ಸಾರಾಂಶ
ಕನ್ನಡಪ್ರಭ ವಾರ್ತೆ ಹುಣಸೂರು
ತಂಬಾಕಿಗೆ ನ್ಯಾಯಯುತ ಬೆಲೆ ದೊರಕಿಸಿಕೊಡುವ ನಿಟ್ಟಿನಲ್ಲಿ ತಿಂಗಳ ಹಿಂದೆ ತಂಬಾಕು ಬೆಳೆಗಾರರ ನಿಯೋಗದೊಂದಿಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಕೇಂದ್ರದ ವಾಣಿಜ್ಯ ಮಂತ್ರಿ ಪಿಯೂಷ್ ಗೋಯಲ್ ರೊಂದಿಗೆ ನಡೆಸಿದ ಮಾತುಕತೆ ಫಲ ನೀಡಿದೆ ಎಂದು ಶಾಸಕ ಜಿ.ಡಿ. ಹರೀಶ್ ಗೌಡ ತಿಳಿಸಿದರು.ತಾಲೂಕಿನ ಕಟ್ಟೆಮಳಲವಾಡಿಯ ಡಿ. ದೇವರಾಜ ಅರಸು ತಂಬಾಕು ಹರಾಜು ಮಾರುಕಟ್ಟೆಯ ಪ್ಲಾಟ್ ಫಾರಂ 2, 3 ಮತ್ತು 34 ಪ್ಲಾಟ್ ಫಾರಂಗಳಿಗೆ ಮಂಗಳವಾರ ಭೇಟಿ ನೀಡಿ ಮಾತನಾಡಿದ ಅವರು, ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡುವ ಮುನ್ನ ಬೆಂಗಳೂರಿನಲ್ಲಿ ಎಚ್.ಡಿ. ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಮಾಡಿ ಸಮಸ್ಯೆ ಬಗ್ಗೆ ಚರ್ಚಿಸಿದ್ದೇವು ಎಂದರು.
ನಂತರ ವಾಣಿಜ್ಯ ಸಚಿವರೊಂದಿಗೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಸಮ್ಮುಖದಲ್ಲಿ ಆಯೋಜನೆಗೊಂಡ ಸಭೆಯಲ್ಲಿ ಒಂದೂವರೆ ತಾಸು ತಂಬಾಕು ಬೆಳೆವ ರೈತರಿಂದ ಮಾಹಿತಿಯನ್ನು ಸಚಿವರಿಗೆ ನೀಡಲಾಯಿತು. ಅದರ ಪರಿಣಾಮವಾಗಿ ಮಾರುಕಟ್ಟೆಯಲ್ಲಿ ಎನ್‌ಒಜಿ (ನೋ ಗ್ರೇಡ್) ತಂಬಾಕು ಖರೀದಿಸುವುದಿಲ್ಲ ಎನ್ನುತ್ತಿದ್ದ ಖರೀದಿದಾರರು ಇದೀಗ ಕೆ.ಜಿ.ಗೆ 220 ರಿಂದ 230 ರೂಪಾಯಿಗಳಿಗೆ ಖರೀದಿಸುತ್ತಿದ್ದಾರೆ. ಅಲ್ಲದೆ, ಉತ್ತಮ ಗುಣಮಟ್ಟದ(ಮೊದಲ ಗ್ರೇಡ್) ಹೊಗೆಸೊಪ್ಪಿಗೆ ಕೆ.ಜಿ.ಗೆ 308 ರೂ. ಗರಿಷ್ಠ ದರ ದೊರಕುತ್ತಿದೆ ಎಂದು ಅವರು ಹೇಳಿದರು.ವಿಶ್ವಾದ್ಯಂತ ಈ ಬಾರಿ (ಜಿಂಬಾಬ್ವೆ, ತಾಂಜಾನಿಯ, ಬ್ರೆಜಿಲ್) ಹೆಚ್ಚಿನ ಪ್ರಮಾಣದ ಹೊಗೆಸೊಪ್ಪು ಉತ್ಪಾದನೆಯಾಗಿದ್ದು, ಸೂಕ್ತ ದರ ದೊರಕುವುದಿಲ್ಲವೆನ್ನುವ ಆತಂಕ ರೈತರಲ್ಲಿ ಸೃಷ್ಟಿಯಾಗಿತ್ತು. ಆದರೆ, ಎಚ್.