ಕೊಡಗಿನ ಜೀವನದಿ ಕಾವೇರಿ ಇದೀಗ ‘ಬಯಲು ಶೌಚಾಲಯ’!

| Published : Feb 10 2024, 01:48 AM IST / Updated: Feb 10 2024, 03:51 PM IST

ಸಾರಾಂಶ

ಪ್ರವಾಸೋದ್ಯಮ ಬೆಳವಣಿಗೆ ನಡುವೆ ಮೂಲಭೂತ ವ್ಯವಸ್ಥೆಗಳ ಕೊರತೆಯಿಂದ ಜೀವನದಿ ಕಾವೇರಿ ಇದೀಗ ಬಯಲು ಶೌಚಾಲಯ ತಾಣವಾಗಿ ಪರಿವರ್ತನೆಗೊಳ್ಳುತ್ತಿದೆ.

ಕೀರ್ತನಕನ್ನಡಪ್ರಭ ವಾರ್ತೆ ಕುಶಾಲನಗರ

ಪ್ರವಾಸೋದ್ಯಮ ಬೆಳವಣಿಗೆ ನಡುವೆ ಮೂಲಭೂತ ವ್ಯವಸ್ಥೆಗಳ ಕೊರತೆಯಿಂದ ಜೀವನದಿ ಕಾವೇರಿ ಇದೀಗ ಬಯಲು ಶೌಚಾಲಯ ತಾಣವಾಗಿ ಪರಿವರ್ತನೆಗೊಳ್ಳುತ್ತಿದೆ.

ಸ್ವಚ್ಛ ಕಾವೇರಿಗಾಗಿ ಕಳೆದ ಹಲವಾರು ವರ್ಷಗಳಿಂದ ವಿವಿಧ ಹಂತಗಳಲ್ಲಿ ಜನರಿಗೆ ಅರಿವು ಮಾಹಿತಿ ನೀಡುವ ಮೂಲಕ ನದಿ ಮಾಲಿನ್ಯ ತಪ್ಪಿಸಲು ಕ್ರಮ ಕೈಗೊಳ್ಳುವಲ್ಲಿ ಬಹುತೇಕ ಯಶಸ್ಸು ಕಾಣುತ್ತಿರುವ ನಡುವೆ ಇದೀಗ ಪ್ರವಾಸಿಗರು, ನಿರಾಶ್ರಿತರು ಕಾವೇರಿ ನದಿಯನ್ನು ತಮಗಿಷ್ಟ ಬಂದಂತೆ ತಮ್ಮ ನಿತ್ಯ ಕರ್ಮಗಳಿಗೆ ಬಳಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಪಟ್ಟಣ ಗ್ರಾಮಗಳ ಸಂಪೂರ್ಣ ಕಲುಷಿತ ತ್ಯಾಜ್ಯ ನದಿ ಒಡಲು ಸೇರುತ್ತಿರುವುದು ಒಂದೆಡೆಯಾದರೆ , ಇನ್ನೊಂದೆಡೆ ಈ ರೀತಿಯ ನಿತ್ಯ ಚಟುವಟಿಕೆಗಳು ನದಿಯ ನೀರಿನ ಗುಣಮಟ್ಟ ಸಂಪೂರ್ಣ ಕೆಡಿಸುತ್ತಿರುವುದು ಇತ್ತೀಚಿನ ಬೆಳವಣಿಗೆಯಾಗಿದೆ.

ಕುಶಾಲನಗರ ಪಟ್ಟಣದಲ್ಲಿ ಬಹುತೇಕ ಉತ್ತರ ಭಾರತದ ಕಾರ್ಮಿಕರು ನೆಲೆ ಕಂಡಿದ್ದು ಇವರು ತಮ್ಮ ಪ್ರಾತಃಕಾಲದ ನಿತ್ಯ ಕರ್ಮಗಳಿಗೆ ನದಿಯನ್ನೇ ಅವಲಂಬಿಸುತ್ತಿರುವುದು ಇದಕ್ಕೆ ಕಡಿವಾಣ ಹಾಕುವಲ್ಲಿ ಸ್ಥಳೀಯ ಆಡಳಿತ ಸಂಪೂರ್ಣ ವಿಫಲವಾಗಿದೆ.

