ರೈತನ ಮಗಳು ಕವಿತಾ ಕಲಾ ವಿಭಾಗದ ಟಾಪರ್

| Published : Apr 11 2024, 12:50 AM IST

ಸಾರಾಂಶ

ಬಡತನದಲ್ಲೂ ತನ್ನಲ್ಲಿರುವ ಪ್ರತಿಭೆಯನ್ನು ಸದ್ದಿಲ್ಲದೆ ಸಾಧನೆ ಮಾಡಲು ಮುಂದಾದ ಕವಿತಾ ಬಿ.ವಿ. ಎಸ್ಎಸ್ಎಲ್‌ಸಿಯಲ್ಲೂ ಮೊದಲ ಟಾಪರ್ ಆಗಿದ್ದಳು.

ಜಿ.ಸೋಮಶೇಖರ

ಕೊಟ್ಟೂರು: ಕೇವಲ ಎರಡು ಎಕರೆ ಒಣಭೂಮಿಯ ರೈತ ವೀರಬಸಪ್ಪ ಮತ್ತು ಟೈಲರಿಂಗ್ ಮಾಡುತ್ತಾ ಜೀವನವನ್ನು ಕಟ್ಟಿಕೊಳ್ಳುತ್ತಿರುವ ಈ ಕುಟುಂಬದ ಪ್ರತಿಭಾನ್ವಿತೆ ಕವಿತಾ ಈ ಬಾರಿಯ ದ್ವಿತೀಯ ಪಿಯುಸಿ ಕಲಾ ವಿಭಾಗದ ಪ್ರಥಮ ಟಾಪರ್ (600ಕ್ಕೆ 596 ಅಂಕ) ಆಗಿರುವುದು ರಾಜ್ಯದ ಗಮನ ಸೆಳೆದಿದೆ.

ಬಡತನದಲ್ಲೂ ತನ್ನಲ್ಲಿರುವ ಪ್ರತಿಭೆಯನ್ನು ಸದ್ದಿಲ್ಲದೆ ಸಾಧನೆ ಮಾಡಲು ಮುಂದಾದ ಕವಿತಾ ಬಿ.ವಿ. ಎಸ್ಎಸ್ಎಲ್‌ಸಿಯಲ್ಲೂ ಮೊದಲ ಟಾಪರ್ ಆಗಿದ್ದಳು. ಇದನ್ನೇ ಮುಂದುವರಿಸಿಕೊಂಡು ಕುಟುಂಬದಲ್ಲಿನ ಬಡತನವನ್ನು ನೆಪವಾಗಿರಿಸಿಕೊಳ್ಳದೇ ತನ್ಮಯತೆಯಿಂದ ಪ್ರತಿನಿತ್ಯ ೬ ತಾಸುಗಳ ಓದುವ ಹವ್ಯಾಸವನ್ನು ರೂಢಿಸಿಕೊಂಡ ವಿದ್ಯಾರ್ಥಿನಿ ಕವಿತಾ.

ಮೊದಲ ಟಾಪರ್ ಸ್ಥಾನ ಪಡೆಯಬೇಕೆಂಬ ಛಲ ತೊಟ್ಟು ಪ್ರತಿನಿತ್ಯ ಕಾಲೇಜಿನಲ್ಲಿ ಅಧ್ಯಾಪಕರು ಮಾಡುತ್ತಿದ್ದ ಪಾಠ ಪ್ರವಚನ ಕೇಳಿಯೇ ಪುನರ್ ಮನನ ಮಾಡಿಕೊಂಡು ಅಧ್ಯಯನ ಮಾಡುತ್ತಾ ಬಂದಿದ್ದಳು.

ಎಸ್ಎಸ್ಎಲ್‌ಸಿ ಮತ್ತು ಪ್ರಥಮ ಪಿಯುಸಿಯಲ್ಲಿ ಮೊದಲ ಟಾಪರ್ ಆಗಿ ತೇರ್ಗಡೆ ಹೊಂದಿದ ಕವಿತಾ ಇಂದು ಕಾಲೇಜಿನಲ್ಲಿ ಅಲ್ಲಿನ ಆಡಳಿತ ವರ್ಗದವರು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೀಡುವ ಉಚಿತ ಪ್ರವೇಶದ ಅವಕಾಶ ಪಡೆದು ದ್ವಿತೀಯ ಪಿಯುಸಿ ಸೇರ್ಪಡೆಗೊಂಡಳು.

