ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಕೊಡಗಿನ ಗೌರಮ್ಮ ಸಣ್ಣ ಕಥೆಗಳ ದತ್ತಿ ಕಾರ್ಯಕ್ರಮದಂತೆ ಕೊಡಗು ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕಥೆ ಬರೆಯುವ ಸ್ಪರ್ಧೆ ಕಾರ್ಯಕ್ರಮ

ನಾಪೋಕ್ಲು: ಮಕ್ಕಳಲ್ಲಿ ಸೃಜನಶೀಲತೆ ಸಮಾಜಮುಖಿ ಚಿಂತನೆ ಬೆಳೆಯಲು ಕಥಾ ಸ್ಪರ್ಧೆಯಂತಹ ಕಾರ್ಯಕ್ರಮಗಳು ಅನುಕೂಲವಾಗಲಿದೆ ಎಂದು ಮಡಿಕೇರಿಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ. ವೇಣುಗೋಪಾಲ್ ನುಡಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಕೊಡಗಿನ ಗೌರಮ್ಮ ಸಣ್ಣ ಕಥೆಗಳ ದತ್ತಿ ಕಾರ್ಯಕ್ರಮದಂತೆ ಕೊಡಗು ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕಥೆ ಬರೆಯುವ ಸ್ಪರ್ಧೆ ಕಾರ್ಯಕ್ರಮವನ್ನು ಮಡಿಕೇರಿಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ ಕೇಶವ ಕಾಮತ್, ಕೊಡಗಿನ ಗೌರಮ್ಮ ಅವರ ಪುತ್ರ ವಸಂತ ಅವರು ತಮ್ಮ ತಾಯಿಯ ನೆನಪಿಗೋಸ್ಕರ ಸ್ಥಾಪಿಸಿರುವ ಸಣ್ಣ ಕಥೆಗಳ ಗೌರಮ್ಮ ಕಥಾ ಸ್ಪರ್ಧೆಯಲ್ಲಿ ಕೊಡಗು ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ತಮ್ಮಲ್ಲಿರುವ ಪ್ರತಿಭೆಯನ್ನು ಬೆಳೆಸಿಕೊಳ್ಳಲು ಅನುಕೂಲ ಎಂದರು.ಕಥೆ ಬರೆಯುವ ಕೌಶಲ್ಯದ ಕುರಿತು ಅಧ್ಯಾಪಕಿ ಕೆ.ಎಂ ಸುಮಯ್ಯ ಉಪನ್ಯಾಸ ನೀಡಿದರು.

ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಕನ್ನಡ ಉಪನ್ಯಾಸಕ ಉದಯ್ ಕುಮಾರ್ ಮಾತನಾಡಿದರು.

ಮಡಿಕೇರಿಯ ಲೆಕ್ಕಪರಿಶೋಧಕರಾದ ಎ ಅನಂತ ಸುಬ್ರಾಯ ಅವರು ತಮ್ಮ ಪತ್ನಿ ದಿ. ಎ ಎಸ್ ನಳಿನಿ ರಾವ್ ಅವರ ಹೆಸರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಒಂದು ಲಕ್ಷ ರು. ಗಳ ದತ್ತಿ ಸ್ಥಾಪಿಸಿದ್ದು ಜಿಲ್ಲಾ‌ ಗೌರವ ಕೋಶಾಧಿಕಾರಿ ಎಸ್ ಎಸ್ ಸಂಪತ್ ಕುಮಾರ್ ರವರ ಮುಖಾಂತರ ಜಿಲ್ಲಾಧ್ಯಕ್ಷರಿಗೆ ಚೆಕ್‌ ನೀಡಿದರು.ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಡ್ಲೇರ ತುಳಸಿ ಮೋಹನ್, ಗೌರವ ಕಾರ್ಯದರ್ಶಿ ಗುಡ್ಡೇರ ಲಕ್ಸು ಸೋಮಣ್ಣ ಇದ್ದರು. ಸ್ಪರ್ಧೆಯ ಬಹುಮಾನವನ್ನು ಮುಂದಿನ ದಿನಗಳಲ್ಲಿ ನಡೆಯುವ ಕೊಡಗಿನ ಗೌರಮ್ಮ ದತ್ತಿ‌ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ನೀಡಲಾಗುವುದು ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ನುಡಿದರು. ಅವರು ಕಾರ್ಯಕ್ರಮವನ್ನು ನಿರೂಪಿಸಿ ಸ್ವಾಗತಿಸಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ

ಗೌರವಕೋಶಾಧಿಕಾರಿ ಎಸ್.ಎಸ್ ಸಂಪತ್ ಕುಮಾರ್ ವಂದಿಸಿದರು.