ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಮಹೇಶ್ ಜೋಷಿ ಭ್ರಷ್ಟಾಚಾರ, ಸ್ವಜನಪಕ್ಷಪಾತ ಮಾಡಿದ್ದು, ಸರ್ಕಾರ ಕೂಡಲೇ ಅವರನ್ನು ಅಮಾನತುಪಡಿಸಿ, ಆಡಳಿತಾಧಿಕಾರಿ ನೇಮಕ ಮಾಡಿ ಅವರ ಅವಧಿಯಲ್ಲಿ ನಡೆದಿರುವ ಅವ್ಯವಹಾರ ತನಿಖೆಯಾಗುವವರೆಗೆ ನಿರಂತರ ಹೋರಾಟ ನಡೆಸುವುದಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಕಾರ್ಯದರ್ಶಿ ಪ್ರೊ.ಜಯಪ್ರಕಾಶ್‌ಗೌಡ ತಿಳಿಸಿದರು. ನಗರದ ಪ್ರವಾಸಿಮಂದಿರದಲ್ಲಿ ಕನ್ನಡ ನಾಡು-ನುಡಿ ಜಾಗೃತಿ ಸಮಿತಿ ವತಿಯಿಂದ ಕಸಾಪ ವಿರುದ್ಧ ಹೋರಾಟ ಕುರಿತು ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಧಿಕಾರಿಯಾಗಿದ್ದ ಮಹೇಶ್ ಜೋಷಿ ನಿವೃತ್ತಿಯಾಗುತ್ತಿದ್ದಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟು ವಾಮಮಾರ್ಗದ ಮೂಲಕ ಅಧ್ಯಕ್ಷರಾಗಿದ್ದಾರೆ. ನಂತರ ಅಧ್ಯಕ್ಷಗಿರಿಯನ್ನು ಕಸಾಪ ಹಿತಾಸಕ್ತಿ, ಸಾಹಿತ್ಯ, ಭಾಷೆ, ನಾಡು-ನುಡಿ, ಜಲ ವಿಚಾರದಲ್ಲಿ ದುಡಿಯದೇ ಕೇವಲ ಹಣ ಮಾಡುವ ಕಾಯಕದಲ್ಲಿ ನಿರತರಾಗಿದ್ದಾರೆ.ಅಲ್ಲದೇ ಕಸಾಪದಲ್ಲಿರುವ ಈಗಿನ ಬೈಲಾವನ್ನೇ ತಿದ್ದುಪಡಿ ಮಾಡಲು ಮುಂದಾಗಿದ್ದಾರೆ. ಇದನ್ನು ವಿರೋಧಿಸುವ ಸದಸ್ಯರು ಹಾಗೂ ಜಿಲ್ಲಾಧ್ಯಕ್ಷರನ್ನು ಬೆದರಿಸುವುದು, ಅಮಾನುತ್ತು ಮಾಡುವ ಮೂಲಕ ಸರ್ವಾಧಿಕಾರಿಯಂತೆ ವರ್ತನೆ ಮಾಡುತ್ತಿದ್ದಾರೆ ಎಂದು ದೂರಿದರು. ಕಳೆದ ೨ ವರ್ಷಗಳಿಂದ ಅವರ ಉಪಟಳ ಹೆಚ್ಚಾಗಿದ್ದು, ಸರ್ಕಾರ ಸಾಹಿತ್ಯ ಸಮ್ಮೇಳನಕ್ಕೆ ನೀಡುವ ಅನುದಾನಕ್ಕೆ ಲೆಕ್ಕವನ್ನೇ ನೀಡುತ್ತಿಲ್ಲ. ಈಗಾಗಲೇ ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದೊಡ್ಡ ಹಗರಣವೇ ಆಗಿದೆ. ಈ ಬಗ್ಗೆ ಆಡಿಟ್ ವರದಿಯೂ ಉಲ್ಲೇಖವಾಗಿದೆ. ಈ ಅವ್ಯವಹಾರವನ್ನು ಮುಚ್ಚಿಕೊಳ್ಳಲು ತನಗೆ ನಿಷ್ಟರಾಗಿರುವ ೩೦ ಮಂದಿಯನ್ನು ಪರಿಷತ್‌ಗೆ ನಾಮನಿರ್ದೇಶನ ಮಾಡಿಕೊಳ್ಳುವ ಮೂಲಕ ಅಕ್ರಮ ಮಾಡುತ್ತಿದ್ದಾರೆ. ವಿವಿಧ ವಲಯದಲ್ಲಿರುವ ಐದಾರು ಮಂದಿಯನ್ನು ನಾಮ ನಿರ್ದೇಶನ ಮಾಡಿಕೊಳ್ಳಲು ಬೈಲಾದಲ್ಲಿ ಅವಕಾಶ ಇದೆ.
