ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವವು ಈ ಬಾರಿ ಅ.17 ರಂದು ರಾತ್ರಿ 7.50ಕ್ಕೆ ಸಲ್ಲುವ ಮೇಷ ಲಗ್ನದಲ್ಲಿ ಸಂಭವಿಸಲಿದ್ದು, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಸೂಚಿಸಿದ್ದಾರೆ.

ಮಡಿಕೇರಿ: ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವವು ಈ ಬಾರಿ ಅ.17 ರಂದು ರಾತ್ರಿ 7.50ಕ್ಕೆ ಸಲ್ಲುವ ಮೇಷ ಲಗ್ನದಲ್ಲಿ ಸಂಭವಿಸಲಿದ್ದು, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಸೂಚಿಸಿದ್ದಾರೆ. ಭಾಗಮಂಡಲದ ಭಗಂಡೇಶ್ವರ ದೇವಾಲಯದ ಹಳೇ ಮುಡಿ ಕಟ್ಟಡದಲ್ಲಿ ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ ಸಂಬಂಧ ಬುಧವಾರ ನಡೆದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಾಡಿನ ಜೀವನದಿ ಕಾವೇರಿ ಉಗಮ ಸ್ಥಾನ ತಲಕಾವೇರಿಯ ಪುಣ್ಯ ಕ್ಷೇತ್ರದಲ್ಲಿ ಶ್ರದ್ಧಾಭಕ್ತಿಯಿಂದ ಪವಿತ್ರ ತೀರ್ಥೋದ್ಭವ ಕಣ್ತುಂಬಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುವುದರಿಂದ ನೂಕು ನುಗ್ಗಲು ಉಂಟಾಗದಂತೆ ಬ್ಯಾರಿಕೇಡ್ ಅಳವಡಿಸಬೇಕು. ಭಾಗಮಂಡಲದಿಂದ ತಲಕಾವೇರಿವರೆಗೆ ಬೆಳಕು ವ್ಯವಸ್ಥೆ ಮಾಡುವುದು, ರಸ್ತೆ ಬದಿ ಗಿಡ ಗಂಟೆಗಳನ್ನು ಕಡಿಯುವುದು, ಭಾಗಮಂಡಲ-ಕರಿಕೆ, ಭಾಗಮಂಡಲ-ನಾಪೋಕ್ಲು, ಭಾಗಮಂಡಲ-ಮಡಿಕೇರಿ, ಭಾಗಮಂಡಲ-ಚೆಯ್ಯಂಡಾಣೆ ಮಾರ್ಗದ ರಸ್ತೆ ಬದಿಯ ಗಿಡಗಳನ್ನು ಕಡಿಯುವಂತೆ ನಿರ್ದೇಶನ ನೀಡಿದರು.

ಕೆಎಸ್‍ಆರ್‍ಟಿಸಿ ಇಲಾಖೆಯಿಂದ ಹೆಚ್ಚಿನ ಬಸ್‍ಗಳ ವ್ಯವಸ್ಥೆ ಮಾಡುವುದು ಹಾಗೂ ಅಕ್ಟೋಬರ್ 17 ಮತ್ತು 18 ರಂದು ಭಾಗಮಂಡಲದಿಂದ ತಲಕಾವೇರಿಗೆ, ತಲಕಾವೇರಿಯಿಂದ ಭಾಗಮಂಡಲಕ್ಕೆ ಉಚಿತ ಸಾರಿಗೆ ಸಂಪರ್ಕ ಕಲ್ಪಿಸುವಂತೆ ಎ.ಎಸ್.ಪೊನ್ನಣ್ಣ ತಿಳಿಸಿದರು.

