ಕಟೀಲು ಏಳು ಮೇಳಗಳ ದೇವರು, ಪರಿಕರಗಳ ಮೆರವಣಿಗೆ

| Published : Nov 16 2025, 03:00 AM IST

ಸಾರಾಂಶ

ಸಂಜೆ ಬಜಪೆ ಶಾರದಾ ಮಂಟಪದಿಂದ ಸ್ತಬ್ಧಚಿತ್ರಗಳಲ್ಲಿ ಕಟೀಲು ಏಳೂ ಮೇಳಗಳ ದೇವರು ಹಾಗೂ ಪರಿಕರಗಳ ಮೆರವಣಿಗೆಗೆ ಚಾಲನೆ ದೊರೆಯಿತು. ಬಳಿಕ ಎಕ್ಕಾರಿನಿಂದ ಕಾಲ್ನಡಿಗೆಯಲ್ಲಿ ಶ್ರೀ ಕ್ಷೇತ್ರಕ್ಕೆ ಆಗಮಿಸಲಾಯಿತು. ಮೆರವಣಿಗೆ ಸಾಗುವ ರಸ್ತೆಯುದ್ದಕ್ಕೂ ಅಲಂಕಾರ ಮಾಡಿದ್ದು, ಕಟೀಲಿನಿಂದ ಬಜಪೆಗೆ ಮೆರವಣಿಗೆಯಲ್ಲಿ 16 ಭಜನಾ ತಂಡಗಳು, 8 ಟ್ಯಾಬ್ಲೊಗಳು, 30 ಕೊಂಬು, ಕೀಲು ಕುದುರೆ, ಬೇತಾಳ, ಹುಲಿ ವೇಷಗಳು ಭಾಗವಹಿಸಿತ್ತು.

ಭಜನಾ ತಂಡ, ಟ್ಯಾಬ್ಲೋಗಳು ಭಾಗಿ । ಇಂದು ಏಳನೇ ಮೇಳ ಉದ್ಘಾಟನೆಕನ್ನಡಪ್ರಭ ವಾರ್ತೆ ಮೂಲ್ಕಿ

ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಏಳು ಮೇಳಗಳ ಪರಿಕರಗಳ ಮೆರವಣಿಗೆಯು ಶನಿವಾರ ಬಜ್ಪೆಯಿಂದ ಹೊರಟು ಶ್ರೀ ಕ್ಷೇತ್ರ ಕಟೀಲಿಗೆ ಆಗಮಿಸಿತು.

ಸಂಜೆ ಬಜಪೆ ಶಾರದಾ ಮಂಟಪದಿಂದ ಸ್ತಬ್ಧಚಿತ್ರಗಳಲ್ಲಿ ಕಟೀಲು ಏಳೂ ಮೇಳಗಳ ದೇವರು ಹಾಗೂ ಪರಿಕರಗಳ ಮೆರವಣಿಗೆಗೆ ಚಾಲನೆ ದೊರೆಯಿತು. ಬಳಿಕ ಎಕ್ಕಾರಿನಿಂದ ಕಾಲ್ನಡಿಗೆಯಲ್ಲಿ ಶ್ರೀ ಕ್ಷೇತ್ರಕ್ಕೆ ಆಗಮಿಸಲಾಯಿತು. ಮೆರವಣಿಗೆ ಸಾಗುವ ರಸ್ತೆಯುದ್ದಕ್ಕೂ ಅಲಂಕಾರ ಮಾಡಿದ್ದು, ಕಟೀಲಿನಿಂದ ಬಜಪೆಗೆ ಮೆರವಣಿಗೆಯಲ್ಲಿ 16 ಭಜನಾ ತಂಡಗಳು, 8 ಟ್ಯಾಬ್ಲೊಗಳು, 30 ಕೊಂಬು, ಕೀಲು ಕುದುರೆ, ಬೇತಾಳ, ಹುಲಿ ವೇಷಗಳು ಭಾಗವಹಿಸಿತ್ತು.