ಪ್ರಾರಂಭಿಕ ಹಂತದಿಂದಲೇ ಓದುವುದನ್ನು ನಿತ್ಯ ಧ್ಯಾನವಾಗಿರಿಸಿಕೊಂಡು ಅದರ ಫಲವಾಗಿ ಇದೀಗ ತನ್ನ ಛಲವನ್ನು ಸಾಧಿಸುವುದಕ್ಕೆ ಪ್ರೇರಣೆ ಮಾಡಿಕೊಂಡಳು. ದಿನನಿತ್ಯ ತಮ್ಮ ಹುಟ್ಟೂರಾದ ಚೌಡಾಪುರದಿಂದ ಕೊಟ್ಟೂರಿಗೆ ಬಸ್ಸಿನಲ್ಲಿ ಇಂದು ಕಾಲೇಜಿಗೆ ಬರುತ್ತಿದ್ದಳು. ಯಾವುದೇ ಬಗೆಯ ಟ್ಯೂಷನ್ ಮತ್ತಿತರರ ಸಹಾಯ ಪಡೆಯದೇ ಕೇವಲ ಕಾಲೇಜಿನಲ್ಲಿ ಅಧ್ಯಾಪಕರು ಮಾಡುತ್ತಿದ್ದ ಪಠ್ಯದ ಅಂದಂದಿನ ವಿಷಯಗಳನ್ನೇ ಮನದಲ್ಲಿ ಇರಿಸಿಕೊಂಡು ಓದುತ್ತಿದ್ದೆ ಎನ್ನುತ್ತಾಳೆ ಕವಿತಾ.

ಕವಿತಾ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ೬೦೦ಕ್ಕೆ ೫೯೬ ಅಂಕಗಳನ್ನು ಪಡೆದಿದ್ದಾರೆ. ಕನ್ನಡ-೧೦೦, ಸಂಸ್ಕೃತ-೯೯, ಐಚ್ಛಿಕ-ಕನ್ನಡ-೯೯, ಇತಿಹಾಸ-೯೮, ರಾಜಕೀಯಶಾಸ್ತ್ರ-೧೦೦, ಶಿಕ್ಷಣಶಾಸ್ತ್ರ- ೧೦೦ ಅಂಕಗಳನ್ನು ಗಳಿಸಿದ್ದಾಳೆ.

ಪ್ರಥಮ ಟಾಪರ್ ಬರುವೆನೆಂಬ ವಿಶ್ವಾಸ ಇರಿಸಿಕೊಂಡು ಅಭ್ಯಾಸ ಮುಂದುವರಿಸಿದೆ. ಕೇವಲ 4 ಅಂಕಗಳು ನನ್ನ ನಿರೀಕ್ಷೆಗಿಂತ ಕಡಿಮೆ ಬಂದಿವೆ. ಮುಂದೆ ಧಾರವಾಡದ ಕಾಲೇಜಿನಲ್ಲಿ ಪದವಿ ಸೇರ್ಪಡೆಯಾಗಿ ಕೆಎಎಸ್ ಮಾಡುವ ಇಚ್ಛೆ ಹೊಂದಿರುವೆ ಎನ್ನುತ್ತಾರೆ ಪ್ರಥಮ ಟಾಪರ್ ಕವಿತಾ ಬಿ.ವಿ. ಕೊಟ್ಟೂರಿನ ಇಂದು ಪಿಯುಸಿ ಕಾಲೇಜು.

ಕವಿತಾ ಖಂಡಿತ ಚೆನ್ನಾಗಿ ಓದಿ ಸಾಧನೆ ಮಾಡುತ್ತಾಳೆಂಬ ಆಶಯ ಹೊಂದಿದ್ದೆವು. ನಮಗಿರುವ ಬಡತನ ಆಕೆಯ ಓದಿಗೆ ಅಡ್ಡಿಯಾಗಬಾರದೆಂಬ ಕಾರಣಕ್ಕೆ ಕವಿತಾಳಿಗೆ ಹೆಚ್ಚಿನ ಮನೆ ಕೆಲಸ ಮಾಡಲು ಬಿಡುತ್ತಿರಲಿಲ್ಲ. ಈಗ ಕವಿತಾ ಪ್ರಥಮ ಟಾಪರ್ ಆಗಿದ್ದಾಳೆ. ನಿಜಕ್ಕೂ ನಮಗೆ ಹೆಮ್ಮೆ ತರಿಸಿದೆ ಎನ್ನುತ್ತಾರೆ ಟಾಪರ್ ಕವಿತಾಳ ತಾಯಿ ವಿಶಾಲಾಕ್ಷಮ್ಮ.