ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಕನ್ನಡ ಸಾಹಿತ್ಯ ಪರಿಷತ್ತು ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ನಾಡು-ನುಡಿಯನ್ನು ಉಳಿಸುವ ಕೆಲಸ ಮಾಡುತ್ತಿದೆ ಎಂದು ಕಸಾಪ ಮಾಜಿ ಅಧ್ಯಕ್ಷ ಹಾರೋಹಳ್ಳಿ ಧನ್ಯಕುಮಾರ್ ಹೇಳಿದರು.ಪಟ್ಟಣದ ಕಸಾಪ ಭವನದಲ್ಲಿ ತಾಲೂಕು ಪರಿಷತ್ ವತಿಯಿಂದ ನಡೆದ ಸಾಹಿತ್ಯ ಪರಿಷತ್ತಿನ 110ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ದೇಶ-ವಿದೇಶಗಳಲ್ಲಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ತೊಡಗಿದೆ. ಅನೇಕ ಸಂಘ ಸಂಸ್ಥೆಗಳು ಕನ್ನಡ ಪರವಾಗಿ ಹೋರಾಟ ಮಾಡುತ್ತಿದ್ದರು ಸಹ ಪರಿಷತ್ತು ಮಾತ್ರ ಸರಕಾರದ ಅಂಗ ಸಂಸ್ಥೆಯಾಗಿ ತನ್ನ ಅಸ್ಮಿತೆ ಉಳಿಸಿಕೊಂಡು ಬರುತ್ತಿದೆ ಎಂದರು.
ಪರಿಷತ್ ಬೆಂಗಳೂರಿನ ಶ್ರೀಕೃಷ್ಣರಾಜ ಪರಿಷತ್ ಮಂದಿರದಲ್ಲಿ 1915ನೇ ಮೇ 5ರಂದು ಅಧಿಕೃತವಾಗಿ ಉದ್ಘಾಟನೆ ಮಾಡಲಾಯಿತು. ಮೈಸೂರು ಅರಸ ಮಹರ್ಷಿ ಶ್ರೀನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಪರಿಷತ್ತಿಗೆ ಚಾಲನೆ ನೀಡಿದರು.ಆರಂಭದಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ತು ಎಂದು ಆರಂಭಗೊಂಡ ಈ ಪರಿಷತ್ತಿಗೆ 1928ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಎಂದು ಮರುನಾಮಕರಣ ಮಾಡಲಾಯಿತು. ಸಾಹಿತ್ಯ ಪರಿಷತ್ತು ಆರಂಭಗೊಂಡ ಸವಿನೆನಪಿಗಾಗಿ ಪ್ರತಿ ವರ್ಷ ಮೇ 5ರಂದು ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನವನ್ನಾಗಿ ರಾಜ್ಯದೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತಿದೆ ಎಂದರು.
ಕನ್ನಡ ನಾಡಿನ ನೆಲ, ಜಲ,ಕಲೆ,ಸಾಹಿತ್ಯ, ಸಂಸ್ಕೃತಿ ಹಾಗೂ ಭಾಷೆ ಉಳಿಸುವ ಬೆಳೆಸಿ ಪಸರಿಸುವ ಜವಾಬ್ದಾರಿಯನ್ನು ಪರಿಷತ್ತು ಹೊತ್ತು ಕಾರ್ಯನಿರ್ವಹಿಸುತ್ತಿದೆ. ಇದರ ಜೊತೆಗೆ ಸಾಹಿತ್ಯ ಸಮ್ಮೇಳನಗಳನ್ನು ಆಯೋಜನೆ ಮಾಡಿ ಕನ್ನಡದ ಸಾಹಿತಿಗಳಿಗೆ ಮತ್ತು ಕವಿಗಳಿಗೆ ಪ್ರೋತ್ಸಾಹ, ಕನ್ನಡ ಪುಸ್ತಕಗಳ ಪ್ರಕಟಣೆ, ಕನ್ನಡ ಶಾಲೆಗಳ ಉಳಿವಿಗಾಗಿ ಹೋರಾಟ ಮುಂತಾದ ಹತ್ತು ಹಲವು ಕಾರ್ಯಗಳನ್ನು ಕಸಾಪ ನಿರಂತರವಾಗಿ ಮಾಡುತ್ತಿದೆ ಎಂದರು.ಕಸಾಪ ಅಧ್ಯಕ್ಷ ಪ್ರಕಾಶ್ ಮೇನಾಗರ ಮಾತನಾಡಿ, ಕಸಾಪ ತನ್ನ ಗುರಿ ಉದ್ದೇಶಗಳನ್ನು ಸಾಧಿಸುವ ನಿಟ್ಟಿನಲ್ಲಿ ನಿರಂತರವಾಗಿ ಕಾರ್ಯ ಪ್ರವೃತವಾಗಿದೆ. ನವೆಂಬರ್ ಮಾಹೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳೋಣ ಎಂದರು.
ಕಾರ್ಯಕ್ರಮದಲ್ಲಿ ಕಸಾಪ ಮಾಜಿ ಅಧ್ಯಕ್ಷ ಚಲುವೇಗೌಡ, ಉಪಾಧ್ಯಕ್ಷರಾದ ಶಿವರಾಜು, ಪುಟ್ಟೇಗೌಡ, ಕಾರ್ಯದರ್ಶಿ ವೆಂಕಟೇಶ, ಶ್ರೀನಿವಾಸ ಚಿಕ್ಕಾಡೆ, ಸಂಘಟನಾ ಕಾರ್ಯದರ್ಶಿ ಜಯರಾಮ್, ಕರುಣಾಕರ, ಪದಾಧಿಕಾರಿಗಳಾದ ಸ್ವಾಮಿಗೌಡ, ಕೃಷ್ಣೆಗೌಡ, ಸುನೀಲ್, ಲೋಕೇಶ್, ಮಹೇಶ್, ಪುಟ್ಟಸ್ವಾಮಿ, ಜಗದೀಶ, ಎಸ್.ಎಲ್.ರಾಮಕೃಷ್ಣ, ಚಂದ್ರಶೇಖರಯ್ಯ ಘಟಕದ ಅಧ್ಯಕ್ಷರಾದ ಮಹದೇವು, ದೇವೇಗೌಡ, ಗುರುರಾಜ ಕ್ಯಾತನಹಳ್ಳಿ ಸೇರಿದಂತೆ ಹಲವರು ಹಾಜರಿದ್ದರು.