ಕಾರವಾರ ಅರ್ಬನ್‌ ಬ್ಯಾಂಕ್ ಅವ್ಯವಹಾರ ಕೇಸ್‌: ಜಂಟಿ ನಿಬಂಧಕರಿಂದ ಪರಿಶೀಲನೆ

| Published : Jun 07 2024, 12:34 AM IST

ಕಾರವಾರ ಅರ್ಬನ್‌ ಬ್ಯಾಂಕ್ ಅವ್ಯವಹಾರ ಕೇಸ್‌: ಜಂಟಿ ನಿಬಂಧಕರಿಂದ ಪರಿಶೀಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಆಡಳಿತ ಮಂಡಳಿ ದಿ. ಗುರುದಾಸ ಅವರ ಮೇಲೆ ಆರೋಪ ಮಾಡಿದ್ದು, ತನಿಖೆಯ ಬಳಿಕ ಯಾರು ತಪ್ಪಿತಸ್ಥರು ಎನ್ನುವುದು ತಿಳಿಯುತ್ತದೆ.

ಕಾರವಾರ: ಇಲ್ಲಿನ ಕಾರವಾರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್‌ನಲ್ಲಾದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಸಹಕಾರಿ ಸಂಘಗಳ ಬೆಳಗಾವಿ ಪ್ರಾಂತ್ಯ ಜಂಟಿ ನಿಬಂಧಕ ಡಾ. ಸುರೇಶ ಗೌಡ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಆಡಳಿತ ಮಂಡಳಿ ಹಾಗೂ ಬ್ಯಾಂಕ್ ಅಧಿಕಾರಿಗಳು, ಸಿಬ್ಬಂದಿ ಬಳಿ ಸಮಗ್ರ ಮಾಹಿತಿ ಪಡೆದುಕೊಂಡು ಕಡತಗಳನ್ನು ಪರಿಶೀಲನೆ ನಡೆಸಿದರು. ಜಂಟಿ ನಿಂಬಂಧಕರು ಆಗಮಿಸಿರುವುದನ್ನು ತಿಳಿದು ಬ್ಯಾಂಕಿನ ನೂರಾರು ಆಗ್ರಹಕರು ಆಗಮಿಸಿ ತಮ್ಮ ಅಳಲನ್ನು ತೋಡಿಕೊಂಡರು.

ಮಾಧ್ಯಮದವರೊಂದಿಗೆ ಮಾತನಾಡಿದ ಜಂಟಿ ನಿಬಂಧಕ ಡಾ. ಸುರೇಶ ಗೌಡ, ಕಾರವಾರ ಅರ್ಬನ್ ಬ್ಯಾಂಕಿನಲ್ಲಿ ಅಂದಾಜು ₹೫೪ ಕೋಟಿ ಅವ್ಯವಹಾರವಾಗಿದೆ ಎಂದು ಪೊಲೀಸ್ ದೂರು ನೀಡಲಾಗಿದೆ ಎನ್ನುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿತ್ತು. ಕೂಡಲೇ ಪ್ರಾಥಮಿಕ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಸಾರ್ವಜನಿಕರಿಗೆ ತೊಂದರೆ ಆಗಿರುವ ಕಾರಣ ಸ್ವತಃ ತಾವೇ ಆಗಮಿಸಿ ದಾಖಲೆ ಪರಿಶೀಲನೆ ಮಾಡಿದ್ದು, 2024ರ ಮಾರ್ಚ್‌ನಲ್ಲಿ ಆಡಿಟ್ ಮಾಡುವಾಗ ಠೇವಣಿಯಲ್ಲಿ ವ್ಯತ್ಯಾಸ ಬಂದಿದ್ದ ಕಾರಣ ದೂರು ನೀಡಿದ್ದಾರೆ. ಹಿಂದಿನ ಪ್ರಧಾನ ವ್ಯವಸ್ಥಾಪಕ ಗುರುದಾಸ ಎಂಬವರು ೨೦೨೨- ೨೩ರ ವರೆಗೂ ಲೆಕ್ಕಪತ್ರ ನೋಡುತ್ತಿದ್ದು, ಆ ಅವಧಿಯವರೆಗೂ ಬ್ಯಾಲೆನ್ಸ್ ಶೀಟ್ ಸರಿಯಾಗಿರುವಂತೆ ಮೇಲ್ನೋಟಕ್ಕೆ ಕಂಡುಬಂದಿದೆ. ಆಡಳಿತ ಮಂಡಳಿಯಲ್ಲಿ ಅನುಮೋದನೆ ಕೂಡಾ ಆಗಿದೆ ಎಂದು ದಾಖಲೆಯನ್ನು ತೋರಿಸಿದ್ದಾರೆ. ಆದರೆ ಕಳೆದ ಮಾರ್ಚ್ ಅಂತ್ಯದಲ್ಲಿ ದಾಖಲೆ ಪರಿಶೀಲನೆ ಸಂದರ್ಭದಲ್ಲಿ ವ್ಯತ್ಯಾಸ ಬಂದಿದೆ ಎಂದು ತಿಳಿದಿದೆ ಎಂದರು.

