ಕಸಾಪ ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಿದೆ: ಎಸ್.ಎಸ್.ಸಂತೋಷಕುಮಾರ್

| Published : Jan 06 2025, 01:00 AM IST

ಕಸಾಪ ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಿದೆ: ಎಸ್.ಎಸ್.ಸಂತೋಷಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ, ಕನ್ನಡ ಸಾಹಿತ್ಯ ಪರಿಷತ್ ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಅವರಲ್ಲಿ ಅಡಗಿರುವ ಸುಪ್ತ ಪ್ರತಿಭೆ ಹೆಕ್ಕಿ ತೆಗೆಯುವ ಕೆಲಸ ಮಾಡುತ್ತಿದೆ ಎಂದು ತಾಲೂಕು ಕಸಾಪ ಪೂರ್ವಾಧ್ಯಕ್ಷ ಎಸ್.ಎಸ್.ಸಂತೋಷಕುಮಾರ್ ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ ನಿಂದ ಉದಯೋನ್ಮುಖ ಕವಿಗಳ ಕವನ ವಾಚನ । ಸಾವಿತ್ರಿ ಬಾಯಿ ಫುಲೆ ಜನ್ಮದಿನಾಚರಣೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಕನ್ನಡ ಸಾಹಿತ್ಯ ಪರಿಷತ್ ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಅವರಲ್ಲಿ ಅಡಗಿರುವ ಸುಪ್ತ ಪ್ರತಿಭೆ ಹೆಕ್ಕಿ ತೆಗೆಯುವ ಕೆಲಸ ಮಾಡುತ್ತಿದೆ ಎಂದು ತಾಲೂಕು ಕಸಾಪ ಪೂರ್ವಾಧ್ಯಕ್ಷ ಎಸ್.ಎಸ್.ಸಂತೋಷಕುಮಾರ್ ತಿಳಿಸಿದರು.

ಭಾನುವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ರೋಟರಿ ಭವನದಲ್ಲಿ ಕುವೆಂಪು ಜನ್ಮದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಉದಯೋನ್ಮುಖ ಕವಿಗಳ ಸ್ವ ರಚಿತ ಕವನ ವಾಚನ ಹಾಗೂ ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆ ಜಯಂತಿ ಉದ್ಘಾಟಿಸಿ ಮಾತನಾಡಿದರು. ಸದಾ ಒತ್ತಡದಲ್ಲಿ ಬದುಕುತ್ತಿರುವ ಪ್ರಸ್ತುತ ಕಾಲ ಘಟ್ಟದಲ್ಲಿ ಆಪ್ತತೆ ಇರುವ ಸ್ವ ರಚಿತ ಕವಿಗಳ ಕವನ ವಾಚನ ಕಾರ್ಯಕ್ರಮ ಮನಸ್ಸಿಗೆ ಮುದ ನೀಡುತ್ತದೆ. ಪ್ರತಿಯೊಬ್ಬ ಕವಿಗಳಲ್ಲಿ ಸುಪ್ತವಾಗಿ ಅಡಗಿರುವ ಚಿಂತನೆಗಳು ಕವನವಾಗಿ ಹೊರ ಬರುತ್ತದೆ. ಮಲೆನಾಡಿನ ಅತ್ಯಂತ ಶ್ರೇಷ್ಠ ಕವಿ ಕುವೆಂಪು ಅವರಿಗೆ ಸಾಹಿತ್ಯ ರಚಿಸಲು ಮಲೆನಾಡಿನ ಪರಿಸರ, ಪ್ರಕೃತಿಯೇ ಶಕ್ತಿ ನೀಡಿದೆ. ಕುವೆಂಪು ಬರಹದಿಂದ ಮಲೆನಾಡಿನ ಪರಿಸರ, ಪ್ರಕೃತಿ ವಿಶ್ವಕ್ಕೆ ಪರಿಚಯವಾಗಿದೆ ಎಂದರು.

