ಕಾಶ್ಮೀರವು ಕರ್ನಾಟಕದಂತೆಯೇ ಶ್ರೀಮಂತ ಪರಂಪರೆ, ಪ್ರಕೃತಿ ಸೌಂದರ್ಯ ಹೊಂದಿದೆ: ಡಾ.ಪಿ. ಶಿವರಾಜು

| Published : Dec 11 2024, 12:47 AM IST

ಕಾಶ್ಮೀರವು ಕರ್ನಾಟಕದಂತೆಯೇ ಶ್ರೀಮಂತ ಪರಂಪರೆ, ಪ್ರಕೃತಿ ಸೌಂದರ್ಯ ಹೊಂದಿದೆ: ಡಾ.ಪಿ. ಶಿವರಾಜು
Share this Article
  • FB
  • TW
  • Linkdin
  • Email

ಸಾರಾಂಶ

ಭಾರತದ ಪ್ರಜಾಪ್ರಭುತ್ವವನ್ನು ಬಲಪಡಿಸಬೇಕೆಂದರೆ ಎಲ್ಲಾ ರಾಜ್ಯಗಳ ಜನರೂ ಒಂದೇ ಎಂಬ ಭಾವವನ್ನು ಮೆರೆಯಬೇಕು. ತಮ್ಮ ವೈವಿಧ್ಯತೆಯನ್ನು ಪಸರಿಸಬೇಕಿದೆ. ಈ ಹಿನ್ನೆಲೆಯಲ್ಲಿಯೇ ಕೇಂದ್ರ ಸರ್ಕಾರ ಹಾಗೂ ನೆಹರು ಯುವ ಕೇಂದ್ರವು ದೇಶದಾದ್ಯಂತ ಕಾರ್ಯಕ್ರಮ ಹಮ್ಮಿಕೊಂಡಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಕಾಶ್ಮೀರವು ಕರ್ನಾಟಕದಂತೆಯೇ ಶ್ರೀಮಂತ ಪರಂಪರೆ, ಪ್ರಕೃತಿ ಸೌಂದರ್ಯವನ್ನು ಹೊಂದಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜು ತಿಳಿಸಿದರು.

ನಗರದ ರಾಜ್ಯ ಮುಕ್ತ ಕಾವೇರಿ ಸಭಾಂಗಣದಲ್ಲಿ ಕೇಂದ್ರ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ, ಜಿಲ್ಲಾ ನೆಹರು ಯುವ ಕೇಂದ್ರ ಸಹಯೋಗದಲ್ಲಿ ಆಯೋಜಿಸಿರುವ ಕಾಶ್ಮೀರಿ ಯುವಜನ ವಿನಿಮಯ ಕಾರ್ಯಕ್ರಮವನ್ನು ಮಂಗಳವಾರ ಸಾಂಕೇತಿಕವಾಗಿ ಅವರು ಚಾಲನೆ ನೀಡಿ ಮಾತನಾಡಿದರು.

ಭಾರತದ ಪ್ರಜಾಪ್ರಭುತ್ವವನ್ನು ಬಲಪಡಿಸಬೇಕೆಂದರೆ ಎಲ್ಲಾ ರಾಜ್ಯಗಳ ಜನರೂ ಒಂದೇ ಎಂಬ ಭಾವವನ್ನು ಮೆರೆಯಬೇಕು. ತಮ್ಮ ವೈವಿಧ್ಯತೆಯನ್ನು ಪಸರಿಸಬೇಕಿದೆ. ಈ ಹಿನ್ನೆಲೆಯಲ್ಲಿಯೇ ಕೇಂದ್ರ ಸರ್ಕಾರ ಹಾಗೂ ನೆಹರು ಯುವ ಕೇಂದ್ರವು ದೇಶದಾದ್ಯಂತ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.

ಮೈಸೂರಿನ ಇತಿಹಾಸ, ಭಾಷೆ, ಸಂಸ್ಕೃತಿ ಅರಿಯುವುದರ ಜೊತೆಗೆ ಅಡುಗೆ, ತಿನಿಸುಗಳನ್ನು ಸವಿಯಬೇಕು. ರಾಜ್ಯದಲ್ಲಿ ಸಿಕ್ಕ ಅನುಭವ, ಇಲ್ಲಿನ ಹಿರಿಮೆಯನ್ನು ನಿಮ್ಮ ರಾಜ್ಯದಲ್ಲೂ ಹಂಚಿಕೊಂಡು ಬಾಂಧವ್ಯ ಗಟ್ಟಿಗೊಳಿಸುವ ಕೆಲಸವನ್ನು ಯುವಕರು ಮಾಡಬೇಕು ಎಂದು ಅವರು ಕರೆ ನೀಡಿದರು.

ಕಾಶ್ಮೀರಿ ಯುವ ಸಮುದಾಯವು ಸಾಂಸ್ಕೃತಿಕ ನಗರಿ ಮೈಸೂರಿನ ಸಂಸ್ಕೃತಿ ಹಾಗೂ ಪರಂಪರೆಯನ್ನು ಅರಿಯಬೇಕು. ಇಲ್ಲಿನ ವಿದ್ಯಾರ್ಥಿಗಳಿಗೂ ಕಾಶ್ಮೀರದ ಭಾಷೆ, ಸಂಸ್ಕೃತಿಯನ್ನು ಪರಿಚಯಿಸಬೇಕು. ದೇಶವು ಅಭಿವೃದ್ಧಿಯತ್ತ ಸಾಗಲು ಯುವ ಜನತೆಯ ಕೊಡುಗೆ ಮುಖ್ಯವಾಗುತ್ತದೆ. ಸೌಹಾರ್ದ ಪರಂಪರೆಯನ್ನು ಉಳಿಸಿಕೊಳ್ಳಬೇಕು. ದೇಶ ಹಾಗೂ ಇಲ್ಲಿನ ಜನರು ಕಟ್ಟಿರುವ ಸಹಬಾಳ್ವೆಯನ್ನು ಮುಂದುವರಿಸುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದರು.

ಇದೇ ವೇಳೆ ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಕಾರ್ಯಕ್ರಮವು ಡಿ.14 ರಂದು ಸಮಾರೋಪಗೊಳ್ಳಿದೆ. ಕಾಶ್ಮೀರದ ಸಂತ್ರಸ್ಥ ಭಾಗಗಳ ಸುಮಾರು 120 ಯುವಜನರು, 12 ಜನ ಉಸ್ತುವಾರಿ ಅಧಿಕಾರಿಗಳು ಭಾಗವಹಿಸಿದ್ದಾರೆ.

ನೆಹರು ಯುವ ಕೇಂದ್ರದ ರಾಜ್ಯ ನಿರ್ದೇಶಕ ಅಶೋಕಕುಮಾರ ದಾಸ್, ನಿವೃತ್ತ ಅಧಿಕಾರಿ ನಟರಾಜ್, ಜಿಲ್ಲಾ ಯುವಜನ ಸಮನ್ವಯಾಧಿಕಾರಿಗಳಾದ ಅಭಿಷೇಕ್ ಎಸ್. ಚವರೆ, ಮೊಂಟು ಪತಾರ್, ಇಮ್ರಾನ್ ಅಹಮದ್, ಸತೀಶ್ ಪಡೋಡೆ, ಸತ್ಯನಾರಾಯಣಗೌಡ ಮೊದಲಾದವರು ಇದ್ದರು.