ಮತ್ತೋಡು ಕಾಶಿ ಭಾಗೀರಥಿ ದೇವಿ ಅದ್ಧೂರಿ ರಥೋತ್ಸವ

| Published : May 22 2024, 12:45 AM IST

ಸಾರಾಂಶ

ಹೊಸದುರ್ಗದ ಮತ್ತೋಡಿನಲ್ಲಿ ಕಾಶಿ ಭಾಗೀರಥಿ ದೇವಿಯ ರಥೋತ್ಸವ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ತಾಲ್ಲೂಕಿನ ಮತ್ತೋಡು ಗ್ರಾಮದಲ್ಲಿ ನೆಲೆಸಿರುವ ಕಾಶಿ ಭಾಗೀರಥಿ ದೇವಿಯ ರಥೋತ್ಸವ ಮಂಗಳವಾರ ನಸುಕಿನಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಮೇ 16ರಂದು ಧ್ವಜಾರೋಹಣ ಮಾಡುವ ಮೂಲಕ ರಥೋತ್ಸವದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅಂದು ರಾತ್ರಿ 8ಕ್ಕೆ ಮಧುವಣಿಗೆಶಾಸ್ತ್ರ ಧಾರ್ಮಿಕ ವಿಧಿಗಳನ್ವಯ ಅದ್ಧೂರಿಯಾಗಿ ನಡೆಯಿತು.

ಗಂಗಾಪೂಜೆ, 101 ಎಡೆಪೂಜೆ, ಕೋಣನ ಉತ್ಸವ, ಆನೆ ಉತ್ಸವ ಸೇರಿದಂತೆ ನಿತ್ಯ ಒಂದೊಂದು ಧಾರ್ಮಿಕ ಕಾರ್ಯಗಳು ನಡೆದವು. ಪ್ರತಿದಿನ ಹತ್ತಾರು ಜನ ಭಕ್ತಾದಿಗಳು ದೇವಿಯ ದರ್ಶನ ಪಡೆದರು.

ರಥೋತ್ಸವದ ಅಂಗವಾಗಿ ಸೋಮವಾರ ರಾತ್ರಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಮಂಗಳವಾರ ಮಹಾ ಮಂಗಳಾರತಿ ನಂತರ ದೇವಿಯನ್ನು ರಥೋತ್ಸವಕ್ಕೆ ಕರೆತರಲಾಯಿತು. ಬೆಳ್ಳಿಕಣ್ಣಯ್ಯ ದಕ್ಷಬ್ರಹ್ಮ ದೇವರು ಮುಂದೆ ಸಾಗಿತು, ಅದರ ಹಿಂದೆ, ಸಕಲ ವಾದ್ಯಗಳ ನಾದಸ್ವರದಲ್ಲಿ ದೇವಿಯು, ರಥವನ್ನು ಸುತ್ತುವರೆದು, ರಥವೇರಿತು. ಕೂಡಲೇ ಭಕ್ತಾದಿಗಳು ರಥ ಎಳೆದರು.ಇನ್ನೂ ಕೆಲವರು ರಥಕ್ಕೆ ಬಾಳೆಹಣ್ಣು, ಮಂಡಕ್ಕಿ, ವೀಳ್ಯದೆಲೆ, ನಾಣ್ಯವನ್ನು ಅರ್ಪಿಸಿ, ವಿವಿಧ ಬೇಡಿಕೆಗಳ ಈಡೇರಿಕೆಗೆ ಪ್ರಾರ್ಥಿಸಿದರು.

ಅರೇಹಳ್ಳಿ ಎಲ್. ಕೃಷ್ಣಮೂರ್ತಿ ಮಾಹಿತಿ ನೀಡಿ, ಈ ಬಾರಿಯ ರಾಥೋತ್ಸವದಲ್ಲಿ ಸುಮಾರು 6 ಸಾವಿರಕ್ಕೂ ಅಧಿಕ ಜನಸಂಖ್ಯೆ ಸೇರಿದ್ದು , ರಥೋತ್ಸವ ಅತ್ಯಂತ ವಿಜೃಂಭಣೆ ಯಿಂದ ನಡೆಯಿತು. ಸುತ್ತಲಿನ ಅರೇಹಳ್ಳಿ, ಮತ್ತೋಡು, ಕಪ್ಪನಾಯಕನಹಳ್ಳಿ, ಬಿ.ಜಿ ಪಾಳ್ಯ, ಶಾಂತಪ್ಪನ ಪಾಳ್ಯ ಹಾಗೂ ದೊಡ್ಡಯ್ಯನಪಾಳ್ಯ ಸುತ್ತ ಏಳು ಹಳ್ಳಿಗಳ ಜನರು ದೇವಿಯ ರಥೋತ್ಸವದಲ್ಲಿ ಭಾಗಿಯಾದರು ಎಂದರು.

