ಕಾರವಾರ ಅರ್ಬನ್‌ ಕೋ ಆಪರೇಟಿವ್‌ ಬ್ಯಾಂಕ್‌ ಲೈಸೆನ್ಸ್‌ ರದ್ದು

| Published : Jul 24 2025, 12:49 AM IST

ಕಾರವಾರ ಅರ್ಬನ್‌ ಕೋ ಆಪರೇಟಿವ್‌ ಬ್ಯಾಂಕ್‌ ಲೈಸೆನ್ಸ್‌ ರದ್ದು
Share this Article
  • FB
  • TW
  • Linkdin
  • Email

ಸಾರಾಂಶ

ಕಾರವಾರ ಅರ್ಬನ್‌ ಕೋ ಆಪರೇಟಿವ್‌ ಬ್ಯಾಂಕ್‌ನ ಲೈಸೆನ್ಸ್‌ ಅನ್ನು ರದ್ದುಪಡಿಸಿ ಭಾರತೀಯ ರಿಸರ್ವ್‌ ಬ್ಯಾಂಕ್‌ ಬುಧವಾರ ಆದೇಶ ಹೊರಡಿಸಿದೆ.

ಕಾರವಾರ: ಕಾರವಾರ ಅರ್ಬನ್‌ ಕೋ ಆಪರೇಟಿವ್‌ ಬ್ಯಾಂಕ್‌ನ ಲೈಸೆನ್ಸ್‌ ಅನ್ನು ರದ್ದುಪಡಿಸಿ ಭಾರತೀಯ ರಿಸರ್ವ್‌ ಬ್ಯಾಂಕ್‌ ಬುಧವಾರ ಆದೇಶ ಹೊರಡಿಸಿದೆ. ಅಗತ್ಯ ಬಂಡವಾಳದ ಕೊರತೆ ಮತ್ತು ಭವಿಷ್ಯದಲ್ಲಿ ಆದಾಯದ ಯಾವುದೇ ಮುನ್ಸೂಚನೆಗಳು ಕಂಡುಬರದ ಕಾರಣ ಈ ಕ್ರಮ ಕೈಗೊಂಡಿರುವುದಾಗಿ ಆರ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ ಅಲ್ಲದೆ ಜು.23ರ ಕಾರ್ಯಾಚರಣೆ ಅವಧಿಯ ಮುಕ್ತಾಯದ ಬಳಿಕ ಅದು ಯಾವುದೇ ಬ್ಯಾಂಕಿಂಗ್‌ ವಹಿವಾಟು ನಡೆಸುವಂತಿಲ್ಲ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.ಸಹಕಾರ ಸಂಘಗಳ ನಿಬಂಧಕರಿಗೆ ಬ್ಯಾಂಕ್‌ನ ಕಾರ್ಯಾಚರಣೆ ಮುಕ್ತಾಯಗೊಳಿಸುವ ಮತ್ತು ಬ್ಯಾಂಕ್‌ಗೆ ಲಿಕ್ವಿಡೇಟರ್‌ ನೇಮಕದ ಕುರಿತು ಆದೇಶ ಹೊರಡಿಸುವಂತೆ ಕರ್ನಾಟಕ ಸಹಕಾರ ಸೊಸೈಟಿಗಳ ರಿಜಿಸ್ಟ್ರಾರ್‌ಗೆ ಕೋರಿಕೆ ಸಲ್ಲಿಸಿರುವುದಾಗಿಯೂ ಆರ್‌ಬಿಐ ಮಾಹಿತಿ ನೀಡಿದೆ. ಇದರಿಂದ ಬ್ಯಾಂಕ್ ತನ್ನ ವ್ಯವಹಾರವನ್ನು ಸ್ಥಗಿತಗೊಳಿಸಲಿದೆ.

ಲಿಕ್ವಿಡೇಶನ್ ನಂತರ ಪ್ರತಿ ಠೇವಣಿದಾರನು ಠೇವಣಿಗಳ ವಿಮಾ ಹಕ್ಕುಪತ್ರದ ಮೊತ್ತವನ್ನು ಡಿಪಾಸಿಟ್ ಇನ್ಸೂರೆನ್ಸ್ ಮತ್ತು ಕ್ರೆಡಿಟ್ ಗ್ಯಾರಂಟಿ ನಿಗಮದಿಂದ ₹5 ಲಕ್ಷವರೆಗೆ ಪಡೆಯಲು ಅರ್ಹರಾಗಿರುತ್ತಾರೆ.

ಬ್ಯಾಂಕ್ ನೀಡಿದ ವರದಿಯ ಪ್ರಕಾರ, ಶೇ.92.9 ಠೇವಣಿದಾರರು ತಮ್ಮ ಠೇವಣಿಗಳ ಸಂಪೂರ್ಣ ಮೊತ್ತವನ್ನು ಪಡೆಯಲು ಅರ್ಹರಾಗಿದ್ದಾರೆ ಎಂದು ಆರ್‌ಬಿಐ ತಿಳಿಸಿದೆ.

2025ರ ಜೂ.30ರವರೆಗಿನ ಅಂಕಿ ಅಂಶಗಳ ಅನ್ವಯ ಈಗಾಗಲೇ ₹37.79 ಕೋಟಿಯನ್ನು ವಿಮಾ ಮೊತ್ತದ ರೂಪದಲ್ಲಿ ಗ್ರಾಹಕರಿಗೆ ಮರುಪಾವತಿ ಮಾಡಲಾಗಿದೆ.