ಆರು ತಾಲೂಕುಗಳಲ್ಲೂ ಕನ್ನಡ ಭವನ ನಿರ್ಮಾಣಕ್ಕೆ ಕಸಾಪ ಸಹಕಾರ

| Published : Mar 11 2025, 12:50 AM IST

ಸಾರಾಂಶ

ದಾವಣಗೆರೆ ಜಿಲ್ಲೆಯ ಆರು ತಾಲೂಕುಗಳಲ್ಲಿಯೂ ಕನ್ನಡ ಭವನ ನಿರ್ಮಾಣಕ್ಕೆ ಸಾರ್ವಜನಿಕರು, ಸಂಘ ಸಂಸ್ಥೆಗಳ ಸಹಕಾರದೊಂದಿಗೆ ತಾಲೂಕು ಘಟಕಗಳು ಮುಂದಾದಲ್ಲಿ ಜಿಲ್ಲಾ ಕಸಾಪ ಸಂಪೂರ್ಣ ಸಹಕಾರ ನೀಡಲಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ.ವಾಮದೇವಪ್ಪ ಭರವಸೆ ನೀಡಿದ್ದಾರೆ.

- ಸಾಹಿತ್ಯ ಸೌರಭ ಸಂಭ್ರಮಾಚರಣೆಯಲ್ಲಿ ವಾಮದೇವಪ್ಪ ಹೇಳಿಕೆ

- - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ದಾವಣಗೆರೆ ಜಿಲ್ಲೆಯ ಆರು ತಾಲೂಕುಗಳಲ್ಲಿಯೂ ಕನ್ನಡ ಭವನ ನಿರ್ಮಾಣಕ್ಕೆ ಸಾರ್ವಜನಿಕರು, ಸಂಘ ಸಂಸ್ಥೆಗಳ ಸಹಕಾರದೊಂದಿಗೆ ತಾಲೂಕು ಘಟಕಗಳು ಮುಂದಾದಲ್ಲಿ ಜಿಲ್ಲಾ ಕಸಾಪ ಸಂಪೂರ್ಣ ಸಹಕಾರ ನೀಡಲಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ.ವಾಮದೇವಪ್ಪ ಭರವಸೆ ನೀಡಿದರು.

ನ್ಯಾಮತಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಸಿಕ ಕಾರ್ಯಕ್ರಮ ಸಾಹಿತ್ಯ ಸೌರಭದ ಸಂಭ್ರಮಾಚರಣೆ ಮತ್ತು ಮಹಿಳಾ ದಿನ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ನ್ಯಾಮತಿ ನೂತನ ತಾಲೂಕು ಕೇಂದ್ರವಾದ ಹೊಸದರಲ್ಲಿಯೇ ಕನ್ನಡ ಭವನಕ್ಕೆ ಗ್ರಾಮಾಡಳಿತದಿಂದ ನಿವೇಶನ ಪಡೆದಿರುವುದು ಹೆಮ್ಮೆಯ ವಿಷಯ. ಸರ್ಕಾರ ಮತ್ತು ದಾನಿಗಳ ನೆರವಿನೊಂದಿಗೆ ತಾಲೂಕು ಘಟಕ ಕನ್ನಡ ಭವನ ನಿರ್ಮಾಣಕ್ಕೆ ಮುಂದಾಗಬೇಕು. ತಾವು ಸಹ ತಾಲೂಕಿನಲ್ಲಿ ಸಂಚರಿಸಿ ದೇಣಿಗೆ ಸಂಗ್ರಹಿಸಲು ಬರುವುದಾಗಿ ತಿಳಿಸಿದರು. ಭುವನೇಶ್ವರಿ ಸೇವೆ ಪುಣ್ಯದ ಕೆಲಸ ಎಂದರು.

ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎಸ್.ಎಚ್.ಹೂಗಾರ್ ಮಾತನಾಡಿ, ಕನ್ನಡ ನಾಡು,ನುಡಿ, ಭಾಷೆ, ನೆಲ,ಜಲ, ನಾಡಿನ ಸಂರಕ್ಷಣೆ ವಿಷಯ ಬಂದಾಗ ಎಲ್ಲರೂ ಸಂಘಟಿತರಾಗಬೇಕು. ಭಾಷಾಭಿಮಾನದ ಬಗ್ಗೆ ಅಕ್ಕಪಕ್ಕದ ರಾಜ್ಯಗಳನ್ನು ನೋಡಿ ಕಲಿಯಬೇಕಾಗಿದೆ ಎಂದರು.

ಶಿಶು ಅಭಿವೃದ್ಧಿ ಯೋಜನೆ ಹಿರಿಯ ಮೇಲ್ವಿಚಾರಕಿ ರೇಣುಕಾ ಎಂ. ದೇವರೆಡ್ಡಿ ಅವರು ಮಹಿಳಾ ದಿನಾಚರಣೆ ಕುರಿತು ಉಪನ್ಯಾಸ ನೀಡಿದರು. ಶರಣೆ ಕೊಡಮಗ್ಗಿ ಸೌಭಾಗ್ಯಮ್ಮ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ದಿಳ್ಯಪ್ಪ, ನಿವೃತ್ತ ಸರ್ಕಾರಿ ನೌಕರರ ಸಂಘದ ರಾಜ್ಯ ಸಂಚಾಲಕ ಎಂ.ಪಿ.ಎಂ.ಷಣ್ಮುಖಯ್ಯ, ನಿವೃತ್ತ ಉಪತಹಶೀಲ್ದಾರ್ ನ್ಯಾಮತಿ ನಾಗರಾಜಪ್ಪ, ನಿಕಟಪೂರ್ವ ಅಧ್ಯಕ್ಷ ಗಡೆಕಟ್ಟೆ ನಿಜಲಿಂಗಪ್ಪ, ಪಿಡಿಒ ಜಯಪ್ಪ, ಮಹಿಳಾ ಪ್ರತಿನಿಧಿ ಭಾಗ್ಯಲಕ್ಷ್ಮಿ, ಕೋಶಾಧ್ಯಕ್ಷ ಎಂ.ಎಸ್.ಜಗದೀಶ, ಗೌರವ ಕಾರ್ಯದರ್ಶಿ ಬಿ.ಜಿ.ಚೈತ್ರಾ, ಮಹಿಳಾ ಸಂಚಾಲಕಿ ಉಷಾ ಮಾತನಾಡಿದರು.

ತಾಲೂಕು ಅಧ್ಯಕ್ಷ ಡಿ.ಎಂ.ಹಾಲಾರಾಧ್ಯ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಮಹಿಳಾ ವಿಭಾಗದಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

- - - -10ಎಚ್.ಎಲ್.ಐ3:

ಸಾಹಿತ್ಯ ಸೌರಭ ಸಂಭ್ರಮಾಚರಣೆ, ಮಹಿಳಾ ದಿನ ಕಾರ್ಯಕ್ರಮವನ್ನು ಶನಿವಾರ ಜಿಲ್ಲಾ ಕಸಾಪ ಅಧ್ಯಕ್ಷ ಬಿ.ವಾಮದೇವಪ್ಪ ಉದ್ಘಾಟಿಸಿದರು.