ಕಟ್ಟಹಳ್ಳಿ ಏತ ಯೋಜನೆ ಮಾಜಿ ಎಚ್ಡಿಕೆಯ ಕನಸಿನ ಕೂಸು: ಶಾಸಕ

| Published : Feb 10 2024, 01:48 AM IST

ಕಟ್ಟಹಳ್ಳಿ ಏತ ಯೋಜನೆ ಮಾಜಿ ಎಚ್ಡಿಕೆಯ ಕನಸಿನ ಕೂಸು: ಶಾಸಕ
Share this Article
  • FB
  • TW
  • Linkdin
  • Email

ಸಾರಾಂಶ

ಎಚ್ಡಿಕೆ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ 2800 ಕೋಟಿ ರು.ಗಳ ಯೋಜನೆ ಸಿದ್ದಪಡಿಸಿ ಅನುದಾನ ನೀಡಿದ್ದರು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತಾಲೂಕಿನ ಕಟ್ಟಹಳ್ಳಿ (ಐಚನಹಳ್ಳಿ) ಏತ ನೀರಾವರಿ ಯೋಜನೆಯು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಯವರ ಕನಸಿನ ಕೂಸಾಗಿದೆ. ಎಚ್ ಡಿಕೆ ಮುಖ್ಯಮಂತ್ರಿಯಾಗಿದ್ದಾಗಲೇ ಈ ಯೋಜನೆಗೆ ಅಗತ್ಯ ಹಣಕಾಸು ಮಂಜೂರು ಮಾಡಿದ್ದರು ಎಂದು ಶಾಸಕ ಎಚ್.ಟಿ.ಮಂಜು ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಶಾಸಕರು, ಎಚ್ಡಿಕೆ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ 2800 ಕೋಟಿ ರು.ಗಳ ಯೋಜನೆ ಸಿದ್ದಪಡಿಸಿ ಅನುದಾನ ನೀಡಿದ್ದರು. ಕುಮಾರಸ್ವಾಮಿ ಸರ್ಕಾರವನ್ನು ಕೆಳಗಿಸಿದ ನಂತರ ಅಧಿಕಾರಕ್ಕೆ ಬಂದ ಸರ್ಕಾರ ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಎಲ್ಲಾ 2800 ಕೋಟಿ ರು. ಅನುದಾನವನ್ನೂ ಹಿಂಪಡೆಯಿತು ಎಂದಿದ್ದಾರೆ.

ಜಲಧಾರೆ ಯೋಜನೆಯಡಿ ಕಟ್ಟಹಳ್ಳಿ ಏತ ನೀರಾವರಿ ಯೋಜನೆಯನ್ನು ಎಚ್.ಡಿ.ಕುಮಾರಸ್ವಾಮಿ ಮಂಜೂರು ಮಾಡಿದ್ದರು. ಅನಂತರ ಬಂದ ಸರ್ಕಾರ ಕಟ್ಟಹಳ್ಳಿ ಹೆಸರಿನ ಬದಲು ಐಚನಹಳ್ಳಿ ಏತ ನೀರಾವರಿ ಯೋಜನೆ ಎಂದು ಹೆಸರು ಬದಲಿಸಿ ಅನುಷ್ಠಾನಗೊಳಿಸಿತು ಎಂದು ಹೇಳಿದ್ದಾರೆ.

ಕಟ್ಟಹಳ್ಳಿ ಏತ ನೀರಾವರಿ ಯೋಜನೆ ಮೊದಲ ಹಂತದ ಕಾಮಗಾರಿ ಮುಗಿದಿದೆ. 2ನೇ ಹಂತದ ಕಾಮಗಾರಿಯಲ್ಲಿ ಶೀಳನೆರೆ ಹೋಬಳಿಯ ಉಳಿದ 43 ಕೆರೆಗಳನ್ನು ತುಂಬಿಸುವ ಕೆಲಸವಾಗಬೇಕಿದೆ. ಇದಕ್ಕೆ 100 ಕೋಟಿ ರು. ಅನುದಾನದ ಅಗತ್ಯವಿದ್ದು, ಅದನ್ನು ಕಾರ್ಯಗತಗೊಳಿಸಲು ಸರ್ಕಾರದ ಮೇಲೆ ಅಗತ್ಯ ಒತ್ತಡ ಹಾಕಿದ್ದೇನೆ ಎಂದು ತಿಳಿಸಿದ್ದಾರೆ.

