ಬಿಜೆಪಿ, ಜೆಡಿಎಸ್ ಮೈತ್ರಿ ಮಡಿಲಿಗೆ ಕಾರವಾರ ನಗರಸಭೆ

| Published : Aug 22 2024, 12:50 AM IST

ಸಾರಾಂಶ

ಕಾರವಾರ- ಅಂಕೋಲಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಅಂಕೋಲಾ ಪುರಸಭೆ ಹಾಗೂ ಕಾರವಾರ ನಗರಸಭೆಯಲ್ಲಿ ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೇರಿದೆ.

ಕಾರವಾರ: ಕಾರವಾರ ನಗರಸಭೆಯಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿಕೂಟ ಅಧಿಕಾರಕ್ಕೇರಿದೆ. ಬಿಜೆಪಿಯ ರವಿರಾಜ ಅಂಕೋಲೆಕರ ಅಧ್ಯಕ್ಷರಾಗಿ, ಜೆಡಿಎಸ್ ನ ಪ್ರೀತಿ ಜೋಶಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ರವಿರಾಜ ಅಂಕೋಲೆಕರ ಹಾಗೂ ಪ್ರೀತಿ ಜೋಶಿ ತಲಾ 19 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಬಿಜೆಪಿಯ 11, ಜೆಡಿಎಸ್ 3, ಪಕ್ಷೇತರ 3, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಪರಿಷತ್ ಶಾಸಕ ಗಣಪತಿ ಉಳ್ವೇಕರ ಮತಗಳು ಸೇರಿ 19 ಮತಗಳು ಬಂದವು. ಹಿಂದೆ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದ ಪಕ್ಷೇತರ ಸದಸ್ಯ ಪ್ರಕಾಶ ಪಿ. ನಾಯ್ಕ ಈ ಬಾರಿ ಕಾಂಗ್ರೆಸ್ ಬೆಂಬಲದೊಂದಿಗೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು, 14 ಮತಗಳನ್ನು ಪಡೆದರು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಸ್ನೇಹಲ್ ಹರಿಕಂತ್ರ ಕೂಡ 14 ಮತಗಳನ್ನು ಪಡೆದರು. ಕಾರವಾರ ನಗರಸಭೆ ಬಿಜೆಪಿ ಹಾಗೂ ಕಾಂಗ್ರೆಸ್ ತಲಾ 11, ಜೆಡಿಎಸ್ 4 ಹಾಗೂ ಪಕ್ಷೇತರರು 5 ಹೀಗೆ ಒಟ್ಟೂ 31 ಸದಸ್ಯರ ಬಲ ಹೊಂದಿದೆ. ಕಾರವಾರ- ಅಂಕೋಲಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಅಂಕೋಲಾ ಪುರಸಭೆ ಹಾಗೂ ಕಾರವಾರ ನಗರಸಭೆಯಲ್ಲಿ ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೇರಿದೆ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ, ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ಮಾಜಿ ಸಚಿವ ಆನಂದ ಅಸ್ನೋಟಿಕರ್ ಇದ್ದರು.

ಪೊಲೀಸ್ ಠಾಣೆ ತನಕ ಹೋದ ಹಾಲಿ ಮಾಜಿ ಶಾಸಕರ ವಾಗ್ವಾದಕಾರವಾರ: ಇಲ್ಲಿನ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಹಿನ್ನೆಲೆಯಲ್ಲಿ ಬಂದ್ ಮಾಡಲಾದ ಗೇಟ್‌ಅನ್ನು ಸಂಸದರ ವಾಹನಕ್ಕೆ ತೆರೆಯದೆ, ಶಾಸಕರ ವಾಹನಕ್ಕೆ ತೆರೆದ ಬಗ್ಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಆಕ್ರೋಶ ವ್ಯಕ್ತಪಡಿಸಿದರು.ಕಾಂಗ್ರೆಸ್ ಶಾಸಕರು ಹಾಗೂ ಸದಸ್ಯರಿಗೆ ಗೇಟ್ ತೆರೆದು ವಾಹನದಲ್ಲಿ ಹೋಗಲು ಅವಕಾಶ ಮಾಡಿಕೊಟ್ಟು, ಬಿಜೆಪಿಯ ಸಂಸದರು ಹಾಗೂ ಸದಸ್ಯರಿಗೆ ನಡೆದುಕೊಂಡು ಹೋಗಲು ತಿಳಿಸಿದ ಅಧಿಕಾರಿ ವಿರುದ್ಧ ಕೆರಳಿದ ರೂಪಾಲಿ ನಾಯ್ಕ ಅಧಿಕಾರಿ ಮೇಲೆ ಪ್ರಕರಣ ದಾಖಲಿಸುವಂತೆ ಆಗ್ರಹಿಸಿದರು.

ಕಾಂಗ್ರೆಸ್ಸಿಗರು ಬಿಜೆಪಿ ಸದಸ್ಯರಿಗೆ ಆಮಿಷ ಒಡ್ಡಿದ್ದರು ಎಂದು ರೂಪಾಲಿ ನಾಯ್ಕ ಆಪಾದಿಸಿದ ತರುವಾಯ ಕೆಲ ಸದಸ್ಯರು ನಮ್ಮ ಬಳಿ ಬಂದರೂ ನಾವು ಬಿಟ್ಟಿದ್ದೇವೆ ಎಂದು ಸೈಲ್ ಪ್ರತಿಕ್ರಿಯಿಸಿದರು. ರೂಪಾಲಿ ನಾಯ್ಕ ವಿರುದ್ಧ ನಗರ ಠಾಣೆಯಲ್ಲಿ ಸೈಲ್ ದೂರು ನೀಡಿದರು. ನಂತರ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ಪ್ರಮುಖರು ರೂಪಾಲಿ ನಾಯ್ಕ ಹೇಳಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.