ತಾಲೂಕಿನ ದೊಡ್ಡಗ್ರಾಮವಾದ ಕಸ್ತೂರು ಗ್ರಾಮದಲ್ಲಿ ಫೆ.12 ರಿಂದ ಏ.26 ತನಕ‌ ಕಸ್ತೂರು ಮಾರಮ್ಮನ ಮಾರಿಹಬ್ಬ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಯಳಂದೂರು

ತಾಲೂಕಿನ ದೊಡ್ಡಗ್ರಾಮವಾದ ಕಸ್ತೂರು ಗ್ರಾಮದಲ್ಲಿ ಫೆ.12 ರಿಂದ ಏ.26 ತನಕ‌ ಕಸ್ತೂರು ಮಾರಮ್ಮನ ಮಾರಿಹಬ್ಬ ನಡೆಯಲಿದೆ.

ಈ ಗ್ರಾಮದಲ್ಲಿ ಸುಮಾರು 12 ಸಮುದಾಯವಿದ್ದು ಎಲ್ಲರೂ ಸೇರಿ ಅನ್ಯೂನತೆಯಿಂದ ಹಬ್ಬವನ್ನು ಆಚರಿಸಲಾಗುತ್ತದೆ.ಈ ಹಬ್ಬದ ವಿಶೇಷವೆಂದರೆ ಪ್ರತಿ ಐದು ವರುಷಕ್ಕೊಮ್ಮೆ ಈ ಹಬ್ಬವನ್ನು ಗ್ರಾಮಸ್ಥರು ಆಚರಿಸಿಕೊಂಡು ಬಂದಿದ್ದಾರೆ. ಗ್ರಾಮದೇವತೆ ಕೆಸ್ತೂರು ಮಾರಮ್ಮನಿಗೆ ಮೂರು ತಿಂಗಳಲ್ಲಿ ಸುಮಾರು ಇಪ್ಪತ್ತು ಹಬ್ಬಗಳನ್ನು ಆಚರಿಸಿ ದೇವರನ್ನು ಸ್ಮರಿಸುತ್ತಾರೆ. ತುಂಬಾ ಕಟ್ಟುನಿಟ್ಟಾಗಿ ಹಬ್ಬವನ್ನು ಆಚರಿಸಲಾಗುತ್ತದೆ.ಈ ಹಬ್ಬ ಪ್ರಾರಂಭವಾಯಿತೆಂದರೆ ಗ್ರಾಮದೇವತೆಗೆ ಸುತ್ತಲಿನ ಗ್ರಾಮಗಳಾದ ಚಿಲಕವಾಡಿ, ಮಲ್ಲಿಗಹಳ್ಳಿ, ಕೆ ಹೊಸೂರು, ಯರಿಯೂರು ಗ್ರಾಮಗಳಿಂದ ಅಲ್ಲಿನ ಗ್ರಾಮಸ್ಥರು ಸಂಪ್ರದಾಯದಂತೆ ಕೆಲವು ಆಚರಣೆಗಳನ್ನು ಮಾಡುತ್ತಾರೆ. ಫೆ.12 ಸೋಮವಾರ ಗ್ರಾಮದ ದೇವತೆಯ ಮೊದಲ ಹಬ್ಬ ಹಾಲರವಿ ಉತ್ಸವವು ಸಂಜೆ‌ 9 ರಂದು ಸಹಸ್ರಾರು ಭಕ್ತಾದಿಗಳೊಂದಿಗೆ ನಡೆಯುತ್ತದೆ. ರಾತ್ರಿ ಪೂರ್ತಿ ಹಾಲರವಿ ಉತ್ಸವ ನಡೆಯುತ್ತದೆ. ಫೆ. 13 ತಟ್ಟೆ (ಬಿದಿರುಬೊಂಬು) ತಂದು ದೇವಾಲಯದ ಮುಂದೆ ನೆಟ್ಟು ಗ್ರಾಮದೇವತೆಯನ್ನು ಉಯ್ಯಾಲೆ ಮಾಡುವುದು.ಮಾ.8 ರಂದು ಶಿವರಾತ್ರಿದಿನ ರಾತ್ರಿ ಕಸ್ತೂರು ಮಾರಮ್ಮ, ಬಸವೇಶ್ವರ, ಮಂಟೇಸ್ವಾಮಿ ಕಂಡಾಯಗಳ ಮೆರವಣಿಗೆ. ಮಾ. 22 ದಂಡಿನ ಮಾರಮ್ಮನ ಹಬ್ಬ, ಮಾ.24 ತಟ್ಟೆ ತರಿಯುವುದು(ಬಿದಿರುಬೊಂಬು) ಮತ್ತು ಕರಕಲು ಇಡುವುದು, ಮಾ. 26 ವದೆ ಮತ್ತು ಹೆಬ್ರಗಳ ಮದುವೆ ಹಾಗೂ ಜನಿವಾರ ಹಾಕುವುದು, ಮಾ.28 ಮೊದಲ ಮಸಿ ಮತ್ತು ಮಾರಿಕೇಲು, ಮಾ.31 ಅವರಗಡೆ, ಏ.2 ರಾತ್ರಿ ಎಲ್ಲಾ ಜನಾಂಗದವರ ತಂಪು, ಏ.3 ಎದ್ದ ಬಲಿ ಮತ್ತು ತಲೆ ಮೇಲೆ ಕಾಯಿ ಒಡೆಯುವುದು ಮತ್ತು ಮಡೆ, ಈಡಿಗರ ತಂಪು, ಏ. 4 ದೊಡ್ಡ ಹಬ್ಬ (ಓಕಳಿ, ಕೋಲಾಟ, ಕುದುರೆ ಕುಣಿತ, ವಿವಿಧ ಜನಾಂಗದ ಸಂಸ್ಕೃತಿಗಳ ಅನಾವರಣ, ಏ.5 ಜುಟ್ಟು ಕುಣಿಸುವುದು, ಏ.9 ಯುಗಾದಿ ಉತ್ಸವ, ಕಾವೇರಿ ನದಿಯಿಂದ ದೇವರುಗಳ ಮೆರವಣಿಗೆ, ಏ. 16 ಚಿಲಕವಾಡಿಯಲ್ಲಿ ಧಾರ್ಮಿಕ ಕಾರ್ಯ, ಏ.22 ಕೊಂಡಬಂಡಿ ಉತ್ಸವ, ಏ.23 ಕೊಂಡೋತ್ಸವ, ವೈದ್ಯನಾಥೇಶ್ವರನ ಪೂಜೆ, ಏ.24 ಕಡೆಕುಣಿತ, ಏ. 26 ಬಲಿದೇವರ ಮನೆಯ ಕಾರ್ತಿಕ ಮಹೋತ್ಸವ, ಇಷ್ಟು ಹಬ್ಬದಲ್ಲಿ ಏಪ್ರಿಲ್ 2 ಮತ್ತು 3, 4 ರಂದು ದೊಡ್ಡ ಹಬ್ಬವಾಗಿರುತ್ತದೆ ಸುತ್ತಮುತ್ತಲಿನ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜ‌ನರು ಆಗಮಿಸುತ್ತಾರೆ ಎಂದು ಗ್ರಾಮದ ನಾಡಗೌಡರು, ಗೌಡರು ಎಲ್ಲಾ ಜನಾಂಗದ ಯಜಮಾನರು ತಿಳಿಸಿದರು.