ಸಾರಾಂಶ
ಪರೀಕ್ಷಾ ಕೇಂದ್ರಕ್ಕೆ ಬರುವ ಮುಂಚೆಯೇ ಪ್ರಶ್ನೆಪತ್ರಿಕೆ ಬಂಡಲ್‌ನ ಸೀಲ್ ತೆರೆಯಲಾಗಿತ್ತು.
ಬಳ್ಳಾರಿ: ನಗರದ ಸಂತ ಜಾನ್ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಮಂಗಳವಾರ ಜರುಗಿದ ಕೆಎಎಸ್ ಪತ್ರಿಕೆ-1 ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಪರೀಕ್ಷಾರ್ಥಿಗಳು ನಗರದಲ್ಲಿ ಪ್ರತಿಭಟನೆ ನಡೆಸಿ, ಕೆಪಿಎಸ್ಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪರೀಕ್ಷಾ ಕೇಂದ್ರಕ್ಕೆ ಬರುವ ಮುಂಚೆಯೇ ಪ್ರಶ್ನೆಪತ್ರಿಕೆ ಬಂಡಲ್‌ನ ಸೀಲ್ ತೆರೆಯಲಾಗಿತ್ತು. ಈ ಕುರಿತು ಪರೀಕ್ಷಾ ಕೇಂದ್ರದಲ್ಲಿಯೇ ಪ್ರಶ್ನಿಸಿದರೂ ಸಮರ್ಪಕ ಉತ್ತರ ನೀಡದೇ ಆಮೇಲೆ ನೋಡೋಣ ಎಂದು ಕೊಠಡಿ ಮೇಲ್ವಿಚಾರಕರು ಸಮಜಾಯಿಷಿ ನೀಡಿದರು ಎಂದು ಪರೀಕ್ಷಾರ್ಥಿಗಳು ಆರೋಪಿಸಿದರು. ಅಲ್ಲದೆ, ಸರ್ಕಾರ ಮರು ಪರೀಕ್ಷೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.ಸಂತ ಜಾನ್ ಪದವಿ ಪೂರ್ವ ಕಾಲೇಜಿನ ರೂಂ. ಸಂಖ್ಯೆ 18 ಮತ್ತು 19 ರಲ್ಲಿ ಜರುಗಿದ ಪರೀಕ್ಷೆ ವೇಳೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಪ್ರಶ್ನೆ ಪತ್ರಿಕೆ ವಿತರಣೆ ಮುನ್ನವೇ ಸೀಲ್ ಓಪನ್ ಮಾಡಲಾಗಿತ್ತು ಎಂಬುದು ಪರೀಕ್ಷಾರ್ಥಿಗಳ ಆರೋಪವಾಗಿತ್ತು. ಈ ಹಿನ್ನೆಲೆಯಲ್ಲಿ ಪರೀಕ್ಷೆ ಮುಗಿದ ಬಳಿಕ ಪರೀಕ್ಷಾ ಕೇಂದ್ರದ ಮುಂಭಾಗ ಪ್ರತಿಭಟನೆ ನಡೆಸಿದರು.
ಪರೀಕ್ಷಾರ್ಥಿಗಳಿಗೆ ಮನವರಿಕೆ:ನಗರದ ಸಂತಜಾನ್ ಪದವಿ ಪೂರ್ವ ಕಾಲೇಜಿನಲ್ಲಿ ಜರುಗಿದ ಕೆಎಎಸ್ ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಜಿಲ್ಲಾಧಿಕಾರಿ ಪ್ರಶಾಂತಕುಮಾರ್ ಮಿಶ್ರಾ ಸ್ಪಷ್ಟಪಡಿಸಿದ್ದಾರೆ.
ಪ್ರಶ್ನೆಪತ್ರಿಕೆ ಸೋರಿಕೆ ಆರೋಪ ಹಿನ್ನೆಲೆಯಲ್ಲಿ ಸ್ಥಳಕ್ಕೆ ತಹಸೀಲ್ದಾರ್, ಡಿವೈಎಸ್ಪಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಶ್ನೆಪತ್ರಿಕೆ ತೆರೆಯುವಾಗ ವೀಡಿಯೋ ಚಿತ್ರೀಕರಣ ಮಾಡಲಾಗುತ್ತದೆ. ಆರೋಪ ಮಾಡಿರುವ ಪರೀಕ್ಷಾರ್ಥಿಗಳಿಗೆ ವೀಡಿಯೋ ಚಿತ್ರೀಕರಣ ತೋರಿಸಿ ಮನವರಿಕೆ ಮಾಡಿಕೊಡಲಾಗಿದೆ ಎಂದು ತಿಳಿಸಿದರು.