ಈಗಾಗಲೇ ತನಿಖೆ ಸಂಬಂಧ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಲಾಗಿದೆ. ಆರ್‌ಬಿಐನೊಂದಿಗೆ ಮಾತನಾಡಲು ಕೂಡಾ ಕೋರಲಾಗಿದೆ. ಸಹಕಾರಿ ಇಲಾಖೆ ಹಾಗೂ ಆರ್‌ಬಿಐ ಪ್ರತ್ಯೇಕ ತನಿಖೆ ನಡೆಸುತ್ತದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ. ಆಡಳಿತ ಮಂಡಳಿಯು ೧೦ ವರ್ಷಗಳ ಅವಧಿಯಲ್ಲಿ ಅವ್ಯವಹಾರವಾಗಿದೆ ಎಂದು ದೂರು ನೀಡಿದ್ದು, ಈ ಬಗ್ಗೆ ವಿಚಾರಣೆ ಮಾಡಲು ಸ್ವಲ್ಪ ಸಮಯ ಬೇಕಾಗುತ್ತದೆ. ಸಹಕಾರಿ ಇಲಾಖೆ ಆಡಳಿತಾತ್ಮಕ ವಿಚಾರವನ್ನು, ಆರ್‌ಬಿಐ ಹಣಕಾಸಿನ ವಿಚಾರವನ್ನು ನೋಡಿಕೊಳ್ಳುತ್ತದೆ. ಎಷ್ಟು ಸಾಲ ನೀಡಿದ್ದಾರೆ, ಠೇವಣಿ ಎಷ್ಟಿದೆ? ಅವ್ಯವಹಾರವಾಗಿದ್ದರೆ ಆ ಹಣ ಎಲ್ಲಿಗೆ ವರ್ಗಾವಣೆಯಾಗಿದೆ? ಯಾವ ಉದ್ದೇಶಕ್ಕೆ ಆಗಿದೆ ಇತ್ಯಾದಿ ವಿಚಾರಣೆಯಿಂದಲೇ ಎಲ್ಲ ವಿವರ ತಿಳಿಯಬೇಕಿದೆ ಎಂದರು.

ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಆಗಿಲ್ಲ. ಆಡಳಿತ ಮಂಡಳಿ ನೀಡಿದ ಪೊಲೀಸರು ದೂರು ಸ್ವೀಕರಿಸಿದ್ದಾರೆ. ತನಿಖೆಯಾಗಿಲ್ಲ ಎನ್ನುವುದು ಇಂದು ವಿಚಾರಿಸಿದಾಗ ತಿಳಿಯಿತು. ಆಡಳಿತ ಮಂಡಳಿ ದಿ. ಗುರುದಾಸ ಅವರ ಮೇಲೆ ಆರೋಪ ಮಾಡಿದ್ದು, ತನಿಖೆಯ ಬಳಿಕ ಯಾರು ತಪ್ಪಿತಸ್ಥರು ಎನ್ನುವುದು ತಿಳಿಯುತ್ತದೆ. ಸಾರ್ವಜನಿಕರು ಶಾಂತ ರೀತಿಯಿಂದ ಇರಬೇಕು. ಸರ್ಕಾರ ನಿಮ್ಮ ಜತೆಗಿದೆ ಎಂದು ಭರವಸೆ ನೀಡಿದರು.