ಸಾರಾಂಶ
ಬೆಂಗಳೂರು : ಪಶ್ಚಿಮಘಟ್ಟಗಳ ಕುರಿತ ಡಾ.ಕಸ್ತೂರಿ ರಂಗನ್ ವರದಿ ಹಾಗೂ ಪಶ್ಚಿಮ ಘಟ್ಟಗಳನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸಿ ಕೇಂದ್ರ ಸರ್ಕಾರ ಹೊರಡಿಸಿರುವ ಆರನೇ ಕರಡು ಅಧಿಸೂಚನೆಯನ್ನು ತಿರಸ್ಕರಿಸಲು ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆ ನಿರ್ಧರಿಸಿದೆ.
ಕೇಂದ್ರ ಸರ್ಕಾರವು ಪಶ್ಚಿಮ ಘಟ್ಟಗಳನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಲು 2024ರ ಜು.31ರಂದು ಆರನೇ ಕರಡು ಅಧಿಸೂಚನೆ ಹೊರಡಿಸಿ ಆಕ್ಷೇಪಣೆ ಹಾಗೂ ಸಲಹೆಗಳನ್ನು ಆಹ್ವಾನಿಸಿತ್ತು. ಇದಕ್ಕೂ ಮೊದಲು ಐದು ಬಾರಿ ಅಧಿಸೂಚನೆ ಹೊರಡಿಸಿದ್ದರೂ ರಾಜ್ಯ ಸರ್ಕಾರ ತಿರಸ್ಕರಿಸಿತ್ತು. ಇದೀಗ ಗುರುವಾರ ಆರನೇ ಬಾರಿ ತಿರಸ್ಕಾರ ಮಾಡಿದೆ.
ಉನ್ನತ ಮಟ್ಟದ ಕಾರ್ಯನಿರತ ತಂಡವು ಪಶ್ಚಿಮಘಟ್ಟಗಳ ಪ್ರದೇಶವನ್ನು ನಿಗದಿಗೊಳಿಸಲು ವಸ್ತುನಿಷ್ಠವಾಗಿ ಕೆಲಸ ಮಾಡಿಲ್ಲ. ಇನ್ನು ಡಾ.ಕೆ.ಕಸ್ತೂರಿ ರಂಗನ್ ವರದಿ ಅನ್ವಯ ಪರಿಸರ ಸೂಕ್ಷ್ಮ ಪ್ರದೇಶವನ್ನಾಗಿ 20,668 ಚ.ಕಿ.ಮೀ. ಪ್ರದೇಶವನ್ನು ಗುರುತಿಸಲಾಗಿದೆ. ವಾಸ್ತವ ಲೋಪಗಳ ತಿದ್ದುಪಡಿ ಮಾಡಿದಾಗ ಪರಿಸರ ಸೂಕ್ಷ್ಮ ಪ್ರದೇಶವು 19,252.70 ಚ.ಕಿ.ಮೀ. ಆಗುತ್ತದೆ.
ಆದರೆ ವಿವಿಧ ಕಾನೂನುಗಳ ಅಡಿಯಲ್ಲಿ ಸಂರಕ್ಷಿತ ಪ್ರದೇಶ, ಅಧಿಸೂಚಿತ ಅರಣ್ಯ ಅಥವಾ ಪರಿಸರ ಸೂಕ್ಷ್ಮ ವಲಯವಾಗಿ 16,036 ಚ.ಕಿ.ಮೀ. ಪ್ರದೇಶವನ್ನು ಮಾತ್ರ ಸಂರಕ್ಷಿಸಲಾಗುತ್ತಿದೆ. ಉಳಿದ 4 ಸಾವಿರಕ್ಕೂ ಹೆಚ್ಚು ಚ.ಕಿ.ಮೀ. ಪ್ರದೇಶದಲ್ಲಿನ ಜನರನ್ನು ಒಕ್ಕಲೆಬ್ಬಿಸಲು ಸಾಧ್ಯವಿಲ್ಲ. ಇದಕ್ಕೆ ಸ್ಥಳೀಯ ಮಟ್ಟದಲ್ಲಿ ಅಧ್ಯಯನ ಅಗತ್ಯವಿದ್ದು, ಯಾವುದೇ ಅಧ್ಯಯನ ಇಲ್ಲದೆ ಕೇಂದ್ರ ಹೊರಡಿಸಿರುವ ಅಧಿಸೂಚನೆ ಒಪ್ಪಲಾಗುವುದಿಲ್ಲ ಎಂದು ಸಚಿವ ಸಂಪುಟ ತಿರಸ್ಕರಿಸಿದೆ ಎಂದು ಮೂಲಗಳು ತಿಳಿಸಿವೆ.