ಸಾಹಿತ್ಯ ಭವನ ನಿರ್ಮಾಣದ ಜತೆಗೆ ಸಾಹಿತ್ಯ ಚಟುವಟಿಕೆಗಳನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಕಾರ್ಯಕಾರಿಣಿ ಮತ್ತು ಸಾಹಿತ್ಯಾಸಕ್ತರ ಸಹಕಾರ ಬೆಂಬಲದಿಂದ ನೂರಾರು ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿವೆ. ಈಗ ವಿರೋಧಿಸುವವರು ನಿರಂತರವಾಗಿ ಸಾಹಿತ್ಯ ಕಾರ್ಯಕ್ರಮಗಳಲ್ಲಿಯೂ ಸಕ್ರಿಯವಾಗಿರಲಿಲ್ಲ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಪ್ರೊ. ಎಂ.ಜಿ. ಗಚ್ಚಣ್ಣವರ ತಿಳಿಸಿದರು.

ಮುಂಡರಗಿ: ಪಟ್ಟಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಅನ್ನದಾನೀಶ್ವರ ಕನ್ನಡ ಸಾಹಿತ್ಯ ಭವನ ಜ. 29ರಂದು ಉದ್ಘಾಟನೆಗೊಳ್ಳಲಿದ್ದು, ಅಂದು ಶ್ರೀಮಠದ ಆವರಣದಲ್ಲಿ ಒಂದು ದಿನದ ಸಾಹಿತ್ಯ ಸಮಾವೇಶ, ದಾನಿಗಳ ಸನ್ಮಾನ ಸೇರಿದಂತೆ ವಿವಿಧ ಗೋಷ್ಠಿಗಳು ಜರುಗಲಿವೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಪ್ರೊ. ಎಂ.ಜಿ. ಗಚ್ಚಣ್ಣವರ ತಿಳಿಸಿದರು.ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕಾರಿಣಿ ಮಂಡಳಿ ತಾಲೂಕು ಕನ್ನಡ‌ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆಯನ್ನು ಇನ್ನೂ ಬಹಿರಂಗಪಡಿಸುವ ಮೊದಲೇ ಕೆಲವು ಕಸಾಪ ಆಜೀವ ಸದಸ್ಯರು ಸಮ್ಮೇಳನ ಸರ್ವಾಧ್ಯಕ್ಷರ ಆಯ್ಕೆಗೆ ವಿರೋಧ ಇದೆ ಎಂದು ಮನವಿ ನೀಡಿದ್ದು ಮತ್ತು ಸುದ್ದಿಗೋಷ್ಠಿ ನಡೆಸಿದ್ದು, ಕಸಾಪ ಬೈಲಾ(ನಿಯಮ) ಪ್ರಕಾರ ತಾಲೂಕಿನ ಎಲ್ಲ ಹಿರಿಯ ಸಾಧಕರು ಮತ್ತು ಸಾಹಿತಿಗಳನ್ನು ಗುರುತಿಸಿಕೊಂಡು ವಯಸ್ಸು, ಸಾಧನೆ ಆಧಾರದ ಮೇಲೆ ಪ್ರತಿಯೊಬ್ಬರಿಗೂ ಸಮ್ಮೇಳನ ಸರ್ವಾಧ್ಯಕ್ಷರ ಆಯ್ಕೆ ಮಾಡಿ ಗೌರವ ಕೊಡುವ ಬಗ್ಗೆ ತಿರ್ಮಾನಿಸಲಾಗಿತ್ತು.

ಆ ಪ್ರಕಾರ ಸಮ್ಮೇಳನ ಮಾಡುವುದಿತ್ತು. ಸಮ್ಮೇಳನ ಸರ್ವಾಧ್ಯಕ್ಷರ ಆಯ್ಕೆಗೆ ಮೂವರ ಸಮಿತಿ ಮಾಡಿ ಅವರಿಗೆ ವಹಿಸಿತ್ತು. ಮುಖ್ಯವಾಗಿ ಕಾರ್ಯಕಾರಿಣಿ ಮಂಡಳಿ ಸದಸ್ಯರು ನಿರ್ಣಯಿಸಿದಂತೆ ಸಮ್ಮೇಳನ ಸರ್ವಾಧ್ಯಕ್ಷರ ಆಯ್ಕೆಯಾಗುತ್ತದೆ. ಕಳೆದ ಹಲವು ವರ್ಷಗಳಲ್ಲಿ ಒಂದೆರಡು ಸಮ್ಮೇಳನ ಬಿಟ್ಟರೆ ಇಂತಹ ವಿರೋಧದ ಕಾರಣದಿಂದಾಗಿ ತಾಲೂಕಿನಲ್ಲಿ ತಾಲೂಕ ಸಾಹಿತ್ಯ ಸಮ್ಮೇಳನ ನಡೆಯದೇ ನನೆಗುದಿಗೆ ಬಿದ್ದಿದೆ ಎಂದರು.

ಅದಾಗ್ಯೂ ಸಾಹಿತ್ಯ ಭವನ ನಿರ್ಮಾಣದ ಜತೆಗೆ ಸಾಹಿತ್ಯ ಚಟುವಟಿಕೆಗಳನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಕಾರ್ಯಕಾರಿಣಿ ಮತ್ತು ಸಾಹಿತ್ಯಾಸಕ್ತರ ಸಹಕಾರ ಬೆಂಬಲದಿಂದ ನೂರಾರು ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿವೆ. ಈಗ ವಿರೋಧಿಸುವವರು ನಿರಂತರವಾಗಿ ಸಾಹಿತ್ಯ ಕಾರ್ಯಕ್ರಮಗಳಲ್ಲಿಯೂ ಸಕ್ರಿಯವಾಗಿರಲಿಲ್ಲ ಎಂದರು.

ಕಸಾಪ ಘಟಕದ ಉಪಾಧ್ಯಕ್ಷ ಶಂಕರ ಕುಕನೂರ, ಗೌ. ಕಾರ್ಯದರ್ಶಿ ವೀಣಾ ಪಾಟೀಲ, ಮಂಜುನಾಥ ಮುಧೋಳ, ಕಾರ್ಯಕಾರಿಣಿ ಸದಸ್ಯರಾದ ಎಸ್.ಬಿ. ಹಿರೇಮಠ, ಕಾಶಿನಾಥ ಬಿಳಿಮಗ್ಗದ, ಸುರೇಶ ಭಾವಿಹಳ್ಳಿ, ಆನಂದ ರಾಮೇನಹಳ್ಳಿ, ಸಿ.ಕೆ. ಗಣಪ್ಪನವರ, ರಮೇಶ ಪಾಟೀಲ, ಐ.ಎಂ. ಮುಲ್ಲಾ, ಕೃಷ್ಣಮೂರ್ತಿ ಸಾಹುಕಾರ ಇದ್ದರು.