ಕಸ್ತೂರಿ ರಂಗನ್ ವರದಿ ಪ್ರಾಮಾಣಿಕವಾಗಿ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡ ರೈತರಿಗೆ ಮರಣ ಶಾಸನವಾಗಿದ್ದು, ಈ ಕೂಡಲೇ ಕೇಂದ್ರ ಸರ್ಕಾರ ಕರಡು ಶಾಸನ ವಾಪಸ್ ಪಡೆಯುವ ಮೂಲಕ ರೈತರ ಹಿತಾಸಕ್ತಿ ಕಾಪಾಡಬೇಕು. ತಪ್ಪಿದಲ್ಲಿ ಎಲ್ಲ ರೀತಿಯ ಹೋರಾಟಕ್ಕೂ ಸಿದ್ಧ ಎಂದು ಕೃಷಿ ಭೂಮಿ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಹಾಗೂ ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ ಡಿ.ಎಸ್. ಈಶ್ವರಪ್ಪ ಎಚ್ಚರಿಸಿದರು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಕಸ್ತೂರಿ ರಂಗನ್ ವರದಿ ಪ್ರಾಮಾಣಿಕವಾಗಿ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡ ರೈತರಿಗೆ ಮರಣ ಶಾಸನವಾಗಿದ್ದು, ಈ ಕೂಡಲೇ ಕೇಂದ್ರ ಸರ್ಕಾರ ಕರಡು ಶಾಸನ ವಾಪಸ್ ಪಡೆಯುವ ಮೂಲಕ ರೈತರ ಹಿತಾಸಕ್ತಿ ಕಾಪಾಡಬೇಕು. ತಪ್ಪಿದಲ್ಲಿ ಎಲ್ಲ ರೀತಿಯ ಹೋರಾಟಕ್ಕೂ ಸಿದ್ಧ ಎಂದು ಕೃಷಿ ಭೂಮಿ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಹಾಗೂ ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ ಡಿ.ಎಸ್. ಈಶ್ವರಪ್ಪ ಎಚ್ಚರಿಸಿದರು. ಕೇಂದ್ರ ಪರಿಸರ ಅರಣ್ಯ ಮತ್ತು ಹವಾಮಾನ ಇಲಾಖೆಯ ಸಚಿವಾಲಯ ಹೊರಡಿಸಿರುವ ಕಸ್ತೂರಿ ರಂಗನ್ ವರದಿಯ ಅಧಿಸೂಚನೆ ರದ್ದುಪಡಿಸುವಂತೆ ಆಗ್ರಹಿಸಿ ತಾಲೂಕಿನ ವಿವಿಧ ಭಾಗದ ರೈತರು ಸಾರ್ವಜನಿಕರು ತಾಲೂಕಿನ ಕುಟ್ರಳ್ಳಿ ಯಿಂದ ಪಟ್ಟಣದ ತಾಲೂಕು ಕಚೇರಿವರೆಗೆ ಕೈಗೊಂಡ ಪಾದಯಾತ್ರೆ ನಂತರ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

ತಾಲೂಕಿನ ಜಕ್ಕನಹಳ್ಳಿ ಕುಟ್ರಳ್ಳಿ, ಅಂಬಾರಗೊಪ್ಪ, ಶೀಲವಂತನಕೊಪ್ಪ, ಗುಡ್ಡದ ತುಮ್ಮಿನಕಟ್ಟೆ, ತುಮರಿ ಹೊಸೂರು, ಮದಗಹಾರನಳ್ಳಿ ಮತ್ತಿತರ ಗ್ರಾಮಗಳು ಅತಿ ಸೂಕ್ಷ್ಮ ಪ್ರದೇಶಗಳಲ್ಲ. ಶೇ.100 ಕೃಷಿ ಆಧಾರಿತ ಪ್ರದೇಶವಾಗಿದ್ದು, ಅವುಗಳು ಸ್ವಾತಂತ್ರ್ಯಪೂರ್ವ ಹಾಗೂ ನಂತರದಲ್ಲಿನ ಬಗರ್ ಹುಕುಂ ದರಾಖಸ್ತು ಇನಾಂ ಮತ್ತು ಅರಣ್ಯ ಹಕ್ಕು ಕಾಯ್ದೆಯಡಿ ಸಾಗುವಳಿ ಮಂಜೂರಾತಿ ಪಡೆದ ಭೂಮಿಯಾಗಿದ್ದು, ರೈತರು ಈ ಪ್ರದೇಶದಲ್ಲಿ ಆಹಾರ ಧಾನ್ಯ ಬೆಳೆದು ಬದುಕು ಕಟ್ಟಿಕೊಂಡಿದ್ದಾರೆ ಎಂದು ತಿಳಿಸಿದರು.

