ಸಾರಾಂಶ
ಕಾರವಾರ: ನಗರದಲ್ಲಿ ಭಾನುವಾರ ನಡೆಯುವ ವಾರದ ಸಂತೆಯಲ್ಲಿ ಒಣಮೀನಿನ ಭರಾಟೆ ಜೋರಾಗಿದ್ದು, ಮಳೆಗಾಲ ಆರಂಭಕ್ಕೂ ಮೊದಲು ಒಣಮೀನು ಖರೀದಿಸಿ ದಾಸ್ತಾನು ಮಾಡುವುದು ಕರಾವಳಿಯಲ್ಲಿ ವಾಡಿಕೆಯಾಗಿದೆ.
ಜೂನ್, ಜುಲೈ ತಿಂಗಳಲ್ಲಿ ಸಮುದ್ರ ಪ್ರಕ್ಷುಬ್ಧವಾಗಿರುವುದರಿಂದ ಹಾಗೂ ಮೀನುಗಳ ಸಂತಾನೋತ್ಪತ್ತಿ ಅವಧಿಯಾಗಿರುವುದರಿಂದ ಯಾಂತ್ರೀಕೃತ ಮೀನುಗಾರಿಕೆಯನ್ನು ಸರ್ಕಾರ ನಿಷೇಧ ಹೇರುತ್ತದೆ. ಹೀಗಾಗಿ ಮಾರುಕಟ್ಟೆಗೆ ಹಸಿಮೀನು ಪೂರೈಕೆ ಕಡಿಮೆಯಾಗುತ್ತದೆ. ಮಳೆಗಾಲದಲ್ಲಿ ಹಸಿ ಮೀನು ಹಾಗೂ ಕಾಯಿಪಲ್ಯೆಗಳ ಬೆಲೆ ಗಗನಕ್ಕೇರುವುದರಿಂದ ಖರೀದಿ ಮಾಡಿದ ಒಣಮೀನನ್ನೇ ಬಳಕೆಗೆ ಉಪಯೋಗಿಸುತ್ತಾರೆ. ಕಾರಣ ಮತ್ಸ್ಯಪ್ರಿಯರು ಮಳೆಗಾಲದ ಅವಧಿಯಲ್ಲಿ ಬಳಕೆ ಮಾಡಿಕೊಳ್ಳಲು ಒಣಮೀನು ಖರೀದಿಯನ್ನು ಮಾಡಿಕೊಳ್ಳುತ್ತಾರೆ. ಕರಾವಳಿ ಭಾಗದಲ್ಲಿ ಮೀನು ಪ್ರಮುಖ ಆಹಾರಗಳಲ್ಲಿ ಒಂದಾಗಿದೆ. ಪ್ರತಿನಿತ್ಯ ಮೀನು ಸೇವನೆ ಸಾಮಾನ್ಯವಾಗಿ ನಡೆಯುತ್ತದೆ.ಮೀನು ದರ: ಭಾನುವಾರದ ಮಾರಕಟ್ಟೆಯಲ್ಲಿ ಬಂಗುಡೆ ೧೦೦ಕ್ಕೆ ₹೮೦೦, ಶೆಟ್ಲಿ ೫ ಕೊಳಗಕ್ಕೆ ₹೨೦೦, ದಿಂಡುಸ ಪಾಲಿಗೆ ₹೧೦೦, ಮೂರಿ ಒಂದಕ್ಕೆ ₹೧೦೦೦, ಬಣಗು ಪಾಲಿಗೆ ₹೧೦೦, ಮಣ್ಕಿ ಪಾಲಿಗೆ ₹೩೦೦ಕ್ಕೆ ಮರಾಟ ಮಾಡಲಾಗುತ್ತಿತ್ತು. ಮಳೆ ಬೀಳಲು ಪ್ರಾರಂಭವಾದರೆ ಒಣಮೀನು ನೀರು ತಾಗಿ ಹಾಳಾಗುವುದರಿಂದ ಮಾರಾಟ ಮಾಡುವುದು ಕಡಿಮೆಯಾಗುತ್ತದೆ. ಏಪ್ರಿಲ್ ತಿಂಗಳ ಅವಧಿಯಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಒಣಮೀನನ್ನು ಮಾರಾಟಕ್ಕೆಂದು ತರಲಾಗುತ್ತದೆ.