ತುಲಾ ಸಂಕ್ರಮಣ ಜಾತ್ರಾ ಪ್ರಯುಕ್ತ ಭಕ್ತಾದಿಗಳು ಭಾಗಮಂಡಲದಿಂದ ತಲಕಾವೇರಿಯವರೆಗೆ ಪಾದಯಾತ್ರೆ ಕೈಗೊಳ್ಳುವುದರಿಂದ ಒಂದು ಬದಿ ವಾಹನಗಳ ಸಂಚಾರಕ್ಕೆ ಅವಕಾಶ ಮಾಡುವಂತೆ ನಿರ್ದೇಶನ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಅಗತ್ಯ ಆರೋಗ್ಯ ಸೇವೆ ವಾಹನ, ತಜ್ಜ ವೈದ್ಯರು ಮತ್ತು ಶುಶ್ರೂಷಕರನ್ನು ನಿಯೋಜನೆ ಮಾಡುವಂತೆ ಎ.ಎಸ್.ಪೊನ್ನಣ್ಣ ಸೂಚಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಕಾಡೆಮಿ ಹಾಗೂ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಕಾವೇರಿ ಮಾತೆ ಕುರಿತು ಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮ ಏರ್ಪಡಿಸುವಂತೆ ಶಾಸಕರಾದ ಎ,ಎಸ್.ಪೊನ್ನಣ್ಣ ತಿಳಿಸಿದರು.

ಅಗ್ನಿಶಾಮಕ ಮತ್ತು ತುರ್ತು ಸೇವೆ ಇಲಾಖೆಯಿಂದ ಜಾತ್ರಾ ಸಂದರ್ಭದಲ್ಲಿ ಎಚ್ಚರ ಇರಬೇಕು. ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ನಿಯೋಜಿಸುವುದು ಮತ್ತಿತರ ಅಗತ್ಯ ಕ್ರಮವಹಿಸುಂತೆ ನಿರ್ದೇಶನ ನೀಡಿದರು.

ವಿಧಾನಸಭೆಯ ಮಾಜಿ ಸಭಾಧ್ಯಕ್ಷರಾದ ಕೆ.ಜಿ.ಬೋಪಯ್ಯ ಅವರು ಮಾತನಾಡಿ ಪವಿತ್ರ ತೀರ್ಥೋದ್ಭವ ಸಂದರ್ಭದಲ್ಲಿ ಭಕ್ತಾಧಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಗಮನಹರಿಸಬೇಕು ಎಂದರು.

ದೇವಾಲಯದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರಾದ ಬಿ.ಎಸ್.ತಮ್ಮಯ್ಯ ಮಾತನಾಡಿ ಕೊಡಗು ಏಕೀಕರಣ ರಂಗದಿಂದ ಪ್ರತಿ ವರ್ಷದಂತೆ ಈ ಬಾರಿಯೂ ಅನ್ನಸಂತರ್ಪಣೆ ಮಾಡಲಾಗುತ್ತಿದೆ ಎಂದರು.

ಹೊಸೂರು ಸತೀಶ್ ಕುಮಾರ್ ಅವರು ಮಾತನಾಡಿ ಈ ಬಾರಿ ಶನಿವಾರ ರಾತ್ರಿ ಪವಿತ್ರ ತೀರ್ಥೋದ್ಭವ ಸಂಭವಿಸುವುದರಿಂದ, ಹಾಗೆಯೇ ಭಾನುವಾರ ರಜೆ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಲಿದ್ದಾರೆ. ಸೂಕ್ತ ಪೊಲೀಸ್ ಬಂದೋ ಬಸ್ತ್ ಮಾಡಬೇಕು ಎಂದರು.

ಪ್ರಮುಖರಾದ ಆನಂದ್ ಕರಂದ್ಲಾಜೆ ಮಾತನಾಡಿ ಭಾಗಮಂಡಲಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಗಳನ್ನು ಸರಿಪಡಿಸುವಂತಾಗಬೇಕು ಎಂದರು.

ತಕ್ಕ ಮುಖ್ಯಸ್ಥರಾದ ಕೋಡಿ ಮೋಟಯ್ಯ, ಪ್ರಮುಖರಾದ ಕುಶ್ವಂತ್ ಕೋಳಿಬೈಲು, ಅಖಿಲ ಕೊಡವ ಸಮಾಜದ ಅಧ್ಯಕ್ಷರಾದ ಪರದಂಡ ಸುಬ್ರಮಣಿ ಕಾವೇರಪ್ಪ, ಚೆಯ್ಯಂಡ ಸತ್ಯ, ಸುನಿಲ್ ಪತ್ರವೋ, ಪ್ರಮೋದ್ ಮಾತನಾಡಿದರು.

