ಸಾರಾಂಶ
ಹುಬ್ಬಳ್ಳಿಯ ರೈಲ್ವೆ ಗ್ರೌಂಡ್‌ನಲ್ಲಿ ಶನಿವಾರ ಸಂಜೆ ನಡೆದ ವರ್ಣರಂಜಿತ ಸಮಾರಂಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕ ನಟನಾಗಿ, ಅಭಿನಯಿಸಿದ ಕಾಟೇರ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಹುಬ್ಬಳ್ಳಿಯ ರೈಲ್ವೆ ಗ್ರೌಂಡ್‌ನಲ್ಲಿ ಶನಿವಾರ ಸಂಜೆ ನಡೆದ ವರ್ಣರಂಜಿತ ಸಮಾರಂಭದಲ್ಲಿ ಅಭಿಮಾನಿಗಳ ಸಂಭ್ರಮದ ನಡುವೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕ ನಟನಾಗಿ, ಮಾಲಾಶ್ರೀ ಪುತ್ರಿ ಆರಾಧನಾರಾಮ್ ನಟಿಯಾಗಿ ಅಭಿನಯಿಸಿದ ಕಾಟೇರ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಯಿತು.ರಾಕ್‌ಲೈನ್ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ನಲ್ಲಿ ನಿರ್ಮಿಸಿರುವ ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ, ತರುಣ್ ಕಿಶೋರ್ ಸುಧೀರ್ ನಿರ್ದೇಶನದ ಹಾಗೂ ನಟ ದರ್ಶನ ಅಭಿಯನದ ಕಾಟೇರ ಚಿತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಲ್ ದಿ ಬೆಸ್ಟ್ ಹೇಳುವ ಮೂಲಕ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದರು. ನಟ ದರ್ಶನ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ, ನಟಿ ಮಾಲಾಶ್ರೀ, ಶಾಸಕರಾದ ಪ್ರಸಾದ ಅಬ್ಬಯ್ಯ, ಎನ್.ಎಚ್. ಕೋನರಡ್ಡಿ ಸೇರಿದಂತೆ ಅನೇಕರು ಸಿಎಂ ಸಿದ್ದರಾಮಯ್ಯ ಅವರಿಗೆ ಸಾಥ್ ನೀಡಿದರು.
ಟ್ರೇಲರ್ ಬಿಡುಗಡೆಗೆ ಸಮಾರಂಭದಲ್ಲಿ ಭಾಗವಹಿಸಿದ್ದ ಸಾವಿರಾರು ಅಭಿಮಾನಿಗಳು ಟ್ರೇಲರ್ ಬಿಡುಗಡೆ ಆಗುತ್ತಿದ್ದಂತೆ ಕೇಕೆ, ಶಿಳ್ಳೆ ಹಾಕಿದರಲ್ಲದೇ, ದರ್ಶನ್ ಆಗಮಿಸುತ್ತಿದ್ದಂತೆ ಮೊಬೈಲ್ ಟಾರ್ಚ್ ಬೆಳಗಿ ಸಂಭ್ರಮಿಸಿದರು.ತರುಣ್ ಕಿಶೋರ್ ಸುಧೀರ್, ಅಭಿಷೇಕ್ ಅಂಬರೀಶ್, ಧನವೀರ್, ಚಿಕ್ಕಣ್ಣ , ಅವಿನಾಶ್, ವಿನೋದ್ ಆಳ್ವ, ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಸೇರಿದಂತೆ ಅನೇಕ ನಟ, ನಟಿಯರು ಭಾಗವಹಿಸಿದ್ದರು.
ಇದಕ್ಕೂ ಮುನ್ನ ಸಂಜೆ ಐದು ಗಂಟೆಯಿಂದ ಜಗಮಗಿಸುವ ದೀಪಗಳ ವೇದಿಕೆಯಲ್ಲಿ ಸಹ ಕಲಾವಿದರಿಂದ ದರ್ಶನ ಅಭಿನಯದ ಚಲನ ಚಿತ್ರಗಳ ಹಾಡು, ಡಾನ್ಸ್ , ಹರಿಕೃಷ್ಣ ಅವರ ಸಂಗೀತ, ಅನುಶ್ರೀ ಅವರ ನಿರೂಪಣೆ ಸೇರಿದ ಜನಸ್ತೋಮವನ್ನು ಮನರಂಜನಾ ಲೋಕದಲ್ಲಿ ತೇಲುವಂತೆ ಮಾಡಿತು.