತು- ಕೆಲ ದಿನ ಬಳಿಕ ಅರಣ್ಯ ಇಲಾಖೆ ಮರುಪರಿಶೀಲಿಸಿದಾಗ ಬಂದರಿನಲ್ಲಿ ಕೇವಲ 2 ಲಕ್ಷ ಮೆಟ್ರಿಕ್‌ ಟನ್‌ ಅದಿರು ಮಾತ್ರ ಇತ್ತು- 250 ಕೋಟಿ ರು. ಅದಿರು ನಾಪತ್ತೆ ಬಗ್ಗೆ ಬಂದರು ಅಧಿಕಾರಿ, ಅದಿರು ಕಂಪನಿಗಳ ವಿರುದ್ಧ ಅರಣ್ಯ ಇಲಾಖೆ ದೂರು ನೀಡಿತ್ತು- ಈ ಅಕ್ರಮವೆಸಗಿದ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತರು ಸರ್ಕಾರಕ್ಕೆ ವರದಿ ಸಲ್ಲಿಸಿ ಒತ್ತಾಯಿಸಿದ್ದರು- ಆಗ ಹಗರಣ ಬೆಳಕಿಗೆ ಬಂದಿತ್ತು. ಸಂಬಂಧ ಸ್ಪಂದನೆ ಸಿಗಲಿಲ್ಲ ಎಂದು ನ್ಯಾ। ಸಂತೋಷ್‌ ಹೆಗ್ಡೆ ರಾಜೀನಾಮೆಗೆ ಮುಂದಾಗಿದ್ದರು- 2010ರ ಜೂ.23ರಂದು ಸರ್ಕಾರ ಪ್ರಕರಣವನ್ನು ಸಿಐಡಿಗೆ ಒಪ್ಪಿಸಿತ್ತು. 2011ರಲ್ಲಿ ಪ್ರಕರಣವನ್ನು ಸಿಬಿಐಗೆ ಸುಪ್ರೀಂಗೆ ವಹಿಸಿತ್ತು

ಸೈಲ್‌ಗೆ 2ನೇ ಬಾರಿ ಜೈಲ್‌

ಅದಿರು ಅಕ್ರಮ ರಫ್ತು ಪ್ರಕರಣದಲ್ಲಿ ಸಿಬಿಐ 2012ರ ಸೆ.16ರಂದು ಶಾಸಕ ಸತೀಶ್ ಸೈಲ್ ಮನೆಯ ಮೇಲೆ ದಾಳಿ ಮಾಡಿ ಮಹತ್ವದ ದಾಖಲೆ ವಶಪಡಿಸಿಕೊಂಡಿತ್ತು. ನಂತರ 2013ರ ಸೆ.20ರಂದು ಸತೀಶ್‌ ಸೈಲ್ ಅವರನ್ನು ಬಂಧಿಸಿತ್ತು. ಒಂದು ವರ್ಷಕ್ಕೂ ಅಧಿಕ ಕಾಲ ಜೈಲು ವಾಸ ಅನುಭವಿಸಿದ್ದ ಅವರು, 2014ರ ಡಿ.16ರಂದು ಜಾಮೀನು ಪಡೆದು ಹೊರಬಂದಿದ್ದರು.

2 ವರ್ಷಕ್ಕಿಂತ ಅಧಿಕ ಶಿಕ್ಷೆಯಾದರೆ ಅನರ್ಹ

ಅದಿರು ನಾಪತ್ತೆಗೆ ಸಂಬಂಧಿಸಿದ ಆರು ಪ್ರಕರಣಗಳಲ್ಲಿ ಶಾಸಕ ಸತೀಶ್‌ ಸೈಲ್‌ ತಪ್ಪಿತಸ್ಥ ಎಂದು ಕೋರ್ಟ್‌ ತೀರ್ಪು ನೀಡಿದೆ. ಶುಕ್ರವಾರ ಶಿಕ್ಷೆಯ ಪ್ರಮಾಣ ಪ್ರಕಟಿಸಲಿದೆ. 2 ವರ್ಷಕ್ಕಿಂತ ಅಧಿಕ ಶಿಕ್ಷೆಯಾದರೆ ಅವರು ಶಾಸಕ ಸ್ಥಾನದಿಂದ ಅನರ್ಹಗೊಳ್ಳಲಿದ್ದಾರೆ.