ಆದರೆ, ಈ ಜೋಷಿ ಇವೆಲ್ಲನ್ನು ಗಾಳಿಗೆ ತೂರಿ ತಮಗೆ ಇಷ್ಟಬಂದಂತೆ ನಡೆದುಕೊಳ್ಳುತ್ತಿದ್ದಾರೆ. ಇದರ ವಿರುದ್ಧ ಈಗಾಗಲೇ ಮಂಡ್ಯ, ಮೈಸೂರು, ಬೆಂಗಳೂರು ಜಿಲ್ಲೆಗಳಲ್ಲಿ ಸಂಘಟಿತ ಹೋರಾಟ ನಡೆಯುತ್ತಿದೆ. ಈಗ ಗಡಿ ಜಿಲ್ಲೆಯಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲು ಸಭೆ ಕರೆಯಲಾಗಿದೆ. ಇದರ ಬಗ್ಗೆ ನಿಮ್ಮೆಲ್ಲರ ಅಭಿಪ್ರಾಯದಂತೆ ಚಾಮರಾಜನಗರ ಜಿಲ್ಲೆಯಿಂದಲೂ ಸಹ ಕಸಾಪ ದುರಾಡಳಿತ ಮತ್ತು ಜಿಲ್ಲಾ ಕಸಾಪ ನಿಷ್ಕ್ರೀಯತೆ ವಿರುದ್ಧ ಹೋರಾಟ ಮಾಡೋಣ ಎಂದು ಜಯಪ್ರಕಾಶ್‌ಗೌಡ ತಿಳಿಸಿದರು. ವಿಧಾನ ಪರಿಷತ್ತಿನ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ಜೋಷಿ ಕನ್ನಡಿಗರ ಹಿತಾಸಕ್ತಿ ಮರೆತು ತನಗೆ ಇಷ್ಟಬಂದಂತೆ ಬೈಲಾ ತಿದ್ದುಪಡಿ ಮಾಡಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಕಸಾಪದ ೧೧೦ ವರ್ಷದ ಇತಿಹಾಸದಲ್ಲಿಯೇ ಇಂಥ ಅಧ್ಯಕ್ಷರನ್ನು ನೋಡಿಲ್ಲ. ಕನ್ನಡಿಗರ ಹಿತಾಸಕ್ತಿ ಮರೆತು, ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಕನ್ನಡದ ಕೆಲಸ ಮಾಡಲು ಇಂತಿಷ್ಟು ಹಣ ಪಡೆದು ವಿದೇಶ ಪ್ರವಾಸಕ್ಕೂ ಕಸಾಪ ಹಣವನ್ನು ಪಡೆದುಕೊಂಡಿರುವ ಅಧ್ಯಕ್ಷ ಯಾರು ಎಂದರೆ ಮಹೇಶ್ ಜೋಷಿ ಎಂದು ಗುಡುಗಿದರು. ಇಂಥ ಸರ್ವಾಧಿಕಾರಿ ಧೋರಣೆಯನ್ನು ಹೊಂದಿರುವ ಅಧ್ಯಕ್ಷರ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆಗಳು ಹಾಗೂ ಆಕ್ರೋಶ ಹೆಚ್ಚಿದರೆ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಈಗಾಗಲೇ ಅನೇಕ ಜಿಲ್ಲೆಗಳಲ್ಲಿ ಜೋಷಿ ತೊಲಗಲಿ, ಕಸಾಪ ಉಳಿಯಲಿ ಅಭಿಯಾನ ಆರಂಭವಾಗಿದೆ. ಗಡಿ ಜಿಲ್ಲೆಯಲ್ಲಿಯು ಇವರ ವಿರುದ್ಧ ಕೂಗು ಬರಬೇಕು. ಹೀಗಾಗಿ ಪೂರ್ವಭಾವಿ ಸಭೆ ಮಹತ್ವವನ್ನು ಪಡೆದುಕೊಂಡಿದೆ. ಸಮಾನ ಮನಸ್ಕರು ತೀರ್ಮಾನ ಮಾಡಿ ಒಮ್ಮತದ ಅಭಿಪ್ರಾಯ ತಿಳಿಸಿ ಎಂದರು.