ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕಸ್ತೂರಿ ರಂಗನ್ ವರದಿ ವಿಚಾರವನ್ನು ರಾಜಕೀಯ ಲಾಭ ನಷ್ಟದ ಲೆಕ್ಕಾಚಾರದಲ್ಲಿ ಜನರನ್ನು ಹಾದಿ ತಪ್ಪಿಸುತ್ತಿದೆ ಎಂದು ಕಸ್ತೂರಿರಂಗನ್ ವರದಿ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶದ ಪ್ರತಿಗೆ ಕಾಂಗ್ರೆಸ್ ವಕ್ತಾರರಾದ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಬೆಂಕಿ ಹಚ್ಚಿ ವಿರೋಧ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕಸ್ತೂರಿ ರಂಗನ್ ವರದಿ ವಿಚಾರವನ್ನು ರಾಜಕೀಯ ಲಾಭ ನಷ್ಟದ ಲೆಕ್ಕಾಚಾರದಲ್ಲಿ ಜನರನ್ನು ಹಾದಿ ತಪ್ಪಿಸುತ್ತಿದೆ ಎಂದು ಕಸ್ತೂರಿರಂಗನ್ ವರದಿ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶದ ಪ್ರತಿಗೆ ಕಾಂಗ್ರೆಸ್ ವಕ್ತಾರರಾದ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಬೆಂಕಿ ಹಚ್ಚಿ ವಿರೋಧ ವ್ಯಕ್ತಪಡಿಸಿದರು.ಕಸ್ತೂರಿರಂಗನ್ ವರದಿಗೆ ಸಂಬಂಧಿಸಿ ಕೇಂದ್ರ ಸರ್ಕಾರ ಹೊರಡಿಸಿರುವ ನೋಟಿಫಿಕೇಶನ್‍ನಲ್ಲಿ ರಾಜಕೀಯ ಅಜೆಂಡಾ ಇದೆ. ಹಾಗೂ ಇದನ್ನು ರದ್ದು ಮಾಡಬೇಕು ಎಂಬುದು ನಮ್ಮ ಆಗ್ರಹವಾಗಿದೆ. ರಾಜ್ಯವನ್ನು ಪ್ರತಿನಿಧಿಸುವ ಸಂಸತ್ ಸದಸ್ಯರು ಹಾಗೂ ಬಿಜೆಪಿ ಮುಖಂಡರು ಜನರ ಕಣ್ಣೊರೆಸುವ ತಂತ್ರಗಾರಿಕೆಯನ್ನು ಬಿಟ್ಟು ಕೇಂದ್ರ ಸರ್ಕಾರ ಹೊರಡಿಸಿರುವ ನೋಟಿಫಿಕೇಶನ್ ರದ್ದು ಮಾಡುವಂತೆ ಆಗ್ರಹಿಸಲಿ ಎಂದು ಸೋಮವಾರ ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಈ ದೇಶದ 30 ಕೋಟಿ ಜನರಿಗೆ ಇಂದಿಗೂ ವಸತಿ ಇಲ್ಲ. ನಿಲ್ಲುವುದಕ್ಕೆ ನೆಲೆ ಮತ್ತು ದುಡಿಯುವ ಕೈಗಳಿಗೆ ಕೆಲಸ ಕೊಡದ ಸರ್ಕಾರ ಯಾಕೆ ಬೇಕು ಎಂದೂ ಪ್ರಶ್ನಿಸಿ, ಜನರ ಜೀವನಕ್ಕೆ ಧಕ್ಕೆಯಾಗದಂತೆ ಪರಿಸರವನ್ನು ಉಳಿಸಿಕೊಳ್ಳುವ ಪ್ರಯತ್ನ ಆಗಬೇಕಿದೆ. ಕಸ್ತೂರಿರಂಗನ್ ವರದಿ ಜಾರಿ ಮಾಡಿ ಇಲ್ಲಿ ವಾಸಿಸುತ್ತಿರುವ ಜನರಿಗೆ ಪರ್ಯಾಯ ವ್ಯವಸ್ಥೆ ಏನು ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು. ಕಸ್ತೂರಿ ರಂಗನ್ ವರದಿಯನ್ನು ಇಲ್ಲಿ ವಿರೋದಿಸುವ ಬಿಜೆಪಿ ಮುಖಂಡರು ದೆಹಲಿಯಲ್ಲಿ ಪ್ರದಾನಿ ಎದುರು ಬಾಯ್ಮುಚ್ಚಿ ಕೂರುವ ಬದಲು ಪ್ರದಾನಿ ಮತ್ತು ಕೇಂದ್ರ ಅರಣ್ಯ ಸಚಿವರ ಮೇಲೆ ಒತ್ತಡ ತರಬೇಕು ಎಂದು ಆಗ್ರಹಿಸಿದರು.ಶಾಸಕ ಆರಗ ಜ್ಞಾನೇಂದ್ರ ಕಡೇಮನೆ ಗ್ರಾಮದ ಹೆಸರಿನಲ್ಲಿ 2.50 ಕೋಟಿ ರು. ವೆಚ್ಚದ ರಸ್ತೆಯನ್ನು ಭಿಂತಳದಲ್ಲಿರುವ ತಮ್ಮ ಜಮೀನಿನವರೆಗೆ ಮಾಡಿಕೊಂಡಿದ್ದಾರೆ. ಕಸ್ತೂರಿರಂಗನ್ ವರದಿಯನ್ನು ವಿರೋದಿಸಿ ಸೆ. 7ರಂದು ಭಿಂತಳ ಗ್ರಾಮದಿಂದಲೇ ತೀರ್ಥಹಳ್ಳಿಯವರೆಗೆ ಪಾದಯಾತ್ರೆ ನಡೆಸುತ್ತೇವೆ. ಇದಕ್ಕೆ ಕೆಪಿಸಿಸಿ ಪ್ರಚಾರ ಸಮಿತಿ ಸಹಯೋಗವೂ ಇದ್ದು, ರಾಜ್ಯ ಮುಖಂಡರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ನ.16ರಿಂದ ತೀರ್ಥಹಳ್ಳಿಯಿಂದ ಶಿವಮೊಗ್ಗದವರೆಗೆ ಪಾದಯಾತ್ರೆ ನಡೆಸುತ್ತೇವೆ ಎಂದು ಹೇಳಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಭಾಷಣ ಮಾಡಿದ ಜಾಗವನ್ನು ಬಿಜೆಪಿ ಕಾರ್ಯಕರ್ತರು ಶುದ್ದೀಕರಿಸಿರುವ ಘಟನೆ ಇಡೀ ದಲಿತ ಸಮುದಾಯಕ್ಕೇ ಮಾಡಿದ ಅವಮಾನವಾಗಿದ್ದು ಖಂಡನೀಯವಾಗಿದೆ. ಈ ಬಗ್ಗೆ ಪ್ರಧಾನಿ ಸೇರಿದಂತೆ ಯಾವೊಬ್ಬ ಬಿಜೆಪಿ ಮುಖಂಡರೂ ಮಾತನಾಡದಿರುವುದು ದಲಿತರ ಬಗ್ಗೆ ಬಿಜೆಪಿ ಪಕ್ಷಕ್ಕಿರುವ ಮನಃಸ್ಥಿತಿಯಾಗಿದೆ. ಈ ಘಟನೆಯನ್ನು ಖಂಡಿಸಿ ಉಪವಾಸ ಸತ್ಯಾಗ್ರಹ ಹೂಡುವುದಾಗಿಯೂ ತಿಳಿಸಿದರು.