ಸಾರಾಂಶ
ಕಾರವಾರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ನಂತರ ಹಳಿಯಾಳಕ್ಕೆ ಅವರ ಅಧಿಕೃತ ಪಾಲನಾ ಪ್ರಥಮ ಭೇಟಿಯಾಗಿದೆ.
ಹಳಿಯಾಳ; ಕ್ರೈಸ್ತ ಧರ್ಮಗುರು, ಕಾರವಾರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಡುಮಿಂಗ್ ಡಯಾಸ್ ಶನಿವಾರ ಎರಡು ದಿನಗಳ ಪಾಲನಾ ಸಂದರ್ಶನದ ಭೇಟಿಗಾಗಿ ಹಳಿಯಾಳಕ್ಕೆ ಆಗಮಿಸಿದರು.
ಕಾರವಾರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ನಂತರ ಹಳಿಯಾಳಕ್ಕೆ ಅವರ ಅಧಿಕೃತ ಪಾಲನಾ ಪ್ರಥಮ ಭೇಟಿಯಾಗಿದೆ. ಬೆಳಗ್ಗೆ 10 ಗಂಟೆಗೆ ಪುರಪ್ರವೇಶ ಮಾಡಿದ ಧರ್ಮಾಧ್ಯಕ್ಷರನ್ನು ಇಲ್ಲಿಯ ಮಿಲಾಗ್ರಿಸ್ ಸಮುದಾಯ ಭವನದ ಬಳಿ ನಡೆದ ಕಾರ್ಯಕ್ರಮದಲ್ಲಿ ಹಳಿಯಾಳದ ಮಿಲಾಗ್ರಿಸ್ ಚರ್ಚ್ ಗುರು ಫ್ರಾನ್ಸಿಸ್ ಮಿರಾಂಡ ಸಕಲ ಗೌರವಗಳೊಂದಿಗೆ ಶಾಸ್ತ್ರೋಕ್ತವಾಗಿ ಬರಮಾಡಿಕೊಂಡರು.ನಂತರ ಧರ್ಮಾಧ್ಯಕ್ಷರನ್ನು ಮಿಲಾಗ್ರಿಸ್ ಚರ್ಚ್‌ವರೆಗೆ ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಲಾಯಿತು. ಮೆರವಣಿಗೆಯಲ್ಲಿ ಪಾಲ್ಗೊಂಡ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ಕ್ರೈಸ್ತರು ಧಾರ್ಮಿಕ ಗೀತೆಗಳನ್ನು ಹಾಡುತ್ತಾ ಪ್ರಾರ್ಥನೆ ಪಠಿಸುತ್ತಾ ಸಾಗಿದರು.
ಮಿಲಾಗ್ರಿಸ್ ಚರ್ಚಿಗೆ ಆಗಮಿಸಿದ ಧರ್ಮಾಧ್ಯಕ್ಷರು ವಿಶೇಷ ಪ್ರಾರ್ಥನಾ ವಿಧಿಗಳನ್ನು ನಡೆಸಿ, ಸರ್ವರ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದರು. ಈ ಪೂಜಾ ವಿಧಿಯಲ್ಲಿ ಚರ್ಚ್ ಸಹಾಯಕ ಗುರು ಅರುಣ ಫರ್ನಾಂಡೀಸ್ ಹಾಗೂ ಕಾರ್ಮೆಲ್ಮ ಕನ್ಯಾಸ್ತ್ರೀ ಮಠದ ಭಗಿಣಿಯರು, ಕ್ರೈಸ್ತರು ಇದ್ದರು.ಎರಡು ದಿನಗಳ ಹಳಿಯಾಳದ ಭೇಟಿಯಲ್ಲಿ ಧರ್ಮಾಧ್ಯಕ್ಷರು ಹಳಿಯಾಳ ಮಿಲಾಗ್ರಿಸ್ ಚರ್ಚ್ ವ್ಯಾಪ್ತಿಗೊಳಪಡುವ ಗ್ರಾಮೀಣ ಭಾಗದ ಚರ್ಚ್‌ಗಳಿಗೆ ಹಾಗೂ ಅಲ್ಲಿನ ಕ್ರೈಸ್ತ ಧರ್ಮಿಯರನ್ನು ಭೇಟಿ ಮಾಡಲಿದ್ದಾರೆ. ಹಾಗೆಯೇ ಅನಾರೋಗ್ಯದಿಂದ ಪೀಡಿತರಾದವರನ್ನು ಭೇಟಿಯಾಗಿ ಅವರೊಂದಿಗೆ ಚರ್ಚೆ ನಡೆಸಿ ಪ್ರಾರ್ಥಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಪಟ್ಟಣದಲ್ಲಿರುವ ಕ್ರೈಸ್ತ ಶಿಕ್ಷಣ ಸಂಸ್ಥೆಗಳು, ಮಿಲಾಗ್ರಿಸ್ ಚರ್ಚ್‌ನಲ್ಲಿರುವ ಸಂಘ ಸಂಸ್ಥೆಗಳ ಸದಸ್ಯರೊಂದಿಗೆ ಚರ್ಚೆ ಸಂವಾದ ನಡೆಸಲಿದ್ದಾರೆ.