ಡಿ. ಕುಮಾರಸ್ವಾಮಿಯವರ ಪ್ರಯತ್ನದ ರೈತ ನಿಯೋಗದ ದೆಹಲಿ ಭೇಟಿಯ ಫಲಶೃತಿ ಕಾಣುತ್ತಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಇದೀಗ ರೈತರು ಬಿಪಿಎಲ್ (ಬ್ಲಾಕ್ ಪೆರಿಷ್ಡ್ ಲೀಫ್) ಸೊಪ್ಪನ್ನು ಕಂಪನಿಗಳು ಖರೀದಿಸುತ್ತಿಲ್ಲವೆಂದು ಹೇಳುತ್ತಿದ್ದಾರೆ. ಈ ಕುರಿತು ಇದೀಗ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಒಂದು ವಾರ ಕಾಲದ ಕಾಲವಕಾಶವನ್ನು ಅಧಿಕಾರಿಗಳು ಕೋರಿದ್ದು, ತದನಂತರ ಅದನ್ನೂ ಖರೀದಿಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ರೈತರ ಯಾವುದೇ ಸೊಪ್ಪನ್ನು ಉಳಿಸದೇ ಸಂಪೂರ್ಣವಾಗಿ ಖರೀದಿಸುತ್ತೇವುದಾಗಿ ತಿಳಿಸಿದ್ದಾರೆ ಎಂದರು.ಪ್ರತಿವರ್ಷ ರೈತರಿಗೆ ಇದೇ ತೆರನಾದ ಸಮಸ್ಯೆಗಳು ಎದುರಾಗುತ್ತಲೇ ಇದೆ. ರೈತರ ಇಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವುದು ನನ್ನ ಗುರಿಯಾಗಿದ್ದು, ಈ ನಿಟ್ಟಿನಲ್ಲಿ ಮುಂದಿನ ವರ್ಷ ಮಾರುಕಟ್ಟೆ ಆರಂಭಕ್ಕೂ ಮುನ್ನವೇ ಕೇಂದ್ರ ಸಚಿವರನ್ನು ಇಲ್ಲಿಗೆ ಕರೆ ತಂದು ರೈತರು, ಅಧಿಕಾರಿಗಳು ಮತ್ತು ಖರೀದಿ ಕಂಪನಿಗಳ ಸಮ್ಮುಖದಲ್ಲಿ ಸಭೆ ನಡೆಸಿ, ದರವನ್ನು ನಿಗದಿ ಪಡಿಸಲು ನಿರ್ಧರಿಸಿದ್ದು, ಈ ಕುರಿತು ಈಗಗಲೇ ಕುಮಾರಸ್ವಾಮಿ ತಮ್ಮ ಸಮ್ಮತಿ ಸೂಚಿಸಿ, ಕೇಂದ್ರ ವಾಣಿಜ್ಯ ಸಚಿವರನ್ನು ಕರೆತರುವುದಾಗಿ ಭರವಸೆ ನೀಡಿದ್ದಾರೆ ಎಂದರು.
ತಂಬಾಕು ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಉಂಡುವಾಡಿ ಸಿ. ಚಂದ್ರೇಗೌಡ, ಅಧ್ಯಕ್ಷ ಮೋದೂರು ಶಿವಣ್ಣ, ನಿಲುವಾಗಿಲು ಪ್ರಭಾಕರ್, ಮುಖಂಡರಾದ ತಟ್ಟೆಕೆರೆ ಶ್ರೀನಿವಾಸ್, ಅಗ್ರಹಾರ ನಂಜುಂಡೇಗೌಡ, ರೈತ ಸಂಘದ ಪ್ರಧಾನ ಕಾರ್ಯದರ್ಶಿ ಅಗ್ರಹಾರ ರಾಮೇಗೌಡ, ಹಿರೀಕ್ಯಾತನಹಳ್ಳಿ ಪುಟ್ಟರಾಜು, ಕೂಸಪ್ಪ, ಕಟ್ಟೆಮಳಲವಾಡಿ ದೇವರಾಜ್, ಪುಟ್ಟರಾಜು, ಆಂಜನೇಯ, ಹರಾಜು ಅದೀಕ್ಷಕರಾದ ಬ್ರಿಜ್ ಭೂಷಣ್, ಮೀನಾ, ಸಿದ್ದರಾಜು ಮೊದಲಾದವರು ಇದ್ದರು.