ಕವಿತಾಳ ವೀರಪ್ಪನವರ ದೇಶಭಕ್ತಿ, ನಾಡಪ್ರೇಮ ಅಪ್ರತಿಮ

| Published : May 26 2024, 01:32 AM IST

ಕವಿತಾಳ ವೀರಪ್ಪನವರ ದೇಶಭಕ್ತಿ, ನಾಡಪ್ರೇಮ ಅಪ್ರತಿಮ
Share this Article
  • FB
  • TW
  • Linkdin
  • Email

ಸಾರಾಂಶ

ನಿಷ್ಕಾಮ ಕರ್ಮಯೋಗಿಯಾಗಿದ್ದ ವೀರಪ್ಪ ಅವರು ತಾವು ನಂಬಿದ ತತ್ವಗಳೊಂದಿಗೆ ಯಾವತ್ತಿಗೂ ರಾಜಿ ಮಾಡಿಕೊಂಡವರಲ್ಲ. ಅವರ ಜೀವನ ಇತರರಿಗೆ ಸರ್ವಕಾಲಕ್ಕೂ ಆದರ್ಶಪ್ರಾಯ

ನರಗುಂದ: ಕವಿತಾಳ ವೀರಪ್ಪನವರ ದೇಶಭಕ್ತಿ, ನಾಡಪ್ರೇಮ ಅಪ್ರತಿಮವಾದುದು ಎಂದು ಉಪನ್ಯಾಸಕ ಪ್ರೊ. ರಮೇಶ ಐನಾಪುರ ಹೇಳಿದರು.

ಅವರು ತಾಲೂಕಿನ ಭೈರನಹಟ್ಟಿ ಗ್ರಾಮದ ಶ್ರೀ ದೊರೆಸ್ವಾಮಿ ವಿರಕ್ತಮಠದಲ್ಲಿ ಶ್ರೀಗುರು ಬ್ರಹ್ಮಾನಂದ ಶಿವಾನುಭವ ಧರ್ಮಸಂಸ್ಥೆ ಹಾಗೂ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 358ನೇ ಮಾಸಿಕ ಶಿವಾನುಭವ ಹಾಗೂ ಏಕೀಕರಣ ಯೋಧರ ಯಶೋಗಾಥೆ-14 ಕಾರ್ಯಕ್ರಮದಲ್ಲಿ ಕವಿತಾಳ ವೀರಪ್ಪ ಅವರ ಕುರಿತು ಉಪನ್ಯಾಸ ನೀಡಿದರು. ಕವಿತಾಳ ವೀರಪ್ಪ ಸರ್ಕಾರಿ ನೌಕರಿಯಲ್ಲಿದ್ದಾಗಲೆ ಸ್ವಾತಂತ್ರ್ಯ ಚಳವಳಿ ಹಾಗೂ ಏಕೀಕರಣ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಅದರಗುಂಚಿ ಶಂಕರಗೌಡರ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿ ಕರ್ನಾಟಕ ಏಕೀಕಕರಣವಾಗಲೇಬೇಕು ಎಂಬ ಸ್ಪಷ್ಟ ನಿರ್ಧಾರವನ್ನು ವ್ಯಕ್ತಪಡಿಸಿದ್ದ ಅವರು ಕರ್ನಾಟಕ ಏಕೀಕಕರಣದ ರೂವಾರಿಯಾಗಿದ್ದಾರೆ ಎಂದು ಹೇಳಿದರು.