ಸಭೆ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಅಧ್ಯಕ್ಷ ಪೂರ್ಣೇಶ್ ಮಾತನಾಡಿ, ತಾಲೂಕಿನಾದ್ಯಂತ ಗ್ರಾಮೀಣ ಭಾಗದಲ್ಲಿ ಹಲವಾರು ಪ್ರತಿಭೆಗಳಿವೆ. ಕವಿಗಳಿದ್ದಾರೆ ಆದರೆ, ಅವರಿಗೆ ಸೂಕ್ತ ಅವಕಾಶ ಸಿಕ್ಕಿರುವುದಿಲ್ಲ. ತಾಲೂಕು ಕಸಾಪ ಇದನ್ನು ಗಮನಿಸಿ ಅವರ ಪ್ರತಿಭೆಗಳಿಗೆ ನೀರೆರೆದು ಪ್ರೋತ್ಸಾಹ ನೀಡುತ್ತಿದ್ದೇವೆ. ಇಂದು ಉದಯೋನ್ಮುಖ ಕವಿಗಳ ಸ್ವರಚಿತ ಕವನ ವಾಚನ ಏರ್ಪಡಿಸಿದ್ದು ಕವಿಗಳಿಗೆ ಪ್ರೋತ್ಸಾಹ ನೀಡಿದ್ದೇವೆ. ಈ ಕಾರ್ಯಕ್ರಮದ ಜೊತೆಗೆ ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿ ಬಾಯಿ ಪುಲೆ ಜಯಂತಿ ಆಚರಿಸುತ್ತಿದ್ದೇವೆ. ಸಾವಿತ್ರಿ ಬಾಯಿ ಶಿಕ್ಷಕಿಯಾಗಿ ಪತಿಯ ಸಹಕಾರದಿಂದ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಲು ಉತ್ತೇಜನ ನೀಡಿದ್ದರು. ಆಗಿನ ಕಾಲದಲ್ಲಿ ತಳ ಸಮುದಾಯವರಿಗೆ, ಹೆಣ್ಣು ಮಕ್ಕಳಿಗೆ ಶಿಕ್ಷಣ ಕಲಿಯಲು ಸಮಾಜ ಒಪ್ಪುತ್ತಿರಲಿಲ್ಲ ಎಂದರು.

ಕಸಾಪ ಬಾಳೆಹೊನ್ನೂರು ಹೋಬಳಿ ಅಧ್ಯಕ್ಷ ಕಾರ್ತಿಕ್ ಕಾರಗದ್ದೆ ಮಾತನಾಡಿ, ಕುವೆಂಪು ಅವರ ಸಾಹಿತ್ಯ ಇಂದಿನ ಯುವಜನರಿಗೆ ಆದರ್ಶವಾಗಬೇಕಾಗಿದೆ. ಆದರೆ, ಯುವಜನರಿಗೆ ಸಾಹಿತ್ಯದ ಬಗ್ಗೆ ಆಸಕ್ತಿ ಕಡಿಮೆಯಾಗಿರುವುದು ವಿಷಾದದ ಸಂಗತಿ. ಮೊಬೈಲ್ ಸಾಹಿತ್ಯವನ್ನು ಕೊಲ್ಲುತ್ತಿದೆ. ಪ್ರತಿಯೊಬ್ಬರೂ ಪುಸ್ತಕಗಳನ್ನು ಓದುತ್ತಾ ಬಂದರೆ ಜ್ಞಾನ ಭಂಡಾರ ಹೆಚ್ಚಾಗುತ್ತದೆ ಎಂದರು. ಹಿರಿಯ ಪತ್ರಕರ್ತ ಯಡಗೆರೆ ಮಂಜುನಾಥ್ ಅನಿಸಿಕೆ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಸಾಹಿತಿ ಕೆ.ಟಿ.ವಿಜಯಕುಮಾರ್ ರಚಿಸಿದ ಸ್ವ ರಚಿತ ಭಾವಗೀತೆಗಳ ಸಂಗೀತ ಗುಚ್ಛದ ದ್ವನಿ ಸುರಳಿ ಬಿಡುಗಡೆ ಮಾಡಲಾಯಿತು. ಸಾವಿತ್ರಿ ಬಾಯಿ ಫುಲೆ ಪ್ರಶಸ್ತಿಯನ್ನು ಸಂಕದಕುಣಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ವೇದಾವತಿಗೆ ನೀಡಲಾಯಿತು. ಕುವೆಂಪು ಜನ್ಮ ದಿನಾಚರಣೆ ಪ್ರಯುಕ್ತ ಗಾಯಕಿ ಕೆ.ಕಣಬೂರು ಕು. ತೃಪ್ತಿ ಅವರನ್ನು ಸನ್ಮಾನಿಸಲಾಯಿತು.13 ಜನ ಉದಯೋನ್ಮುಖ ಕವಿಗಳು ಸ್ವರಚಿತ ಕವನ ವಾಚಿಸಿದರು.

ಮುಖ್ಯ ಅತಿಥಿಗಳಾಗಿ ಡಾ.ಸುರೇಶ್ ಕುಮಾರ್, ಡಾ.ವೀರಪ್ರಸಾದ್,ಕಸಾಪ ಕಸಬಾ ಹೋಬಳಿ ಅಧ್ಯಕ್ಷ ಪ್ರಕಾಶ್ ಬನ್ನೂರು, ಕೋಶಾಧ್ಯಕ್ಷ ಕೆ.ಎಸ್.ರಾಜಕುಮಾರ್, ಸಾಹಿತಿ ಜಯಮ್ಮ, ಕ.ಸಾ.ಪ ಹಿರಿಯ ಸದಸ್ಯ ಪಿ.ಸಿ.ಮ್ಯಾಥ್ಯೂ ,ಕಸಾಪ ಪ್ರಧಾನ ಕಾರ್ಯದರ್ಶಿ ನಂದಿನಿ ಆಲಂದೂರು, ಮಿಥುನ್ ಇದ್ದರು.