ಸಾರಾಂಶ
ಕಾರವಾರ: ಮಹಾತ್ಮ ಗಾಂಧೀಜಿ ಜೀವಿಸಿದ ಸರಳ ಮತ್ತು ಶಾಂತಿಯುತ ಮತ್ತು ಅಹಿಂಸಾ ಜೀವನವನ್ನು ಪ್ರತಿಯೊಬ್ಬರೂ ಅನುಸರಿಸುವಂತಾಗಬೇಕು. ಮಹಾತ್ಮ ಗಾಂಧೀಜಿ ನಡೆದು ಬಂದ ಹಾದಿ ಎಲ್ಲರಿಗೂ ಪ್ರೇರಣೆಯಾಗಬೇಕು ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ತಿಳಿಸಿದರು.ಬುಧವಾರ ನಗರಸಭೆಯ ಮಹಾತ್ಮ ಗಾಂಧೀ ಉದ್ಯಾನವನದಲ್ಲಿ ಆಯೋಜಿಸಿದ್ದ ಮಹಾತ್ಮ ಗಾಂಧೀಜಿಯವರ 155ನೇ ಜಯಂತಿ ಹಾಗೂ ಮಾಜಿ ಪ್ರಧಾನ ಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 120ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗಾಂಧೀಜಿ ಅವರ ಜೀವನ ಕುರಿತು ಎಷ್ಟು ಓದಿದರೂ, ಅವರು ಪ್ರತಿಪಾದಿಸಿದ ಜೀವನ ಮೌಲ್ಯಗಳು, ಸತ್ಯ, ಅಹಿಂಸೆ ಹಾಗೂ ಆತ್ಮಬಲದ ಕುರಿತು ಪ್ರತಿಯೊಬ್ಬರೂ ತಿಳಿಯಬೇಕಿರುವುದು ಬಹಳಷ್ಟು ಇದೆ ಎಂದರು.ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ, ಗಾಂಧೀಜಿ ಅವರ ಆದರ್ಶ ತತ್ವಗಳನ್ನು ಪಾಲನೆ ಮಾಡಿ ದೇಶಕ್ಕೆ ಸೇವೆ ಸಲ್ಲಿಸೋಣ. ಅವರ ಕನಸಿನಂತೆ ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಿರಂತರವಾಗಿ ಸ್ವಚ್ಛತೆ ಸೇವೆ ಮಾಡುವ ಮನೋಭಾವ ಬೆಳಸಿಕೊಳ್ಳಬೇಕು ಎಂದರು.ನಗರಸಭೆ ಅಧ್ಯಕ್ಷ ರವಿರಾಜ ಅಕೋಲೇಕರ, ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟ ಗಾಂಧೀಜಿಯವರು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದ್ದರು ಎಂದರು.ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕುಮಾರ ಕಾಂದೂ, ಗಾಂಧೀಜಿ ಅವರು ಗ್ರಾಮ ಮಟ್ಟದಲ್ಲಿ ಕೂಡ ಅಧಿಕಾರ ಇರಬೇಕು ಎಂದು ಪ್ರತಿಪಾದಿಸಿದರು. ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದರೂ ಅವರ ಸರಳ ಸಜ್ಜನಿಕೆಯ ಜೀವನ ಹಾಗೂ ವ್ಯಕ್ತಿತ್ವ ಎಲ್ಲರಿಗೂ ಪ್ರೆರಣೆಯಾಗಬೇಕು ಎಂದರು.ಶಿಕ್ಷಕ ಡಾ. ಗಣೇಶ್ ಬಿಷ್ಟಣ್ಣವರ್ ಗಾಂಧೀಜಿ ಅವರ ಜೀವನ ಚರಿತ್ರೆ ಕುರಿತು ವಿಶೇಷ ಉಪನ್ಯಾಸ ನೀಡಿದರು. ಗಾಂಧಿ ಜಯಂತಿ ಪ್ರಯುಕ್ತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ಪ್ರೌಢ ಶಾಲಾ ವಿಭಾಗದಲ್ಲಿ ವಿಜೇತರಾದ ಸಮರ್ಥ ನಾಗರಾಜ ಅರ್ಕಸಾಲಿ, ಸುವರ್ಣಾ ಎಸ್. ಭಾಗ್ವತ್, ದಿಶಾ ರಾಜೇಶ ನಾಯ್ಕ ಸ್ಥಾನ, ಪದವಿಪೂರ್ವ ಶಿಕ್ಷಣ ವಿಭಾಗದ ಮಧುರಾ ರಮೇಶ ಮಡಿವಾಳ, ಶ್ರೇಯಾ ಅಣ್ಣಪ್ಪ ಗೌಡ, ರೇವತಿ ಮಾಸ್ತಿ ಮುಕ್ರಿ , ಪದವಿ ಮತ್ತು ಸ್ನಾತಕೋತ್ತರ ವಿಭಾಗದ ತೇಜಾ ಎಂ. ನಾಯ್ಕ, ವಿನಾಯಕ ರಮೇಶ ನಾಯ್ಕ ಕೀರ್ತನಾ ಶೇಖರ ನಾಯ್ಕ ಅವರಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.ಸ್ವಚ್ಛತಾ ಹಿ ಸೇವಾ ಪಾಕ್ಷಿಕ ಕಾರ್ಯಕ್ರಮದ ಅಂಗವಾಗಿ ನಗಸಭೆಯಿಂದ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು ಹಾಗೂ ಸ್ವಚ್ಛತಾ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ನಂತರ ಸ್ವಚ್ಛತೆ ನಡೆಸಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಎಂ. ನಾರಾಯಣ, ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ್, ನಗರಸಭೆ ಉಪಾಧ್ಯಕ್ಷೆ ಪ್ರೀತಿ ಮಧುಕರ ಜೋಶಿ, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ಸ್ಟೇಲ್ಲಾ ವರ್ಗಿಸ್, ನಗರಸಭೆಯ ಪೌರಾಯುಕ್ತ ಜಗದೀಶ ಹುಲಗೆಜ್ಜಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಬಿ. ಶಿವಕುಮಾರ್, ಕನ್ನಡ ಸಂಸ್ಕತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಲಾ ಎಂ. ನಾಯ್ಕ ಮತ್ತಿತರರು ಇದ್ದರು. ಜಿಲ್ಲಾಡಳಿತ, ಜಿಪಂ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಕಾರವಾರ ವತಿಯಿಂದ ಕಾರ್ಯಕ್ರಮ ಏರ್ಪಡಿಸಲಾಗಿತ್ತು.