ಮತ್ತೋಡಿನ ನಿಖಿಲ್ ಎಂ. ಮಾತನಾಡಿ, ತಾಯಿ ರಾಜ್ಯದ ವಿವಿಧೆಡೆ ಸಾವಿರಾರು ಭಕ್ತರಿದ್ದಾರೆ. ಪ್ರತಿ ವರ್ಷ ನಡೆಯುವ ಜಾತ್ರೆಗೆ ಬೆಂಗಳೂರು, ಮೈಸೂರು, ಚಿತ್ರದುರ್ಗ, ಚಿಕ್ಕಮಗಳೂರು, ತುಮಕೂರು, ಕೊಡಗು ನಿಂದ ಭಕ್ತರು ಆಗಮಿಸುತ್ತಾರೆ. ಕಾಶಿಯಿಂದ ಬಂದಿರುವ ತಾಯಿ ಭಾಗೀರಥಿ ಅಪಾರ ಶಕ್ತಿ ಹೊಂದಿದೆ. ಭಕ್ತರ ಕಷ್ಟಕ್ಕೆ ಸ್ಪಂದಿಸುತ್ತಿದೆ ಎಂದು ಹೇಳಿದರು.

ಬುಧವಾರ ಸಂಜೆ ಹೋಕಳಿ, ಕಂಕಣ ವಿಸರ್ಜನೆ, ಸೋಮನಾಥ ಸ್ವಾಮಿಯ ನಡೆಮುಡಿ ಸೇವಾ ಕಾರ್ಯ ನಂತರ ರಥೋತ್ಸವದ ಕಾರ್ಯಗಳಿಗೆ ತೆರೆ ಬೀಳುವುದು.ಚಳ್ಳಕೆರೆ ವೀರಭದ್ರಸ್ವಾಮಿ ರಥೋತ್ಸವ ಸಂಭ್ರಮದಲ್ಲಿ ಮಿಂದೆದ್ದ ಭಕ್ತರು

ಚಳ್ಳಕೆರೆ: ನಗರದ ಗ್ರಾಮ ದೇವರು ಲಕ್ಷಾಂತರ ಭಕ್ತರ ಆರಾಧ್ಯ ದೈವ ನಂಬಿದ ಭಕ್ತರಿಗೆ ಶ್ರೇಯಸ್ಸನ್ನು ಸದಾಕಾಲ ನೀಡುವ ಶ್ರೀ ವೀರಭದ್ರಸ್ವಾಮಿಯ ಭವ್ಯ ರಥೋತ್ಸವ ಮೇ ೨೨ರಂದು ವಿಜೃಂಭಣೆಯಿಂದ ನಡೆಯಲಿದ್ದು, ಈಗಾಗಲೇ ದೇವಸ್ಥಾನಕ್ಕೆ ಸಾವಿರಾರು ಸಂಖ್ಯೆಯ ಭಕ್ತರು ಆಗಮಿಸಿ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.ದೇವಸ್ಥಾನದ ಆಡಳಿತ ಮಂಡಳಿ ಧರ್ಮದರ್ಶಿ ಗೌಡ್ರ ರಾಮಣ್ಣ, ಶಾನಭೋಗರು ಹಾಗೂ ಆಯಾಗಾರರು ಪ್ರತಿವರ್ಷದಂತೆ ಈ ವರ್ಷವೂ ರಥೋತ್ಸವವನ್ನು ಯಶಸ್ವಿಗೊಳಿಸಲು ಪೂರ್ವಸಿದ್ಧತೆಯಲ್ಲಿ ತೊಡಗಿದ್ದಾರೆ. ರಥೋತ್ಸವ ದಿನದಂದೇ ಬೆಳಗಿನ ಜಾವ ಅಗ್ನಿಕುಂಡ ಕಾರ್ಯಕ್ರಮ ನಡೆಯಲಿದ್ದು, ಹರಕೆ ಹೊತ್ತ ಭಕ್ತರು ಬೆಳಗಿನ ಜಾವ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೆಂಡ ಹಾಯುವ ಮೂಲಕ ತಮ್ಮ ಹರಿಕೆ ಪೂರೈಸುವರು. ಅಗ್ನಿಕುಂಡ ಕಾರ್ಯಕ್ರಮವನ್ನು ವೀಕ್ಷಿಸಲು ಸುತ್ತಮುತ್ತಲ ಸಾವಿರಾರು ಸಂಖ್ಯೆಯ ಭಕ್ತರು ದೇವಸ್ಥಾನದ ಬಳಿ ಜಮಾದ್ದರು.

ಇಂದು ಶಾಸಕ ಭಾಗಿ: ಮೇ ೨೨ರ ಬುಧವಾರ ಸ್ವಾಮಿಯ ದೊಡ್ಡ ರಥೋತ್ಸವ ನಡೆಯಲಿದ್ದು, ಈ ಕಾರ್ಯಕ್ರಮದಲ್ಲೂ ಸಾವಿರಾರು ಸಂಖ್ಯೆಯ ಭಕ್ತರು ಭಾಗವಹಿಸುವರು. ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಳ್ಳಲಿದ್ದಾರೆ.