ಜೆಡಿಎಸ್ ಶಾಸಕರಾಗಿದ್ದ ಮಾಜಿ ಸಚಿವ ಕೆ.ಸಿ.ನಾರಾಯಣಗೌಡರೇ ಹತ್ತಾರು ವೇದಿಕೆಗಳಲ್ಲಿ ಕುಮಾರಣ್ಣ ಕ್ಷೇತ್ರದ ಅಭಿವೃದ್ಧಿಗೆ 1800 ಕೋಟಿ ರು. ಅನುದಾನ ನೀಡಿರುವುದಾಗಿ ಬಹಿರಂಗವಾಗಿಯೇ ತಿಳಿಸಿದ್ದಾರೆ. ಕ್ಷೇತ್ರದ ಪ್ರತಿಯೊಂದು ಪ್ರಮುಖ ಅಭಿವೃದ್ಧಿ ಕಾರ್ಯಗಳಲ್ಲಿಯೂ ಜೆಡಿಎಸ್ ನಾಯಕರ ಪರಿಶ್ರಮವಿದೆ. ಒಂದು ಸರ್ಕಾರದಲ್ಲಿ ಮಂಜೂರಾತಿಯಾದ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತೊಂದು ಸರ್ಕಾರದ ಅವಧಿಯಲ್ಲಿ ಲೋಕಾರ್ಪಣೆಗೊಳ್ಳುವುದು ಸಹಜ ಎಂದಿದ್ದಾರೆ.

ಮೊದಲ ಹಂತದ ಕಾಮಗಾರಿ ಮುಗಿದಿದ್ದರೂ ಅಗತ್ಯ ವಿದ್ಯುತ್ ಸಂಪರ್ಕದ ಕೊರತೆಯಿಂದ ಲೋಕಾರ್ಪಣೆಗೊಂಡಿರಲಿಲ್ಲ. ಶಾಸಕನಾಗಿ ಇದು ನನ್ನ ಗಮನಕ್ಕೆ ಬಂದ ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸುವ ಕೆಲಸ ಮಾಡಿದ್ದೇನೆ. 2ನೇ ಹಂತದ ಕಾಮಗಾರಿ, ಗೂಡೇ ಹೊಸಹಳ್ಳಿ ಏತ ನೀರಾವರಿ ಯೋಜನೆ ಸೇರಿ ತಾಲೂಕಿನ ಸಮಗ್ರ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಸಂಬಂಧಿಸಿದ ಇಲಾಖಾ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರೊಂದಿಗೆ ಚರ್ಚಿಸಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.

ಅಭಿವೃದ್ಧಿಯಲ್ಲಿ ಯಾವುದೇ ರಾಜಕೀಯ ಇಲ್ಲ. ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಗೊಳ್ಳುವ ಮುನ್ನವೇ ಯೋಜನೆ ಮೊದಲ ಹಂತದ ಕಾಮಗಾರಿ ಲೋಕಾರ್ಪಣೆಗೊಳ್ಳುತ್ತಿದೆ. ಇದರಿಂದ ಬೇಸಿಗೆ ದಿನಗಳಲ್ಲಿ ಹೇಮೆ ನೀರಿನಿಂದ 50 ಕೆರೆಗಳು ತುಂಬುವುದರಿಂದ ಈ ಭಾಗದ ರೈತ ಸಮುದಾಯ, ಜನ -ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿದು ಅಂತರ್ಜಲ ಮಟ್ಟ ಹೆಚ್ಚಳ ಸೇರಿ ಅನೇಕ ಅನುಕೂಲಗಳು ಆಗಲಿವೆ ಎಂದು ಶಾಸಕರು ಹೇಳಿದ್ದಾರೆ.

ಫೆ.11 ರಂದು ಯೋಜನೆ ಲೋಕಾರ್ಪಣೆ

ಫೆ.11 ರಂದು ಯೋಜನೆಯ ಲೋಕಾರ್ಪಣೆ ಸಮಾರಂಭ ನಡೆಯಲಿದೆ. ತಾವು ಅಧ್ಯಕ್ಷತೆ ವಹಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು, ಚಾಮುಂಡೇಶ್ವರಿ ವಿದ್ಯುತ್ ನಿಗಮದ ಅಧ್ಯಕ್ಷ ಶಾಸಕ ರಮೇಶ್ ಬಂಡಿಸಿದ್ದೇಗೌಡ ಸೇರಿ ಜಿಲ್ಲೆಯ ಹಲವು ಶಾಸಕರು ಹಾಗೂ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.