ನಿಷ್ಕಾಮ ಕರ್ಮಯೋಗಿಯಾಗಿದ್ದ ವೀರಪ್ಪ ಅವರು ತಾವು ನಂಬಿದ ತತ್ವಗಳೊಂದಿಗೆ ಯಾವತ್ತಿಗೂ ರಾಜಿ ಮಾಡಿಕೊಂಡವರಲ್ಲ. ಅವರ ಜೀವನ ಇತರರಿಗೆ ಸರ್ವಕಾಲಕ್ಕೂ ಆದರ್ಶಪ್ರಾಯವಾಗಿದೆ. ಬಹುಮುಖ ವ್ಯಕ್ತಿತ್ವದವರಾಗಿದ್ದ ವೀರಪ್ಪ ಕವಿತಾಳ ಅವರು ತಮ್ಮ ಜೀವನದುದ್ದಕ್ಕೂ ಸ್ವಾರ್ಥವನ್ನು ಬಯಸದೆ ಸದಾ ಸಮಾಜಮುಖಿ, ನಿಸ್ವಾರ್ಥ ಸೇವೆ ಮಾಡಿದವರು ಎಂದರು.

ಸಾನ್ನಿಧ್ಯ ವಹಿಸಿದ್ದ ಶಾಂತಲಿಂಗ ಶ್ರೀಗಳು ಮಾತನಾಡಿ, ಸ್ವಾತಂತ್ರ್ಯ ಹೋರಾಟದ ಭಾಷಣಗಳನ್ನು ಕೇಳುತ್ತಾ ಬೆಳೆದ ವೀರಪ್ಪ ಅವರು ಬಾಲ್ಯದಲ್ಲಿಯೆ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು. ಆನಂತರ ಅವರು ಜೈಲುವಾಸ ಅನುಭವಿಸಿದ್ದರು ಎಂದು ಹೇಳಿದರು.

ಕನ್ನಡ ನಾಡು-ನುಡಿ, ನೆಲ-ಜಲದ ಬಗ್ಗೆ ಅಪಾರವಾದ ಅಭಿಮಾನ ಹೊಂದಿದ್ದ ವೀರಪ್ಪ ಅವರು ಕರ್ನಾಟಕ ಏಕೀಕರಣ ಹೋರಾಟದಲ್ಲಿ ತಮ್ಮದೆ ಆದ ಪಾತ್ರ ವಹಿಸಿದ್ದಾರೆ. ಲೋಕ ಶಿಕ್ಷಣ, ಆರೋಗ್ಯ ಹಾಗೂ ಪತ್ರಿಕೋದ್ಯಮದಲ್ಲಿಯೂ ಅವರ ಸೇವೆ ಅನನ್ಯವಾಗಿದೆ. ವಿಚಾರವಾದಿಗಳಾಗಿದ್ದ ಅವರು ತಾವು ಹೇಳಿದ ಮೌಲ್ಯಗಳನ್ನು ವಾಸ್ತವಿಕ ಜೀವನದಲ್ಲಿ ಅಳವಡಿಸಿಕೊಂಡು ಸರಳವಾದ ಬದುಕನ್ನು ಬದುಕಿದವರು. ಮಹಾತ್ಮ ಗಾಂಧೀಜಿ ಕರೆಕೊಟ್ಟಿದ್ದ ಉಪ್ಪಿನ ಸತ್ಯಾಗ್ರಹದಲ್ಲಿ, ಪಾನ ಬಂದ್ ಚಳವಳಿಯಲ್ಲಿ ಮತ್ತು ಕರ್ನಾಟಕ ಏಕೀಕರಣಕ್ಕಾಗಿ 1953ರಲ್ಲಿ ನಡೆದ ಹುಬ್ಬಳ್ಳಿ ಗಲಭೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದರು.

ವಿಶ್ರಾಂತ ಪ್ರಾಚಾರ್ಯ ವಿ.ಸಿ. ಸಾಲಿಮಠ, ಪ್ರಾಧ್ಯಾಪಕರಾದ ಡಾ. ಸಾತ್ವಿಕ್ ಎಸ್., ಲಿಂಗಬಸಯ್ಯ ಸಾಲಿಮಠ, ಮಹಾಂತೇಶ ಸಾಲಿಮಠ, ಶ್ರೀಕಾಂತ ಚಕ್ರಸಾಲಿ ಉಪಸ್ಥಿತರಿದ್ದರು. ಮಹಾಂತೇಶ ಹಿರೇಮಠ ಕಾರ್ಯಕ್ರಮ ನಿರ್ವಹಿಸಿದರು.