ಭಾನುವಾರ ಬೆಳಗ್ಗೆ 10.30ಕ್ಕೆ ಪೂಜಾ ಕಿರೀಟಗಳ ಸ್ಥಾಪನೆ, ಆವಾಹನೆ, ಸಂಜೆ ತಾಳಮದ್ದಲೆ, ಗೆಜ್ಜೆ ಕಟ್ಟುವುದು, ಮೇಳಗಳ ಆರಂಭದ ವಿಧಿವಿಧಾನಗಳು ನಡೆದು ಸಂಜೆ 6ಕ್ಕೆ ಏಳನೆಯ ಮೇಳದ ಉದ್ಘಾಟಗೊಳ್ಳಲಿದೆ. ರಾಜ್ಯ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಉದ್ಘಾಟಿಸುವರು. ಫಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಅಧ್ಯಕ್ಷತೆ ವಹಿಸಲಿದ್ದಾರೆ. ಮೇಳಗಳ ತಿರುಗಾಟಕ್ಕೆ ಚಾಲನೆಯನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನೀಡಲಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರಾದ ಉಮಾನಾಥ ಎ. ಕೋಟ್ಯಾನ್, ಡಿ. ವೇದವ್ಯಾಸ ಕಾಮತ್, ಡಾ.ಭರತ್ ಶೆಟ್ಟಿ ವೈ., ರಾಜೇಶ್ ನಾಯ್ಕ್‌, ವಿಧಾನ ಪರಿಷತ್‌ ಸದಸ್ಯರಾದ ಮಂಜುನಾಥ ಭಂಡಾರಿ, ಕಿಶೋರ್‌ಕುಮಾ‌ರ್, ಎಸ್.ಎಲ್. ಭೋಜೇ ಗೌಡ, ಐವನ್ ಡಿಸೋಜ, ದ.ಕ.ಜಿಲ್ಲಾಧಿಕಾರಿ ಎಚ್. ದರ್ಶನ್, ಮಾಜಿ ಸಚಿವರಾದ ಬಿ. ರಮಾನಾಥ ರೈ, ಕೆ. ಅಭಯಚಂದ್ರ ಜೈನ್, ಮಾಜಿ ಸಂಸದ ನಳಿನ್‌ಕುಮಾರ್ ಕಟೀಲು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ರಾಜ್ಯ ಉಚ್ಚ ನ್ಯಾಯಾಲಯದ ಡೆಸಿಗ್ರೇಟೆಡ್ ಸೀನಿಯರ್ ಅಡ್ವಕೇಟ್‌ ಪಿ.ಎಸ್. ರಾಜಗೋಪಾಲ್, ಕಟೀಲು ಕ್ಷೇತ್ರದ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಅನುವಂಶಿಕ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಕಮಲಾದೇವೀಪ್ರಸಾದ ಆಸ್ರಣ್ಣ, ಶ್ರೀಹರಿನಾರಾಯಣದಾಸ ಆಸ್ರಣ್ಣ, ಆಡಳಿತ ಸಮಿತಿ ಅಧ್ಯಕ್ಷ ಹಾಗೂ ಅನುವಂಶಿಕ ಮೊಕ್ತೇಸರ ಸನತ್‌ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು ಮುಖ್ಯ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ.

ಕಿಶೋರ್ ಶೆಟ್ಟಿ ಕೊಡೆತ್ತೂರುಗುತ್ತು, ಪ್ರವೀಣದಾಸ್ ಭಂಡಾರಿ, ಕೊಡೆತ್ತೂರುಗುತ್ತು, ಬಿಪಿನ್‌ಚಂದ್ರ ಶೆಟ್ಟಿ ಕೊಡೆತ್ತೂರುಗುತ್ತು, ತಿಬಾರ ಗುತ್ತಿನಾರ್ ಉಮೇಶ್ ಎನ್. ಶೆಟ್ಟಿ, ಕಟೀಲು ಯಕ್ಷಗಾನ ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ ಶೆಟ್ಟಿ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.

ತಿರುಗಾಟ ಆರಂಭೋತ್ಸವ: ರಾತ್ರಿ 8.30ಕ್ಕೆ 7 ಮೇಳಗಳ ದೇವರ ಪೂಜೆ ನಡೆದು ಕಟೀಲು ರಥ ಬೀದಿಯಲ್ಲಿ ಒಂದೇ ವೇದಿಕೆಯಲ್ಲಿ 7 ರಂಗಸ್ಥಳಗಳಲ್ಲಿ ‘ಪಾಂಡವಾಶ್ವಮೇಧ’ ಯಕ್ಷಗಾನ ಬಯಲಾಟದ ಮೂಲಕ ನಡೆಯಲಿದೆ.