ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್ ವತಿಯಿಂದ ಸುವರ್ಣನ್ಯೂಸ್ ಮತ್ತು ಕನ್ನಡಪ್ರಭ ಸಹಯೋಗದೊಂದಿಗೆ ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕಾವೇರಿ ಉತ್ಸವ, ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ನೆನಪೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಸಮಾರಂಭ ಎರಡನೇ ದಿನವೂ ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು.ಕಾರ್ಯಕ್ರಮದಲ್ಲಿ ಆಯೋಜನೆಗೊಂಡಿದ್ದ ವಿಭಿನ್ನ ಮಾದರಿಯ ತಿಂಡಿ-ತಿನಿಸುಗಳ ಆಹಾರ ಮೇಳ ಜನರನ್ನು ಬಹುವಾಗಿ ಸೆಳೆಯಿತು. ಹಾಡು, ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದಿದ್ದ ಸಾವಿರಾರು ಪ್ರೇಕ್ಷಕರನ್ನು ರಂಜಿಸಿದವು. ಮಕ್ಕಳ ರಂಜನೆಗೆ ಪೂರಕವಾದ ಆಟಗಳು ಮಕ್ಕಳ ಮನರಂಜಿಸಿದವು.
ಮಕ್ಕಳಿಂದ ದೊಡ್ಡವರೆಗೂ ಇಷ್ಟವಾಗುವ ಅಪರೂಪದ ತಿಂಡಿ-ತಿನಿಸುಗಳನ್ನು ತಿನ್ನುತ್ತಾ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಾ ಮಜವಾಗಿ ಕಾಲ ಕಳೆದರು. ಕುಟುಂಬದವರು, ಸ್ನೇಹಿತರೊಂದಿಗೆ ಮಂಡ್ಯ ಸಂಭ್ರಮಕ್ಕೆ ಆಗಮಿಸಿದ್ದವರು ಜಾಲಿ ಮೂಡ್‌ನಲ್ಲಿದ್ದರು. ತಮಗಿಷ್ಟವೆನಿಸಿದ ಫ್ಯಾಷನ್ ಬಟ್ಟೆಗಳ ಖರೀದಿಗೂ ಯುವತಿಯರು ಸಮಯವನ್ನು ಮೀಸಲಿಟ್ಟಿದ್ದರು. ಸಂಜೆಯ ತಣ್ಣನೆಯ ವಾತಾವರಣದೊಳಗೆ ಬೋಂಡಾ, ಬಜ್ಜಿ, ಪಾವ್‌ಬಜ್ಜಿ, ಪಾನಿಪೂರಿ, ಗಿರ್‌ಮಿಟ್, ವಿವಿಧ ಕಂಪನಿಗಳ ಪುಳಿಯೋಗರೆ, ಮಸಾಲೆ ಉತ್ಪನ್ನಗಳು, ನಿಂಬುಸೋಡಾ, ಚಾಕೋಲೇಟ್, ವಿವಿಧ ಮಾದರಿಯ ಹಲ್ವಾಗಳು, ಪಾಪಡ್‌ಗಳ ರುಚಿಯನ್ನು ಸವಿಯುತ್ತಲೇ ಸಂತಸಪಟ್ಟರು.ಮಕ್ಕಳಿಗಾಗಿ ವೇಷಭೂಷಣ ಸ್ಪರ್ಧೆ, ಮಹಿಳೆಯರಿಗೆ ಅಡುಗೆ ಮಹಾರಾಣಿ, ಓಪನ್ ಸ್‌ಟೇಜ್, ರಂಗೋಲಿ ಸ್ಪರ್ಧೆ, ಮಿನಿಟ್ ಟು ವಿನ್ ಇಟ್ ಗೇಮ್ಸಸ್, ಕಿಡ್ಸ್, ಫ್ಯಾಮಿಲಿ ಫ್ಯಾಷನ್ ಷೋ ಸ್ಪರ್ಧೆಗಳು ಎಲ್ಲರ ಗಮನಸೆಳೆದವು. ಡ್ಯೂಯಲ್ ವಾಯ್ಸ್ ಸಿಂಗರ್ ಮಂಜುಹಾನ್‌ರವರಿಂದ ಸಂಗೀತ ಸಂಜೆ, ದಚ್ಚು ದಿವು ಇನ್ಸ್‌ಸ್ಟಾಗ್ರಾಮ್ ಸೆನ್ಸೆಷನ್, ಮಂಡ್ಯ ಪ್‌ರತಿಭೆಗಳಿಂದ ಮೂಡಿಬಂದ ನೃತ್ಯ ಹಾಗೂ ಮನರಂಜನಾ ಕಾರ್ಯಕ್ರಮಗಳು ನೆರೆದಿದ್ದ ಪ್ರೇಕ್ಷಕರ ಮನಸೂರೆಗೊಳ್ಳುವಂತೆ ಮಾಡಿತು..
