ಕಾರವಾರ ನಗರದ 31 ವಾರ್ಡ್‌ಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಉತ್ತಮ ಮೂಲಭೂತ ಸೌಕರ್ಯಗಳು ಹಾಗೂ ಪರಿಣಾಮಕಾರಿ ಸೇವೆಗಳನ್ನು ಒದಗಿಸುವ ಉದ್ದೇಶದೊಂದಿಗೆ ಕಾರವಾರ ನಗರಸಭೆಯು 2026-27ನೇ ಸಾಲಿನ ವಾರ್ಷಿಕ ಆಯವ್ಯಯವನ್ನು ಮಂಡಿಸಿದೆ.
ಕಾರವಾರ: ನಗರದ 31 ವಾರ್ಡ್‌ಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಉತ್ತಮ ಮೂಲಭೂತ ಸೌಕರ್ಯಗಳು ಹಾಗೂ ಪರಿಣಾಮಕಾರಿ ಸೇವೆಗಳನ್ನು ಒದಗಿಸುವ ಉದ್ದೇಶದೊಂದಿಗೆ ಕಾರವಾರ ನಗರಸಭೆಯು 2026-27ನೇ ಸಾಲಿನ ವಾರ್ಷಿಕ ಆಯವ್ಯಯವನ್ನು ಮಂಡಿಸಿದೆ.
ಈ ಬಾರಿಯ ಬಜೆಟ್‌ನಲ್ಲಿ ಒಟ್ಟು ₹537.09 ಕೋಟಿ ಆದಾಯ ನಿರೀಕ್ಷಿಸಲಾಗಿದ್ದು, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ₹536.87 ಕೋಟಿ ವೆಚ್ಚಕ್ಕೆ ನಿರ್ಧರಿಸಲಾಗಿದೆ. ಅಂತಿಮವಾಗಿ ₹21.43 ಲಕ್ಷ ಉಳಿತಾಯದೊಂದಿಗೆ ಆಯವ್ಯಯ ರೂಪಿಸಿರುವುದು ಗಮನಾರ್ಹವಾಗಿದೆ.ಕಾರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಹಾಗೂ ನಗರಸಭೆ ಆಡಳಿತಾಧಿಕಾರಿಯೂ ಆಗಿರುವ ಕೆ. ಲಕ್ಷ್ಮೀಪ್ರಿಯಾ ಅವರು ಬಜೆಟ್ ಪ್ರತಿ ಬಿಡುಗಡೆ ಮಾಡಿದರು.
ನಗರಸಭೆಯ ಆದಾಯ ಮೂಲಗಳಲ್ಲಿ ಆಸ್ತಿ ತೆರಿಗೆ ಪ್ರಮುಖ ಸ್ಥಾನ ಪಡೆದಿದೆ. ಕಟ್ಟಡ ಮತ್ತು ಭೂಮಿಯ ಮೇಲಿನ ತೆರಿಗೆಯಿಂದ ₹5.20 ಕೋಟಿ ಆದಾಯ ನಿರೀಕ್ಷಿಸಲಾಗಿದ್ದು, ದಂಡ ಹಾಗೂ ಅನಧಿಕೃತ ಆಸ್ತಿ ತೆರಿಗೆಯಿಂದ ₹70 ಲಕ್ಷ ಸಂಗ್ರಹವಾಗುವ ಅಂದಾಜಿದೆ. ಇದಲ್ಲದೆ ಲೀಜ್ ಬಾಡಿಗೆಯಿಂದ ₹78 ಲಕ್ಷ, ಮೀನು ಮತ್ತು ತರಕಾರಿ ಮಾರುಕಟ್ಟೆ ಶುಲ್ಕದಿಂದ ಸುಮಾರು ₹50 ಲಕ್ಷ ಹಾಗೂ ಇತರ ಬಾಡಿಗೆ ಮೂಲಗಳಿಂದ ₹20 ಲಕ್ಷ ಆದಾಯ ಲಭಿಸುವ ನಿರೀಕ್ಷೆಯಿದೆ.