ಈ ಪ್ರದೇಶದಲ್ಲಿ ವಾಸಿಸುತ್ತಿರುವ ಜನರಿಗೆ, ರೈತರಿಗೆ ಉತ್ತಮ ರಸ್ತೆ ,ನೀರು, ವಿದ್ಯುತ್, ಶಾಲಾ ಕಾಲೇಜು, ಪತ್ತಿನ ಸಹಕಾರ ಸಂಘ, 110/11 ಕೆ.ವಿ ವಿದ್ಯುತ್ ವಿತರಣಾ ಘಟಕ ಸಹಿತ ವಿವಿಧ ಸೌಲಭ್ಯ ಕಲ್ಪಿಸಲಾಗಿದೆ. ಯಾವುದೇ ವನ್ಯ ಮೃಗಗಳ ಅವಾಸ ಸ್ಥಾನವಾಗಿರದ ಈ ಪ್ರದೇಶ ಪರಿಸರ ಸೂಕ್ಷ್ಮ ಪರಿಸ್ಥಿತಿಯು ಇಲ್ಲವಾಗಿದೆ. ಇಂತಹ ಪ್ರದೇಶಕ್ಕೆ ವರದಿಯು ನೇರ ಪರಿಣಾಮ ಬೀರಲಿದೆ ಎಂದರು.

ರೈತ ಸಂಘದ ಗೌರವಾಧ್ಯಕ್ಷ ಈರಣ್ಣ ಪ್ಯಾಟಿ ಮಾತನಾಡಿ, ಎಲ್ಲ ರೀತಿಯಲ್ಲಿ ಅಭಿವೃದ್ಧಿ ಹೊಂದಿರುವ ಕೃಷಿಗೆ ಅತ್ಯಂತ ಯೋಗ್ಯವಾಗಿರುವ ಈ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ವ್ಯಾಪ್ತಿಗೆ ಸೇರಿಸುವುದರಿಂದ ಭೂಮಿಯ ಸ್ವಂತ ಹಕ್ಕನ್ನು ಕಳೆದುಕೊಂಡು ಹಲವು ರೈತರು ಬೀದಿ ಪಾಲಾಗಲಿದ್ದಾರೆ. ಈ ಹಿಂದೆ ಹಲವು ಗ್ರಾಮ ಸಭೆಗಳಲ್ಲಿ ವರದಿಯನ್ನು ತಿರಸ್ಕರಿಸಲಾಗಿದ್ದು, ಇದೀಗ ಕೇಂದ್ರ ರೈತರ ಆಕ್ಷೇಪಣೆಗಳನ್ನು ಪರಿಗಣಿಸದೆ ವರದಿ ಜಾರಿಗೊಳಿಸಿದಲ್ಲಿ ಕೃಷಿಕರು ಮುಂಬರುವ ಚುನಾವಣೆಯಲ್ಲಿ ಸೂಕ್ತ ರೀತಿಯಲ್ಲಿ ಉತ್ತರಿಸಲಿದ್ದಾರೆ ಎಂದು ಎಚ್ಚರಿಸಿದರು.

ಹಲವು ರೈತ ಮುಖಂಡರು ವರದಿ ವಿರೋಧಿಸಿ ಮಾತನಾಡಿದರು. ತಾಲೂಕಿನ ಕುಟ್ಟರಹಳ್ಳಿಯಿಂದ ಪಾದಯಾತ್ರೆ ಆರಂಭಿಸಿದರು. ಪ್ರತಿಭಟನೆ ನಿರತ ರೈತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಹಾಕಿ ತಮ್ಮ ಪ್ರತಿರೋಧ ವ್ಯಕ್ತಪಡಿಸಿದರು. ನಂತರ ತಹಸೀಲ್ದಾರ್ ಮೂಲಕ ಕೇಂದ್ರಕ್ಕೆ ಕಸ್ತೂರಿ ರಂಗನ್ ವರದಿ ಬಗ್ಗೆ ಆಕ್ಷೇಪಣೆ ಸಲ್ಲಿಸಲಾಯಿತು.

ರೈತ ಮುಖಂಡರಾದ ಬಸವರಾಜ್ ರೋಟೆ, ಕಬೂತರ್, ಜಗದೀಶ್ ಚುರ್ಚುಗುಂಡಿ, ಬಸವರಾಜ್ ಪಾಟೀಲ್, ಮಂಜುನಾಥ್, ಮಲ್ಲನಗೌಡ, ಸುಭಾಷ್ ಚಂದ್ರ, ರವಿ ನಾಯಕ, ಗವಿಯಪ್ಪ, ಭಾಗ್ಯರಾಜ್, ಮಂಜು ನಾಯಕ್ ಸಹಿತ ತಾಲೂಕಿನ ವಿವಿಧ ಗ್ರಾಮಗಳ ರೈತರು, ಸಾರ್ವಜನಿಕರಿದ್ದರು.