ಕಸಾಪ ತಾಲೂಕು ಉಪಾಧ್ಯಕ್ಷ ಮಾದಾಪುರ ರವಿಕುಮಾರ್ ಮಾತನಾಡಿ, ಮಹೇಶ್ ಜೋಷಿ ವಿರುದ್ಧ ರಾಜ್ಯಾದ್ಯಂತ ಹೋರಾಟ ಹೆಚ್ಚಾಗುತ್ತಿದೆ. ಚಾ.ನಗರ ಗಡಿ ಜಿಲ್ಲೆಯಿಂದಲೇ ಇದಕ್ಕೆ ಧ್ವನಿಯಾಗಬೇಕೆಂಬ ಉದ್ದೇಶದಿಂದ ಪೂರ್ವಭಾವಿ ಸಭೆಯನ್ನು ಆಯೋಜನೆ ಮಾಡಿದ್ದು, ಚುನಾವಣೆ ಸಂದರ್ಭದಲ್ಲಿ ಅತ್ಯಂತ ನಯ ವಿನಯತೆಯನ್ನು ಪ್ರದರ್ಶನ ಮಾಡಿದ ಜೋಷಿ ಅಧಿಕಾರಕ್ಕೆ ಬರುತ್ತಿದ್ದಂತೆ ತಮ್ಮ ಇನ್ನೊಂದು ಮುಖ ತೋರಿಸಿದ್ದಾರೆ. ಅವರಿಗೆ ಅಧಿಕಾರದ ಮದವೇರಿದ್ದು, ಇದರ ವಿರುದ್ಧ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸಬೇಕಾಗಿದೆ ಎಂದರು. ಸಭೆಯಲ್ಲಿ ಪ್ರೊ.ಜಿ.ಟಿ.ವೀರಪ್ಪ, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಡಾ.ಗುರುಪ್ರಸಾದ್, ವಕೀಲರಾದ ಪ್ರಸನ್ನಕುಮಾರ್, ಮರಿಯಾಲಹುಂಡಿ ಶಿವರಾಮು, ಮುಖಂಡರಾದ ಡಾ. ಪರಮೇಶ್ವರಪ್ಪ, ಸಿ.ಎಂ.ಕೃಷ್ಣಮೂರ್ತಿ, ಪದ್ಮಾಕ್ಷಿ, ಶಿವಶಂಕರ್, ಬಸವನಪುರ ರಾಜಶೇಖರ್, ಜಿ.ಬಂಗಾರು, ಜಿ.ರಾಜಪ್ಪ, ಮೊದಲಾದವರು ಇದ್ದರು.
ಜೂ.೧೦ ರಂದು ಚಾ,ನಗರದಲ್ಲಿ ಪ್ರತಿಭಟನೆಸಭೆಯಲ್ಲಿ ಭಾಗವಹಿಸಿದ್ದ ಅನೇಕ ಮುಖಂಡರು ಮಾತನಾಡಿ, ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಷಿ ವಿರುದ್ಧ ಹೋರಾಟ ಮಾಡಲು ಜೂ.೧೦ ರ ಮಂಗಳವಾರ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದರು. ಕಸಾಪ ಮಾಜಿ ಅಧ್ಯಕ್ಷ ಎ.ಎಂ.ನಾಗಮಲ್ಲಪ್ಪ, ದಲಿತ ಮಹಾಸಭಾದ ಉಪಾಧ್ಯಕ್ಷ ವೆಂಕಟರಮಣಸ್ವಾಮಿ (ಪಾಪು), ಕೆ. ವೀರಭದ್ರಸ್ವಾಮಿ ಮಾತನಾಡಿ, ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಷಿ ವಿರುದ್ಧ ಬಹಳಷ್ಟ ಅಸಮಾಧಾನ ವ್ಯಕ್ತವಾಗುತ್ತಿದೆ. ಇಂಥವರು ಪರಿಷತ್ತಿನಲ್ಲಿ ಮುಂದುವರಿಯಲು ಅರ್ಹರಲ್ಲ. ಅಲ್ಲದೇ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಿಷ್ಕ್ರಿಯವಾಗಿದ್ದು, ಇದರ ವಿರುದ್ಧ ಒಗ್ಗಟ್ಟಿನ ಹೋರಾಟ ಅನಿರ್ವಾಯ ಎಂದರು.