‌‌ ಎಂ.ಬಿ.ದೇವಯ್ಯ ಮಾತನಾಡಿ ಭಕ್ತಾದಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಗಮನಹರಿಸಬೇಕು ಎಂದು ಕೋರಿದರು.

‌‌‌ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಅಜ್ಜಿನಿಕಂಡ ಮಹೇಶ್ ನಾಚಯ್ಯ ಮಾತನಾಡಿ ತಾಯಿ ಕಾವೇರಿ ಮಾತೆ ಕುರಿತು ಗೀತ ಗಾಯನ ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದರು.

ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಮಾತನಾಡಿ ಜಾತ್ರೆಗೆ ಜಿಲ್ಲಾಡಳಿತ ವತಿಯಿಂದ ಅಗತ್ಯ ತಯಾರಿ ಮಾಡಿಕೊಳ್ಳಲಾಗುವುದು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಮಾತನಾಡಿ ಸೂಕ್ತ ಪೊಲೀಸ್ ಬಂದೋ ಬಸ್ತ್ ಮಾಡಲಾಗುವುದು ಎಂದರು.ಹೆಚ್ಚುವರಿ ಬಸ್‌: ‌ಕೆಎಸ್‍ಆರ್‍ಟಿಸಿ ಮಡಿಕೇರಿ ಘಟಕ ವ್ಯವಸ್ಥಾಪಕರು ಮಾತನಾಡಿ ಕಳೆದ ಬಾರಿ 25 ಬಸ್‍ಗಳನ್ನು ನಿಯೋಜಿಸಲಾಗಿತ್ತು, ಈ ಬಾರಿಯು 25 ಕ್ಕೂ ಹೆಚ್ಚು ಬಸ್‍ಗಳನ್ನು ಭಾಗಮಂಡಲದಿಂದ ತಲಕಾವೇರಿಗೆ. ತಲಕಾವೇರಿಯಿಂದ ಭಾಗಮಂಡಲಕ್ಕೆ ನಿಯೋಜಿಸಲಾಗುವುದು ಎಂದು ತಿಳಿಸಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್ ಅವರು ಮಾತನಾಡಿ ರಸ್ತೆ ಬದಿ ಗಿಡಗಂಟೆ ಕಡಿಯಲು ಅವಕಾಶ ಮಾಡಲಾಗುವುದು ಎಂದರು. ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಪ್ರಭು ಮತ್ತು ಗಿರೀಶ್ ಅವರು ಕಳೆದ ಬಾರಿಯಂತೆ ಈ ಬಾರಿಯು ರಸ್ತೆ ಗುಂಡಿ ಮುಚ್ಚಲಾಗುವುದು ಎಂದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ಕುಮಾರ್ಆಂ ಬ್ಯುಲೆನ್ಸ್ ಸೇವೆ, ವೈದ್ಯರು ಮತ್ತು ಶುಶ್ರೂಷಕರನ್ನು ನಿಯೋಜನೆ ಮಾಡಲಾಗುವುದು ಎಂದರು. ಭಾಗಮಂಡಲ ಪಿಡಿಒ ನಂದ ಅವರು ಮಾತನಾಡಿ ಸ್ವಚ್ಛತೆಗೆ ಒತ್ತು ನೀಡಲಾಗುವುದು ಎಂದರು. ವಿಧಾನ ಪರಿಷತ್ ಮಾಜಿ ಸದಸ್ಯರಾದ ವೀಣಾ ಅಚ್ಚಯ್ಯ, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ, ತಹಸೀಲ್ದಾರ್ ಶ್ರೀಧರ, ತಾ.ಪಂ ಇಒ ಶೇಖರ್, ಭಾಗಮಂಡಲ ದೇವಾಲಯದ ತಕ್ಕ ಮುಖ್ಯಸ್ಥರಾದ ಬಳ್ಳಡ್ಕಿ ಅಪ್ಪಾಜಿ, ಡಿವೈಎಸ್ಪಿ ಸೂರಜ್, ದೇವಾಲಯ ಇಒ ಚಂದ್ರಶೇಖರ್, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಗ್ರಾಮಸ್ಥರು ಸಭೆಯಲ್ಲಿ ಪಾಲ್ಗೊಂಡು ಹಲವು ಸಲಹೆ ನೀಡಿದರು.