ಸಾರಾಂಶ
ಕನ್ನಡಪ್ರಭ ವಾರ್ತೆ ಬ್ರಹ್ಮಾವರ
ಇಂದಿನ ಸಾಹಿತ್ಯದಲ್ಲಿ ಕವಿತೆ ಜಾಗೃತವಾಗಿದೆ, ಸಂವೇದನಾಶೀಲವಾಗಿದೆ. ಜನರನ್ನು ಎಚ್ಚರಿಸುವ ಕೆಲಸ ಮಾಡುತ್ತಿದೆ ಎಂದು ದೆಹಲಿಯ ಸಾಹಿತ್ಯ ಅಕಾಡೆಮಿ ಸದಸ್ಯ ಡಾ. ಪೂರ್ಣಾನಂದ ಚಾರಿ ಹೇಳಿದರು.ಅವರು ಉಡುಪಿಯ ಕವಿತಾ ಟ್ರಸ್ಟ್ ಮತ್ತು ದಿ ಎಕ್ಸ್ ಪ್ರೆಶನ್ಸ್ ತಂಡದ ಸಹಕಾರದಲ್ಲಿ ಇಲ್ಲಿನ ಸಾಸ್ತಾನದ ಆಶಿಯಾನ ಅಂಗಳದಲ್ಲಿ ನೆರವೇರಿಸಿದ ಕವಿತಾ ಫೆಸ್ತ್ 2025 ಇದರ ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಇಂದಿನ ಕೊಂಕಣಿ ಯುವಕವಿಗಳು ಈ ಪರಂಪರೆಯನ್ನು ಪ್ರತಿನಿಧಿಸುತ್ತಿದ್ದಾರೆ. ಕೇವಲ ಮನೋರಂಜನೆಯ ಹಂತದಿಂದ ಅಕಾಡೆಮಿಕ್ ಹಂತಕ್ಕೆ ಕೊಂಕಣಿ ಕವಿತೆ ಏರಿದೆಯಾದರೆ ಅದರ ಹಿಂದೆ ಕವಿತಾ ಟ್ರಸ್ಟ್ ಶ್ರಮವಿದೆ. ಕವಿತಾ ಟ್ರಸ್ಟ್ ಆಯೋಜಿಸುವ ಕವಿತಾ ಫೆಸ್ತ್ ಕೊಂಕಣಿ ಜನರ ಅಸ್ಮಿತೆ ಮತ್ತು ಒಗ್ಗಟ್ಟಿನ ಹಬ್ಬ ಎಂದರು.ಈ ಸಂದರ್ಭ 25, 000 ರು. ನಗದು, ಸನ್ಮಾನ ಪತ್ರ ಹಾಗೂ ಸ್ಮರಣಿಕೆ ಒಳಗೊಂಡ ಮತಾಯಸ್ ಕುಟುಂಬ ಕವಿತಾ ಪುರಸ್ಕಾರವನ್ನು ಕೊಂಕಣಿ ನವಾಯತಿ ಕವಿ ಸಯ್ಯದ್ ಸಮೀವುಲ್ಲಾ ಬರ್ಮಾವರ್ ಇವರಿಗೆ ಹಸ್ತಾಂತರಿಸಿದರು.
ಇದೇ ವೇಳೆ ಸ್ಮಿತಪ್ರಜ್ಞ ಬರೆದ ‘ಸ್ವರ್ಗಾಚಿ ಪಕ್ಷಿ’ ಕೊಂಕಣಿ ಕಾವ್ಯ ಸಂಗ್ರಹ ಲೋಕಾರ್ಪಣೆಗೊಳಿಸಲಾಯಿತು. ವೇದಿಕೆಯಲ್ಲಿದ್ದ ಸಾಸ್ತಾನ ಸಂತ ಆಂತೊನಿ ಇಗರ್ಜಿಯ ಧರ್ಮಗುರು ವಂ ಸುನೀಲ್ ಡಿಸಿಲ್ವಾ ಹಾಗೂ ಕಾಣಕೋಣ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ರೂಪಾ ಚಾರಿ ಶುಭ ಹಾರೈಸಿದರು.ಆಕರ್ಷಕ ಮೆರವಣಿಗೆಯೊಡನೆ ಮುಂಜಾನೆ ಕವಿತಾ ಫೆಸ್ತ್ ಇದರ 19 ನೇ ಆವೃತ್ತಿ ಆರಂಭವಾಯಿತು. ಬಳ್ಳಾರಿ ಧರ್ಮ ಪ್ರಾಂತ್ಯದ ಬಿಷಪ್ ಹೆನ್ರಿ ಡಿಸೋಜ, ಉದ್ಯಮಿ ಹಾಗೂ ದಾನಿ ಜೊಸೆಫ್ ಎಲಿಯಾಸ್ ಮಿನೆಜಸ್, ದಿ ಎಕ್ಸ್‘ಪ್ರೆಶನ್ಸ್ ಅಧ್ಯಕ್ಷ ಪ್ರವೀಣ್ ಕರ್ವಾಲೊ, ಮನೆಯೊಡೆಯರಾದ ಸುಜಾತ ಮತ್ತು ಆಲ್ವಿನ್ ಆಂದ್ರಾದೆ ದಂಪತಿ, ಕವಿತಾ ಟ್ರಸ್ಟ್ ಅಧ್ಯಕ್ಷ ಕಿಶೂ ಬಾರ್ಕೂರು ಮತ್ತು ಕಾರ್ಯದರ್ಶಿ ಎವ್ರೆಲ್ ರೊಡ್ರಿಗಸ್ ಇವರು ಹೂ ಪಕಳೆಗಳನ್ನು ಗಾಳಿಯಲ್ಲಿ ಹಾರಿಸುವ ಮೂಲಕ ವಿಭಿನ್ನವಾಗಿ ಉದ್ಘಾಟಿಸಿದರು. ನಂತರ ಇಡೀ ದಿನ ಕಾವ್ಯದ ಸಂಭ್ರಮ ನಡೆಯಿತು.