ನೆರೆದಿದ್ದ ಪ್ರೇಕ್ಷಕರು ಇಷ್ಟಪಡುವ ಹಾಡುಗಳನ್ನು ಹಾಡುವುದರೊಂದಿಗೆ ಅವರನ್ನು ಸಂತಸಪಡಿಸಿದರು. ಮಕ್ಕಳಿಗೆ ಇಷ್ಟವೆನಿಸುವ ಹಾಡುಗಳಿಗೂ ಹಾಡುಗಾರರು ದನಿಯಾಗಿ ಅವರನ್ನೂ ಖುಷಿಪಡಿಸಿದರು. ರಾ..ರಕ್ಕಮ್ಮ, ಮಂಡ್ಯದ ಗಂಡು ಹಾಡುಗಳು ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದವು.ನಾಲ್ವಡಿ ಕೊಡುಗೆಗಳು ಅಜರಾಮರ: ಶಶಿಕುಮಾರ್ಕನ್ನಡಪ್ರಭ ವಾರ್ತೆ, ಮಂಡ್ಯ
ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆಗಳು ಸೂರ್ಯ-ಚಂದ್ರರಿರುವವರೆಗೂ ಶಾಶ್ವತವಾಗಿರುತ್ತವೆ ಎಂದು ನಟ ಶಶಿಕುಮಾರ್ ಹೇಳಿದರು.ನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್ ವತಿಯಿಂದ ಸುವರ್ಣನ್ಯೂಸ್ ಮತ್ತು ಕನ್ನಡಪ್ರಭ ಸಹಯೋಗದೊಂದಿಗೆ ಆಯೋಜಿಸಿದ್ದ ಮಂಡ್ಯ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾಲ್ವಡಿ ಅವರ ಸಾಧನೆಗಳಲ್ಲಿ ಶೇ.೫ರಷ್ಟು ಸಾಧನೆಗಳನ್ನು ಮಾಡುವುದಕ್ಕೆ ಸರ್ಕಾರಗಳಿಂದ ಸಾಧ್ಯವಾಗದಿರುವುದು ನಾಚಿಕೆಗೇಡಿನ ಸಂಗತಿ. ರಾಜಕಾರಣ ಹೊಲಸೆದ್ದು ಹಾಳಾಗಿಹೋಗಿದೆ. ಜನರು ರಾಜಕಾರಣಿಗಳ ಬಗ್ಗೆ ನಂಬಿಕೆಯನ್ನೇ ಕಳೆದುಕೊಂಡಿದ್ದಾರೆ ಎಂದು ಬೇಸರದಿಂದ ನುಡಿದರು.
ಏಷ್ಯಾಕ್ಕೆ ಮೊದಲ ಬಾರಿಗೆ ವಿದ್ಯುತ್ ನೀಡಿದ ಹೆಗ್ಗಳಿಕೆ ನಮ್ಮ ನಾಲ್ವಡಿಯವರದ್ದು. ಆದರೆ, ಇಂದಿಗೂ ವಿದ್ಯುತ್ ಬೆಳಕನ್ನೇ ಕಾಣದ ಅದೆಷ್ಟೋ ಗ್ರಾಮಗಳು ಕತ್ತಲಲ್ಲಿ ಮುಳುಗಿರುವುದನ್ನು ನೋಡುತ್ತಿದ್ದೇವೆ. ಇದು ಸರ್ಕಾರಗಳಿಗೆ ಜನರ ಬಗ್ಗೆ ಎಂತಹ ಬದ್ಧತೆ ಇದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.ನಾಲ್ವಡಿ ಅವರ ಕಾಲದಲ್ಲಿ ಸಣ್ಣ ಪ್ರಮಾಣದ ಬಜೆಟ್ ಇಟ್ಟುಕೊಂಡು ವಿಶ್ವವೇ ನಿಬ್ಬೆರಗಾಗುವ ಅಸಾಧಾರಣ ಕೊಡುಗೆಗಳನ್ನು ನೀಡಿದರು. ಇವತ್ತ ಲಕ್ಷ ಲಕ್ಷ ಕೋಟಿಗಳ ಬಜೆಟ್ ಮಂಡನೆಯಾಗುತ್ತಿದ್ದರೂ ಶೇ.೩೦ರಷ್ಟು ಅಭಿವೃದ್ಧಿಯೂ ಆಗುತ್ತಿಲ್ಲ. ರಾಜ್ಯದಲ್ಲಿ ಮೈಸೂರು ಮಹಾರಾಜರ ಕಾಲದಲ್ಲಿ ಕಂಡಂತಹ ಮಹೋನ್ನತ ಕೊಡುಗೆಗಳನ್ನು ಬಿಟ್ಟರೆ ಮಹತ್ವದ ಅಭಿವೃದ್ಧಿಯನ್ನು ಕಾಣಲು ಸಾಧ್ಯವಾಗಿಲ್ಲ ಎಂದು ಹೇಳಿದರು.