ಅಭಿವೃದ್ಧಿ ಕಾಮಗಾರಿಗಳಲ್ಲಿ ರಸ್ತೆ ಮತ್ತು ಚರಂಡಿ ವ್ಯವಸ್ಥೆಗೆ ಆದ್ಯತೆ ನೀಡಲಾಗಿದೆ. ಹೊಸ ರಸ್ತೆಗಳ ನಿರ್ಮಾಣಕ್ಕೆ ₹2.92 ಕೋಟಿ ಹಾಗೂ ಚರಂಡಿ ಮತ್ತು ಕಲ್ವರ್ಟ್ ಅಭಿವೃದ್ಧಿಗೆ ₹2.62 ಕೋಟಿ ಮೀಸಲಿಡಲಾಗಿದೆ. ನಗರ ಸ್ವಚ್ಛತೆಗೆ ಒತ್ತು ನೀಡಲಾಗಿದ್ದು, ವೈಯಕ್ತಿಕ ಶೌಚಾಲಯಗಳ ನಿರ್ಮಾಣಕ್ಕೆ ₹45 ಲಕ್ಷ, ಘನತ್ಯಾಜ್ಯ ನಿರ್ವಹಣೆಗೆ ಎಂ.ಆರ್.ಎಫ್. ಘಟಕ ಸ್ಥಾಪನೆಗಾಗಿ ₹90 ಲಕ್ಷ ಹಾಗೂ ಜಲ್ ಹಿ ಅಮೃತ್ ಮತ್ತು ಸ್ವಚ್ಛ ಭಾರತ ಮಿಷನ್ ಯೋಜನೆಗಳಡಿ ಯಂತ್ರೋಪಕರಣಗಳ ಖರೀದಿಗೆ ₹50 ಲಕ್ಷ ನಿಗದಿಪಡಿಸಲಾಗಿದೆ.
ನಗರದ ಆಧುನೀಕರಣದ ಭಾಗವಾಗಿ ಹೊಸ ಬೀದಿದೀಪಗಳು ಹಾಗೂ ಸಂಚಾರಿ ದೀಪಗಳ ಅಳವಡಿಕೆಗೆ ₹50 ಲಕ್ಷ ಕಾಯ್ದಿರಿಸಲಾಗಿದೆ. ಸ್ಮಶಾನಗಳ ಅಭಿವೃದ್ಧಿ ಮತ್ತು ಪ್ರಮುಖ ವೃತ್ತಗಳ ಸೌಂದರ್ಯೀಕರಣಕ್ಕೂ ₹50 ಲಕ್ಷ ವೆಚ್ಚ ಮಾಡಲು ನಿರ್ಧರಿಸಲಾಗಿದೆ.ಪೌರಕಾರ್ಮಿಕರ ಕಲ್ಯಾಣಕ್ಕೂ ಬಜೆಟ್‌ನಲ್ಲಿ ಮಹತ್ವ ನೀಡಲಾಗಿದ್ದು, ಬೆಳಗಿನ ಉಪಾಹಾರಕ್ಕಾಗಿ ₹10 ಲಕ್ಷ, ರಾಷ್ಟ್ರೀಯ ಹಬ್ಬಗಳ ಆಚರಣೆಗೆ ₹20 ಲಕ್ಷ ಹಾಗೂ ವಾಹನಗಳ ವಿಮೆ, ವಿದ್ಯುತ್ ಬಿಲ್ ಪಾವತಿ ಸೇರಿದಂತೆ ಅಗತ್ಯ ವೆಚ್ಚಗಳಿಗೆ ಸೂಕ್ತ ಅನುದಾನ ಒದಗಿಸಲಾಗಿದೆ. ಒಟ್ಟಾರೆ, ಈ ಬಜೆಟ್ ನಗರದ ಸರ್ವತೋಮುಖ ಅಭಿವೃದ್ಧಿ ಹಾಗೂ ಸ್ವಚ್ಛ ಕಾರವಾರ ನಿರ್ಮಾಣದ ದಿಕ್ಕಿನಲ್ಲಿ ರೂಪುಗೊಂಡಿದೆ.
ನಗರಸಭೆ ಪೌರಾಯುಕ್ತ ಜಗದೀಶ ಹುಲಗೆಜ್ಜಿ ಬಜೆಟ್ ಪ್ರತಿಯನ್ನು ಜಿಲ್ಲಾಧಿಕಾರಿ ಅವರಿಗೆ ನೀಡಿದರು.