ಜಿಲ್ಲೆಗೆ ಆಗಮಿಸುವ ಕೆಲವು ಪ್ರವಾಸಿಗರ ದಂಡು ಬೆಳಗ್ಗಿನ ಜಾವ ನದಿಯುದ್ದಕ್ಕೂ ಚೆಂಬು ಹಿಡಿದುಕೊಂಡು ಓಡಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ಪೂಜಾ ತ್ಯಾಜ್ಯವೂ ನದಿಗೆ: ಬಹುತೇಕ ಪೂಜಾ ತ್ಯಾಜ್ಯಗಳು ಕೂಡ ಸಂಪೂರ್ಣ ನದಿ ಪಾಲಾಗುತ್ತಿವೆ. ಮನೆಯಲ್ಲಿ ಪೂಜೆ ಪುನಸ್ಕಾರಗಳು ನಡೆದರೆ ಅದರ ಉಳಿದ ಎಲ್ಲಾ ತ್ಯಾಜ್ಯಗಳನ್ನು ಕುಶಾಲನಗರ ಕೊಪ್ಪ ಗಡಿಭಾಗದ ಸೇತುವೆ ಮೇಲ್ಭಾಗದಿಂದ ನದಿಗೆ ಎಸೆಯುತ್ತಿರುವುದು, ಇದರಿಂದ ನದಿ ಒಡಲಿನಲ್ಲಿ ತ್ಯಾಜ್ಯಗಳು ಸೇರಿ ಹರಿಯುವ ನೀರು ಸಂಪೂರ್ಣ ಕಲುಷಿತಗೊಳ್ಳಲು ಕಾರಣವಾಗುತ್ತಿದೆ.

ಇದೀಗ ಬೇಸಿಗೆ ಅವಧಿಯಲ್ಲಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಬಹುತೇಕ ಕ್ಷೀಣಗೊಂಡಿದ್ದು ಈ ಕಲುಷಿತ ತ್ಯಾಜ್ಯಗಳು ಇನ್ನಷ್ಟು ಸಮಸ್ಯೆಗೆ ಕಾರಣವಾಗುತ್ತಿವೆ.

ಕೆಲವು ಜ್ಯೋತಿಷ್ಯರು ಮಾಡುವ ಮಾಟ ಮಂತ್ರಗಳ ತ್ಯಾಜ್ಯಗಳು ಕೂಡ ನದಿಯ ನೀರನ್ನೇ ಸೇರುತ್ತಿದ್ದು ಇದು ಕೂಡ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ. 

ಪಟ್ಟಣ ಗ್ರಾಮಗಳ ವಾಹನಗಳ ಸರ್ವಿಸ್ ಸ್ಟೇಷನ್ ಗಳಿಂದ ಹೊರ ಸೂಸುವ ಅಪಾಯಕಾರಿ ತ್ಯಾಜ್ಯಗಳು ಕೂಡ ನದಿ ಒಡಲಿಗೆ ಸೇರುತ್ತವೆ. ನದಿ ತಟಗಳಲ್ಲಿರುವ ಶುಂಠಿ ವಾಷಿಂಗ್ ಮಷೀನ್ ಗಳಿಂದ ಹೊರಬರುವ ಲಕ್ಷಾಂತರ ಲೀಟರ್ ಪ್ರಮಾಣದ ಕಲುಷಿತ ರಾಸಾಯನಿಕ ತ್ಯಾಜ್ಯ ಕೂಡ ನದಿಗೆ ಹರಿಯುತ್ತಿದೆ.

ಕುಶಾಲನಗರ ಪಟ್ಟಣ ಬಯಲು ಮುಕ್ತ ಶೌಚ ಪ್ರದೇಶವಾಗಿರುವ ಬಗ್ಗೆ ಪುರಸಭೆ ಅಲ್ಲಲ್ಲಿ ಫಲಕಗಳನ್ನು ಹಾಕಿದ್ದು ಆದರೆ ಈ ಸೂಚನೆಗಳು ಕೇವಲ ಫಲಕಕ್ಕೆ ಸೀಮಿತವಾಗಿದ್ದು, ಉಲ್ಲಂಘಿಸುತ್ತಿರುವುದೇ ಎಲ್ಲಾ ಅವಾಂತರಕ್ಕೆ ಕಾರಣವಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಕುಶಾಲನಗರ ಪುರಸಭೆ ಮುಖ್ಯ ಅಧಿಕಾರಿ ಕೃಷ್ಣ ಪ್ರಸಾದ್, ನದಿಗೆ ಕಲುಷಿತ ತ್ಯಾಜ್ಯ ಹರಿಸುತ್ತಿರುವ ಕೆಲವು ವಾಣಿಜ್ಯ ಕಟ್ಟಡಗಳ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ನದಿ ತಟವನ್ನು ಬಯಲು ಶೌಚಾಲಯನ್ನಾಗಿ ಬಳಸುವ ಜನರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ನದಿ ತಟಗಳಲ್ಲಿ ಪ್ರವಾಸಿಗರು ನಿತ್ಯ ಕರ್ಮಗಳನ್ನು ಮಾಡುತ್ತಿರುವ ಬಗ್ಗೆ ಗಮನಿಸಿದ ನದಿ ಸ್ವಚ್ಛತಾ ಅಭಿಯಾನದ ಪ್ರಮುಖರು ಹಲವು ಸಾರಿ ಎಚ್ಚರಿಕೆ ನೀಡಿದರು ಯಾವುದೇ ರೀತಿಯ ಸ್ಪಂದನೆ ದೊರಕದ ಹಿನ್ನೆಲೆಯಲ್ಲಿ ಪುರಸಭೆ ಅಧಿಕಾರಿಗಳಿಗೆ ದೂರು ನೀಡಿದ್ದು ಇಂತಹ ಚಟುವಟಿಕೆ ನಡೆದಲ್ಲಿ ತಕ್ಷಣ ಕ್ರಮ ಕೈಗೊಂಡು ನದಿ ನೀರು ಕಲುಷಿತಗೋಳಿಸುತ್ತಿರುವ ಚಟುವಟಿಕೆಗಳಿಗೆ ಕಡಿವಾಣ ಹಾಕಲಾಗುವುದು ಎಂದು ಭರವಸೆ ನೀಡಿದ್ದಾರೆ.