ನಾನು ಚಿತ್ರದುರ್ಗ ಸಂಸದನಾಗಿದ್ದಾಗ ಸಾಕಷ್ಟು ಹಳ್ಳಿಗಳಿಗೆ ವಿದ್ಯುತ್ ಇರಲೇ ಇಲ್ಲ. ಅದನ್ನು ನಾನು ಕಣ್ಣಾರೆ ನೋಡಿದ್ದೆ. ಸಂಸದರ ನಿಧಿಯನ್ನು ಬಳಸಿಕೊಂಡು ಬೆಳಕಿನ ಕಾರ್ಯಕ್ರಮದಡಿ ಪ್ರತಿಯೊಂದು ಹಳ್ಳಿಗೂ ವಿದ್ಯುತ್ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದೆ. ಅದು ನನ್ನಿಂದಾದ ಅಲ್ಪಸೇವೆಯಷ್ಟೇ ಎಂದು ತಿಳಿಸಿದರು.ಅಂಬರೀಶ್ ರಾಮನಗರದಲ್ಲಿ ಸ್ಪರ್ಧಿಸಿದ್ದಾಗ ಮತ್ತು ಮಂಡ್ಯದಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದ್ದಾಗ ಚುನಾವಣಾ ಪ್ರಚಾರಕ್ಕೆ ಬಂದಿದ್ದೆ. ಅವರು ಎರಡನೇ ಬಾರಿ ಗೆದ್ದಾಗ ನಾನು ಚಿತ್ರದುರ್ಗದಿಂದ ಸಂಸತ್ ಪ್ರವೇಶಿಸಿದ್ದೆ. ಹಾಗಾಗಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುವುದಕ್ಕೆ ಸಾಧ್ಯವಾಗಲಿಲ್ಲವೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಕ್ಕಳ ತಜ್ಞ ಡಾ.ವಿನಯ್, ಪರಿಸರಪ್ರೇಮಿ ಜಯಶಂಕರ್ ಗೊರವಾಳೆ, ಪೌರ ಕಾರ್ಮಿಕೆ ಸತ್ಯಮ್ಮ, ಪ್ರಗತಿಪರ ರೈತ ಎಂ.ಮಂಜು ಹೆಬ್ಬಕವಾಡಿ ಅವರನ್ನು ಸನ್ಮಾನಿಸಲಾಯಿತು.ಕಾವೇರಿ ಉತ್ಸವದ ಅಧ್ಯಕ್ಷತೆಯನ್ನು ಕಾವೇರಿ ನೀರಾವರಿ ನಿಗಮದ ನಿವೃತ್ತ ವ್ಯವಸ್ಥಾಪಕ ಡಾ.ಟಿ.ತಿಮ್ಮೇಗೌಡ ವಹಿಸಿದ್ದರು. ನಟ ಆದಿತ್ಯ ಶಶಿಕುಮಾರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮಾ.ಹರೀಶ್, ಸಾಹಿತ್ಯ ಸಮ್ಮೇಳನದ ಸಂಚಾಲಕಿ ಮೀರಾ ಶಿವಲಿಂಗಯ್ಯ, ಜಿಲ್ಲಾ ಕಾಂಗ್ರೆಸ್ ಮಹಿಳಾಧ್ಯಕ್ಷೆ ಅಂಜನಾ, ತಗ್ಗಹಳ್ಳಿ ವೆಂಕಟೇಶ್, ಎಚ್.ಎನ್.ಯೋಗೇಶ್ ಇತರರಿದ್ದರು.