ಕಾರವಾರದ ಒಣಮೀನಿಗೆ ಜಿಲ್ಲೆ ಮಾತ್ರವಲ್ಲದೇ ಹೊರ ಜಿಲ್ಲೆ, ರಾಜ್ಯದಲ್ಲೂ ಸಾಕಷ್ಟು ಬೇಡಿಕೆ ಇದೆ. ಹೀಗಾಗಿ ಮಳೆಗಾಲ ಪ್ರಾರಂಭಕ್ಕೂ ಮೊದಲು ನಗರದಲ್ಲಿ ಭಾನುವಾರದ ಸಂತೆ ಮಾರುಕಟ್ಟೆಯಲ್ಲಿ ಸಿಗುವ ಒಣಮೀನು ಖರೀದಿಗೆ ಮುಗಿಬೀಳುತ್ತಾರೆ. ಅದರಲ್ಲೂ ಕಾರವಾರದಲ್ಲಿ ಸಿಗುವ ಒಣಮೀನು ಉತ್ತಮ ಗುಣಮಟ್ಟದ್ದಾಗಿರುವ ಜತೆಗೆ ಬೆಲೆ ಸಹ ಕಡಿಮೆಯಿರುತ್ತದೆ. ಹೀಗಾಗಿ ಕೇವಲ ಕಾರವಾರಿಗರಲ್ಲದೇ ಮುಂಬೈ, ಬೆಂಗಳೂರು, ಪುಣೆ, ಗೋವಾದಿಂದ ಸಹ ಗ್ರಾಹಕರು ಆಗಮಿಸಿ ಒಣಮೀನನ್ನು ತೆಗೆದುಕೊಂಡು ಹೋಗುತ್ತಾರೆ.ಲಕ್ಷಾಂತರ ರುಪಾಯಿ ಒಣಮೀನಿನ ವ್ಯವಹಾರ ನಡೆಯುತ್ತದೆ. ನೂರಾರು ಮಹಿಳೆಯರು ಈ ಒಣಮೀನಿನ ಮಾರಾಟದಲ್ಲಿ ತೊಡಗುತ್ತಾರೆ. ಬಂಗುಡೆ, ಸೀಗಡಿ, ತೊರಕೆ, ತೋರಿ, ಪೇಡಿ, ಬಣಗು, ಸೊರ ಸೇರಿದಂತೆ ವಿವಿಧ ಬಗೆಯ ಒಣಮೀನುಗಳನ್ನು ವ್ಯಾಪಾರಕ್ಕೆ ತರಲಾಗುತ್ತದೆ. ಮಳೆ ಪ್ರಾರಂಭವಾದರೆ ಮಾರುಕಟ್ಟೆಯಲ್ಲಿ ವ್ಯಾಪಾರ ಕಡಿಮೆಯಾಗುತ್ತದೆ. ದರದಲ್ಲಿ ವ್ಯತ್ಯಾಸವಾಗಿಲ್ಲ: ಮಳೆಗಾಲದ ಅವಧಿಯಲ್ಲಿ ಯಾಂತ್ರಿಕ ಮೀನುಗಾರಿಕೆ ಬಂದ್ ಮಾಡಲಾಗುತ್ತದೆ. ಇದರಿಂದ ಮಾರುಕಟ್ಟೆಯಲ್ಲಿ ಹಸಿ ಮೀನು ಬೇಡಿಕೆಗೆ ತಕ್ಕಷ್ಟು ಲಭ್ಯವಾಗುವುದಿಲ್ಲ. ಕೆಲವೊಮ್ಮೆ ದರವೂ ಏರಿರುತ್ತದೆ. ಕಾರಣ ಮಳೆಗಾಲದಲ್ಲಿ ಬಳಕೆಗೆಗಾಗಿ ಮತ್ಸ್ಯಪ್ರಿಯರು ಒಣಮೀನನ್ನು ಸಂಗ್ರಹಿಸಿಕೊಳ್ಳುತ್ತಾರೆ. ಕಳೆದ ಬಾರಿಗೆ ಹೋಲಿಸಿದರೆ ದರದಲ್ಲಿ ಹೆಚ್ಚೇನೂ ವ್ಯತ್ಯಾಸವಾಗಿಲ್ಲ ಎಂದು ಗ್ರಾಹಕಿ ಬಾನು ಬಾಬ್ರೇಕರ ತಿಳಿಸಿದರು.ದೂರದೂರಿನಿಂದ ಗ್ರಾಹಕರ ಆಗಮನ: ಮಳೆ ನೀರು ತಾಗಿದರೆ ಮೀನು ಹಾಳಾಗುತ್ತದೆ. ಹೀಗಾಗಿ ಮೇ ತಿಂಗಳಲ್ಲಿ ಒಣಮೀನು ಖರೀದಿ ಜೋರಾಗಿರುತ್ತದೆ. ಕಾರವಾರದಲ್ಲಿ ನಡೆಯುವ ಭಾನುವಾರದ ಸಂತೆಯ ದಿನ ಒಣಮೀನು ವ್ಯಾಪಾರಿಗಳು ಹೆಚ್ಚಿನ ಪ್ರಮಾಣದಲ್ಲಿ ಆಗಮಿಸುತ್ತಾರೆ. ಗೋವಾ, ಮುಂಬೈ, ಪುಣೆ ಮೊದಲಾದ ಕಡೆಯಿಂದ ಗ್ರಾಹಕರು ಆಗಮಿಸಿ ಖರೀದಿಸುತ್ತಾರೆ ಎಂದು ವ್ಯಾಪಾರಸ್ಥೆ ಮಂಜುಳಾ ತಿಳಿಸಿದರು.