ರಾಜ್ಯದಿಂದ ಶೈಕ್ಷಣಿಕ ಪ್ರವಾಸಕ್ಕೆಂದು ಕೊಡಗು ಜಿಲ್ಲೆ ಕಡೆಗೆ ಆಗಮಿಸುವ ವಿದ್ಯಾರ್ಥಿಗಳು ಕೂಡ ನದಿಯನ್ನು ತಮ್ಮ ನಿತ್ಯ ಕರ್ಮಗಳಿಗೆ ಬಳಸುವ ಪರಿಸ್ಥಿತಿ ನಿತ್ಯ ಎದುರಾಗುತ್ತಿರುವುದು ಇದು ಕೂಡ ನದಿ ಕಲುಷಿತಗೊಳಲು ಪ್ರಮುಖ ಪಾತ್ರ ವಹಿಸುತ್ತಿದೆ.

 ಸರ್ಕಾರಿ ಸಾರಿಗೆ ಬಸ್ಸುಗಳಲ್ಲಿ ಕೊಡಗು ಜಿಲ್ಲೆಗೆ ಪ್ರವಾಸ ಕೈಗೊಳ್ಳುವ ವಿದ್ಯಾರ್ಥಿಗಳ ಶಿಕ್ಷಕರ ತಂಡ ಕುಶಾಲನಗರ ಕೊಪ್ಪ ಗಡಿಭಾಗದಲ್ಲಿ ಕಾವೇರಿ ನದಿಯನ್ನು ತಮ್ಮ ವಾಶ್ರೂಮ್ ಎಂಬಂತೆ ಬಳಸುತ್ತಿದ್ದಾರೆ. 

ಇದನ್ನು ತಪ್ಪಿಸಲು ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಕಾವೇರಿ ನದಿ ಸ್ವಚ್ಛತಾ ಅಭಿಯಾನದ ಪ್ರಮುಖರಾದ ಮಂಡೆಪಂಡ ಬೋಸ್ ಮೊಣ್ಣಪ್ಪ ಕನ್ನಡಪ್ರಭ ಮೂಲಕ ಕೋರಿದ್ದಾರೆ.

ನದಿಗೆ ಕಲುಷಿತ ತ್ಯಾಜ್ಯ ಹರಿಸುತ್ತಿರುವ ಕೆಲವು ವಾಣಿಜ್ಯ ಕಟ್ಟಡಗಳ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ನದಿ ತಟವನ್ನು ಬಯಲು ಶೌಚಾಲಯನ್ನಾಗಿ ಬಳಸುವ ಜನರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು.-ಕೃಷ್ಣಪ್ರಸಾದ್‌, ಕುಶಾಲನಗರ ಪುರಸಭೆ ಮುಖ್ಯಾಧಿಕಾರಿ.

ರಾಜ್ಯದಿಂದ ಶೈಕ್ಷಣಿಕ ಪ್ರವಾಸಕ್ಕೆಂದು ಕೊಡಗು ಜಿಲ್ಲೆ ಕಡೆಗೆ ಆಗಮಿಸುವ ವಿದ್ಯಾರ್ಥಿಗಳು ಕೂಡ ನದಿಯನ್ನು ತಮ್ಮ ನಿತ್ಯ ಕರ್ಮಗಳಿಗೆ ಬಳಸುವ ಪರಿಸ್ಥಿತಿ ನಿತ್ಯ ಎದುರಾಗುತ್ತಿರುವುದು ಇದು ಕೂಡ ನದಿ ಕಲುಷಿತಗೊಳಲು ಪ್ರಮುಖ ಪಾತ್ರ ವಹಿಸುತ್ತಿದೆ. ಇದನ್ನು ತಪ್ಪಿಸಲು ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. - ಮಂಡೆಪಂಡ ಬೋಸ್‌ ಮೊಣ್ಣಪ್ಪ, ಕಾವೇರಿ ನದಿ ಸ್ವಚ್ಛತಾ ಅಭಿಯಾನ ಪ್ರಮುಖ.